ಕುಂಬಳೂರು : ಗ್ರಾ.ಪಂ. ನೂತನ ಕಟ್ಟಡ ಉದ್ಘಾಟನೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಮನೆಗಳ ಬೇಡಿಕೆ ಹೆಚ್ಚಿದೆ. ಆದರೆ, ಸರ್ಕಾರ ಮನೆಗಳನ್ನು ನೀಡುತ್ತಿಲ್ಲ. ಸಂಸದರು ಹರಿಹರ ತಾಲ್ಲೂಕಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
– ಶಾಸಕ ಬಿ.ಪಿ. ಹರೀಶ್
ಮಲೇಬೆನ್ನೂರು, ಮಾ.2- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪರಿಕಲ್ಪನೆಯಲ್ಲಿ ಗ್ರಾಮ ಪಂಚಾಯ್ತಿಗಳು ಕೆಲಸ ಮಾಡ ಬೇಕೆಂದು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಕುಂಬಳೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾ.ಪಂ.ನ `ಗ್ರಾಮ ಸೌಧ’ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾ.ಪಂ. ವ್ಯವಸ್ಥೆಯಲ್ಲಿ ಅದರದ್ದೇ ಆದ ಬಜೆಟ್ ಇದೆ. ನೀವು ನಿಮ್ಮ ಗ್ರಾಮದ ಸಮಸ್ಯೆಗಳನ್ನು ತಿಳಿದುಕೊಂಡು ಪಾರದರ್ಶಕವಾಗಿ ಕೆಲಸ ಮಾಡುವ ಜವಾಬ್ದಾರಿ ನಿಮ್ಮಲಿದೆ ಎಂದು ಗ್ರಾ.ಪಂ. ಸದಸ್ಯರಿಗೆ ಕಿವಿಮಾತು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಸ್ಥಳೀಯವಾಗಿ ನೀವೇ ಮಾಡಬೇಕೆಂದು ಗ್ರಾ.ಪಂ. ಸದಸ್ಯರಿಗೆ ತಿಳಿಸಿದ ಪ್ರಭಾ, ಕುಂಬಳೂರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಸಮುದಾಯ ಭವನಕ್ಕೆ 15 ಲಕ್ಷ ರೂ. ಅನುದಾನ ಮತ್ತು ಹೈಮಾಸ್ಟ್ ದೀಪಕ್ಕೆ 5 ಲಕ್ಷ ರೂ. ಅನುದಾನ ನೀಡಿದ್ದೇನೆ. ಗ್ರಾಮದ ಇನ್ನಿತರೆ ಬೇಡಿಕೆಗಳಿಗೆ ಹಂತ ಹಂತವಾಗಿ ಸ್ಪಂದಿಸುತ್ತೇನೆಂದರು.
ಹರಿಹರ ತಾಲ್ಲೂಕು ನನ್ನ ತವರು ಮನೆ ಇದ್ದಂತೆ. ಕುಂಬಳೂರಿನಲ್ಲಿ ನಮ್ಮ ಹತ್ತಿರದ ಸಂಬಂಧಿಗಳ ಮನೆ ಇರುವ ಕಾರಣ, ನಾನು ಇಲ್ಲಿ ನನ್ನ ಬಾಲ್ಯವನ್ನು ಹೆಚ್ಚು ಕಳೆದಿದ್ದೇನೆ. ಈ ಗ್ರಾಮದ ಅಭಿವೃದ್ಧಿ ನನ್ನ ಜವಾಬ್ದಾರಿ ಎಂದು ಪ್ರಭಾ ಮಲ್ಲಿಕಾರ್ಜುನ್ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಶಿವಮೊಗ್ಗ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದೆರ್ಜೆಗೆ ಏರಿಸುವಂತೆ ನಾನು ಈಗಾಗಲೇ 2 ಬಾರಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಮನವಿ ಮಾಡಿದ್ದೇನೆ. ಅವರೂ ಕೂಡ ಸೂಕ್ತ ಸ್ಪಂದನೆ ನೀಡಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಕೆಲಸ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದಿರಾ ಆವಾಸ್ ಮನೆಗಳ ನಿರ್ಮಾಣಕ್ಕೆ ಈಗಿರುವ ಅನುದಾನ ಹೆಚ್ಚಿಸುವಂತೆ ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನೂ ಹೆಚ್ಚಿಸುವಂತೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ಸಂಸದರು ತಿಳಿಸಿದರು.
ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ನೀರು ಸರಾಗವಾಗಿ ತಲುಪುವಂತೆ ಮಾಡಲು ಕಾಲುವೆಗಳ ರಿಪೇರಿಗೆ 150 ಕೋಟಿ ರೂ. ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಎಂದು ಪ್ರಭಾ ಹೇಳಿದರು.
ಗ್ರಾ.ಪಂ. ನೂತನ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಈ ಕಟ್ಟಡಕ್ಕೆ 20 ಲಕ್ಷ ರೂ. ಅನುದಾನ ನೀಡಿರುವುದು ಸಾರ್ಥಕವಾಗಿದೆ. ಉತ್ತಮ ಕಟ್ಟಡ ನಿರ್ಮಿಸಿದ್ದಾರೆ. ಅದೇ ರೀತಿ ಗ್ರಾಮದ ಅಭಿವೃದ್ಧಿಗಾಗಿ ಉತ್ತಮ ಕೆಲಸಗಳನ್ನು ಮಾಡಿ ಎಂದು ಗ್ರಾ.ಪಂ. ಸದಸ್ಯರಿಗೆ ಹೇಳಿದರು.
ನಾವು ಎಷ್ಟೇ ಪ್ರಯತ್ನ ಮಾಡಿದರೂ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ನೀರು ಹರಿಯುತ್ತಿಲ್ಲ. ಹರಿಹರ ತಾಲ್ಲೂಕಿನ ಶೇ.40 ರಷ್ಟು ಭದ್ರಾ ಅಚ್ಚುಕಟ್ಟಿಗೆ ನೀರಿನ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ನೀಗಿಸಲು ಭೈರನಪಾದ ಏತ ನೀರಾವರಿ ಯೋಜನೆ ಮತ್ತು ಕೆರೆಗಳಿಗೆ ನದಿ ನೀರು ಹರಿಸುವ ಕೆಲಸ ಆಗಬೇಕಿದೆ. ಇದಕ್ಕೆ ಸಚಿವರು, ಸಂಸದರು ಸಹಕರಿಸಬೇಕೆಂದು ಹರೀಶ್ ಹೇಳಿದರು.
ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಉಮಾದೇವಿ ಎಂ.ಹೆಚ್.ಶಿವರಾಮ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ವೈ.ವಿರೂಪಾಕ್ಷಪ್ಪ, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹನಗವಾಡಿ ಕುಮಾರ್, ಎಂ.ಬಿ.ಅಬೀದ್ ಅಲಿ, ಜಿ.ಮಂಜುನಾಥ್ ಪಟೇಲ್, ಜಿಗಳಿ ಆನಂದಪ್ಪ, ಗುತ್ತೂರು ಹಾಲೇಶಗೌಡ, ಕೆ.ತೀರ್ಥಪ್ಪ, ನಿಟ್ಟೂರಿನ ಕೆ.ಏಕಾಂತಪ್ಪ, ಕೆ.ಕಾಮರಾಜ್, ಗ್ರಾ.ಪಂ. ಉಪಾಧ್ಯಕ್ಷ ಜಿ.ಎಂ.ಹರೀಶ್, ತಾ.ಪಂ. ಇಓ ಸುಮಲತಾ ಸೇರಿದಂತೆ ಗ್ರಾ.ಪಂ.ನ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಪಿಡಿಓ ನರಸಿಂಹಮೂರ್ತಿ ಸ್ವಾಗತಿಸಿರು. ಗ್ರಾ.ಪಂ. ಸದಸ್ಯ ಕೆ.ಹೆಚ್.ನಾಗೇಂದ್ರ ನಿರೂಪಿಸಿದರು. ಗ್ರಾ.ಪಂ. ಸದಸ್ಯ ಎನ್.ಜೆ.ಕಲ್ಲೇಶ್ ವಂದಿಸಿದರು.