ಈಶ್ವರೀಯ ವಿವಿ ಶಾಖೆಯ ಗೀತಪಾಠ ಶಾಲೆಯ ರಜತ ಮಹೋತ್ಸವ ಸಮಾರಂಭ
ದಾವಣಗೆರೆ, ಮಾ. 2- ಎಲ್ಲಾ ಧರ್ಮಗಳು ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತೇವೆ. ಅಂತಹ ಜ್ಯೋತಿಯು ನಮ್ಮ ಆತ್ಮದ ಜೊತೆ ಅನುಸಂಧಾನ ಹೊಂದಬೇಕಾಗಿದೆ. ಸತ್ಯ ಶರಣರಿಗೆ ನಿತ್ಯವೂ ಶಿವರಾತ್ರಿ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಪ್ರತಿಪಾದಿಸಿದರು.
ಸ್ಥಳೀಯ ಆಂಜನೇಯ ಬಡಾವಣೆ 15 ನೇ ಕ್ರಾಸ್ನಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಗೀತ ಪಾಠ ಶಾಲೆಯ ರಜತ ಮಹೋತ್ಸವ ಹಾಗೂ ಶಿವರಾತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿವರಾತ್ರಿ ಅಂಗವಾಗಿ ದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಸೇರಿದಂತೆ, ವಿವಿಧ ಅಧ್ಯಾತ್ಮಿಕ ಕಾರ್ಯಕ್ರಮಗಳನ್ನು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಹಮ್ಮಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯವರು ಹೇಗೆ ಪ್ರತಿ ವಾರ್ಡಿನಲ್ಲಿ ಶಾಲೆ, ಉದ್ಯಾನವನ, ಆಸ್ಪತ್ರೆ ತೆರೆ ಯುವ ಉದ್ದೇಶವನ್ನು ಹೊಂದಿರುತ್ತಾರೋ ಹಾಗೆಯೇ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿಯ ಶಾಖೆಗಳನ್ನು ಪ್ರತಿ ವಾರ್ಡ್ ಗಳಲ್ಲೂ ತೆರೆದಿದ್ದೇವೆ. ಇರುವ ವಾರ್ಡ್ಗಳಿಗಿಂತ ಹೆಚ್ಚು ಶಾಖೆಗಳನ್ನು ನಡೆಸಲಾಗುತ್ತಿದೆ. ನಗರದ 70 ಕೇಂದ್ರಗಳಲ್ಲಿ ಈಶ್ವರನ ಸಂದೇಶ ಸಾರುವ, ಶಿವನ ಧ್ಯಾನದ ಕಾರ್ಯವು ನಿರಂತರವಾಗಿ ನಡೆಯುತ್ತಿದ್ದು, ಆಂಜನೇಯ ಬಡಾವಣೆ ಯಲ್ಲಿಯೇ ಮೂರು ಶಾಖೆಗಳನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬ್ರಹ್ಮಾಕುಮಾರಿ ಸಂಸ್ಥೆ ವತಿಯಿಂದ ಶಿವರಾತ್ರಿ ಆಚರಣೆಯನ್ನು ತಿಂಗಳ ಕಾಲ ಮಾಡುತ್ತೇವೆ. ಬ್ರಹ್ಮಾಕುಮಾರಿ ಈಶ್ವರೀಯ ವಿವಿ ವಿದ್ಯಾರ್ಥಿಗಳಿಗೆ ನಿತ್ಯವೂ ಉಪವಾಸ, ಜಾಗರಣೆ, ಸತ್ಯ ಶಿವ ಶರಣರಿಗೆ ನಿತ್ಯವೂ ಶಿವರಾತ್ರಿ ಎಂದು ಹೇಳುತ್ತಾರೆ. ನಮ್ಮ ಜೀವನದಲ್ಲಿ ಪ್ರತಿ ನಿತ್ಯವೂ ಶಿವನ ಮಿಲನ, ಧ್ಯಾನ ನಡೆಯುತ್ತಲೇ ಇರುತ್ತದೆ ಎಂದು ಲೀಲಾಜಿ ವಿವರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಿವ ಸಹಕಾರಿ ಬ್ಯಾಂಕಿನ ಅಧ್ಯಕ್ಷರೂ, ವರ್ತಕರೂ ಆದ ಮಾಗನೂರು ಸಂಗಮೇಶ್ವರ ಗೌಡರು ಮಾತ ನಾಡಿ, ಈಶ್ವರೀಯ ವಿವಿಯ ಅಧ್ಯಾತ್ಮಿಕ ಕಾರ್ಯಕ್ರಮಗಳಿಗೆ ತಮ್ಮ ಸಹಮತ ಇದೆ. ಸಂಸ್ಥೆ ಇನ್ನೂ ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಎತ್ತರಕ್ಕೆ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಮತ್ತೋರ್ವ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಪುರಾಣಗಳು, ವೇದ ಉಪನಿಷತ್ತು ಗಳು, ರಾಮಾಯಣ, ಮಹಾಭಾರತ ಇವೆಲ್ಲವೂ ಮಾನವನಿಗೆ ಸಂಕಲ್ಪದ ಸತ್ಯದ ದಾರಿಯನ್ನು ತೋರಿಸುವ ಗ್ರಂಥಗಳಾಗಿವೆ ಎಂದರು.
ಪ್ರಜಾಪಿತ ಈಶ್ವರೀಯ ವಿವಿ ವಿಶ್ವದಲ್ಲಿಯೇ ಆತ್ಯಂತ ಶ್ರೇಷ್ಠ ಅಧ್ಯಾತ್ಮಿಕ ಕೇಂದ್ರ ಎಂದೆನಿಸಿ ಕೊಂಡಿದೆ. ವಿಶ್ವದ 150 ರಾಷ್ಟ್ರಗಳಲ್ಲಿ ತನ್ನ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಕಲಿಯುಗ ಹೋಗಿ ಸತ್ಯ ಯುಗ ಬರುತ್ತದೆ ಎಂಬ ಆಶಾಭಾವನೆಯಿಂದ ಎಲ್ಲರೂ ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಶ್ವರೀಯ ವಿವಿ ಕಾರ್ಯಗಳು ಪ್ರಶಂಸನೀಯ ಎಂದು ವಾಮದೇವಪ್ಪ ಅವರು ಮುಕ್ತಕಂಠದಿಂದ ಪ್ರಶಂಸಿಸಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಳಿಯಾಳ ಶಾಖೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಪದ್ಮಾಜೀ ವಿಶೇಷ ಉಪನ್ಯಾಸ ನೀಡಿ, ಮೌಲ್ಯಶಿಕ್ಷಣ, ಜೀವನ ಶಿಕ್ಷಣ, ಕಲಾತ್ಮಕ ಶಿಕ್ಷಣವನ್ನು ಈಶ್ವರೀಯ ವಿವಿ ನೀಡುತ್ತಿದೆ. ಇಲ್ಲಿ ಸತ್ಯ ಜ್ಞಾನದ ಬೆಳಕು ತೋರುತ್ತದೆ ಎಂದು ತಿಳಿಸಿದರು.
ನಿರಂತರ ಶಿವನ ಸ್ಮರಣೆಗಾಗಿ ಶಿವರಾತ್ರಿ ದಿನದಂದು ಉಪವಾಸ, ಜಾಗರಣೆ, ಧ್ಯಾನ ಮಾಡುತ್ತೇವೆ. ಉಪವಾಸ ಎಂದರೆ ಹಗುರತೆ, ತ್ಯಾಗ, ಅಶುದ್ಧವಾದುದನ್ನು ಬಿಡುವುದು. ಇಂದ್ರಿಯಗಳಿಗೆ ನಿಗ್ರಹ ಬರಬೇಕು. ಹಗುರಿದ್ದಾಗ ಭಗವಂತನ ಕಡೆ ಮನಸ್ಸು ಹೋಗುತ್ತದೆ. ಕೇವಲ ದೈಹಿಕ ಉಪವಾಸ ಅಲ್ಲ. ಮಾನಸಿಕ ಉಪವಾಸ ವನ್ನೂ ಮಾಡುತ್ತೇವೆ ಎಂದು ಹೇಳಿದರು.
ಜಾಗರಣೆ ಎಂದರೆ ಜಾಗೃತರಾಗಿ ಇರುವುದು. ಕೆಲವರು ಕೆಲವು ಕಾರ್ಯಕ್ರಮಗಳನ್ನು ನೋಡಿ ಜಾಗರಣೆ ಮಾಡುತ್ತಾರೆ. ಹೆಜ್ಜೆ ಹೆಜ್ಜೆಗೂ ಜಾಗೃತರಾಗಿರಬೇಕು. ಕೆಟ್ಟ ವಿಚಾರಗಳು, ಕೆಟ್ಟ ಆಲೋಚನೆಗಳು ಬರದಿರಲೆಂದು ಧ್ಯಾನ ಮಾಡಬೇಕು. ಸತ್ಯ ಶಿವನನ್ನು ಅರಿತವರಿಗೆ ನಿತ್ಯವೂ ಉಪವಾಸ, ನಿತ್ಯವೂ ಧ್ಯಾನ, ನಿತ್ಯವೂ ಜಾಗರಣೆ ಎಂದು ಪದ್ಮಾಜಿ ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ಈಶ್ವರೀಯ ವಿವಿ 89 ವರ್ಷಗಳಿಂದ ತನ್ನ ಸೇವೆಯನ್ನು ಪ್ರಪಂಚಾದ್ಯಂತ ನಿರಂತರವಾಗಿ ಸಲ್ಲಿಸುತ್ತಾ ಬರುತ್ತಿದೆ. ಆಂಜನೇಯ ಬಡಾವಣೆಯ ಗೀತ ಪಾಠಶಾಲೆಯು ಸತತ 25 ವರ್ಷಗಳ ಕಾಲ ಸೇವೆ ಸಲ್ಲಿಸುವುದರೊಂದಿಗೆ ರಜತ ಮಹೋತ್ಸವ ಆಚರಿಸುತ್ತಿರುವುದು ಶ್ಲ್ಯಾಘನೀಯ ಎಂದು ಹೇಳಿದರು.
ನಾರಿಯರ ನೇತೃತ್ವದಲ್ಲಿ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ನೈತಿಕ ಶಿಕ್ಷಣ ನೀಡುವ ಸಂಸ್ಥೆಯಾಗಿದ್ದು, ದಾವಣಗೆರೆ ಶಾಖೆ ಕೂಡ ಎಲ್ಲಾ ವರ್ಗದವರಿಗೂ ಶಿಕ್ಷಣ ನೀಡುತ್ತಿದೆ. ಹನ್ನೆರಡನೇ ಶತಮಾನದಲ್ಲಿ ಅಕ್ಕಮಹಾದೇವಿ ಮಾಡಿದ ಸೇವೆಯನ್ನು ಲೀಲಾಜಿ, ಪದ್ಮಾಜಿ ಅವರಂತಹ ಸಾವಿರಾರು ಅಕ್ಕಮಹಾದೇವಿಯವರು ಅಧ್ಯಾತ್ಮಿಕ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು.
ಲಲಿತ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಅಧ್ಯಕ್ಷರಾದ ಶ್ರೀಮತಿ ಇ.ಆರ್. ಶಶಿಕಲಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಬ್ರಹ್ಮಾಕುಮಾರೀಸ್ ಸಂಸ್ಥೆಯ ಸೇವೆಯನ್ನು ಮೆಲಕು ಹಾಕಿದರು.
ಮಹಾರಾಜ ಸೋಪ್ಸ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಇ. ರವಿರಾಜ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ರಾಜಯೋಗ ಶಿಕ್ಷಕರಾದ ಶ್ರೀಮತಿ ಉಮಾ ರಾಜು ಕಾರ್ಯಕ್ರಮ ನಿರೂಪಿಸಿದರು.
ಈಶ್ವರೀಯ ವಿಶ್ವವಿದ್ಯಾಲಯದ ಆಂಜನೇಯ ಬಡಾವಣೆ ಗೀತ ಪಾಠ ಶಾಲೆಯ ರಾಜಯೋಗ ಶಿಕ್ಷಕರಾದ ಶ್ರೀಮತಿ ಸೌಭಾಗ್ಯಮ್ಮ, ಭಾಗ್ಯಲಕ್ಷ್ಮಿ ಮತ್ತಿತರರು ಅತಿಥಿ ಗಣ್ಯರನ್ನು ಸ್ವಾಗತಿಸಿ, ಬೀಳ್ಕೊಟ್ಟರು.