ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್ ಕಳವಳ
ದಾವಣಗೆರೆ, ಫೆ. 28- ವಿದ್ಯಾರ್ಥಿಗಳಲ್ಲಿ ಕಲೆಯ ಮೇಲಿನ ಆಸಕ್ತಿ ಕಡಿಮೆ ಆಗುತ್ತಿರುವುದರಿಂದ ಕಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್ ಕಳವಳ ವ್ಯಕ್ತಪಡಿಸಿದರು.
ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿ ದ್ಯಾಲಯದ ವಜ್ರಮಹೋತ್ಸವ ಸಂಭ್ರಮದ ಅಂಗವಾಗಿ ಯೂನಿವರ್ಸಿಟಿ ಕಾಲೇಜ್ ಆಫ್ ವಿಜುವಲ್ ಆರ್ಟ್ ಅಲುಮ್ನಿ ಅಸೋಸಿ ಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ಚಿಗುರು ಚಿತ್ತಾರ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಮಕ್ಕಳು ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡ ಲಾಗದು. ಪೋಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ, ಕಲಾ ಕ್ಷೇತ್ರದಲ್ಲಿ ಮಕ್ಕಳಿಗೆ ಆಸಕ್ತಿ ಇದ್ದರೆ ಅದನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಚಿತ್ರ ಕಲಾವಿದ ಅಥವಾ ಶಿಲ್ಪ ಕಲಾವಿದನಾಗುವ ಅವಕಾಶಗಳು ಸಾಕಷ್ಟಿ ರುತ್ತವೆ. ದೃಶ್ಯಕಲಾ ಕಾಲೇಜಿನಲ್ಲಿ ಹಲವು ವಿಭಾಗಗಳಿವೆ. 12ನೇ ತರಗತಿ ನಂತರ ನಾಲ್ಕು ವರ್ಷದ ಕೋರ್ಸ್ಗೆ ಸೇರುವ ಮೂಲಕ ಚಿತ್ರಕಲಾವಿದ, ಫೋಟೋ ಗ್ರಾಫರ್, ಆನಿಮಿ ಟೇರ್, ಗ್ರಾಫಿಕ್ ಡಿಸೈನರ್ ವಿಭಾಗಗಳಲ್ಲಿ ಪರಿಣಿತರಾಗಬಹುದು ಎಂದು ಹೇಳಿದರು.
ಬಹಳ ಜನರಿಗೆ ಶಿಲ್ಪಕಲಾ ಅಕಾಡೆಮಿ ಇರುವುದೇ ಗೊತ್ತಿಲ್ಲ. ಬೆಂಗಳೂರಿನಲ್ಲಿ ಅಕಾಡೆಮಿಯ ಕಛೇರಿ ಇದೆ. ದೆಹಲಿ ಹೊರತುಪಡಿಸಿದರೆ ಕರ್ನಾಟಕದಲ್ಲಿ ಮಾತ್ರ ಶಿಲ್ಪ ಕಲಾ ಅಕಾಡೆಮಿ ಇರುವುದು ವಿಶೇಷ. ರಾಜ್ಯದ ಮೂಲೆ ಮೂಲೆಯಲ್ಲಿರುವ ಶಿಲ್ಪ ಕಲಾವಿದರನ್ನು ಗುರುತಿಸಿ, ಅವರಿಗೆ ಅವಕಾಶ ಕಲ್ಪಿಸುವ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ ಎಂದು ಹೇಳಿದರು.
ಶಿಲ್ಪಕಲೆಗೆ ಸಂಬಂಧಿಸಿದಂತೆ ಪ್ರತಿ ವರ್ಷ ಪುಸ್ತಕಗಳನ್ನು ಹೊರ ತರುವ ಕೆಲಸವನ್ನೂ ಮಾಡಲಾಗುತ್ತಿದೆ. ಶಿಲ್ಪಗಳನ್ನು ಸಂಗ್ರಹಿಸುವ ಕಾರ್ಯಕ್ಕೂ ಅಕಾಡೆಮಿ ಒತ್ತು ನೀಡುತ್ತದೆ. 50ಕ್ಕೂ ಹೆಚ್ಚು ಶಿಲ್ಪಗಳನ್ನು ಸಂಗ್ರಹಿಸಿ ಶಿಬಿರಗಳಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ದಾವಣಗೆರೆ ಕಲಾ ಕಾಲೇಜಿನಲ್ಲಿ ಕಲಾವಿದರ ಶಿಬಿರ ನಡೆಸಲಾಗುವುದು. ಕಾಲೇಜಿಗೆ ಬೇಕಾದ ಎಲ್ಲಾ ಸಹಕಾರ ನೀಡಲು ತಾವು ಸಿದ್ಧರಿರುವುದಾಗಿ ಹೇಳಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಗೀತಾ ಎಸ್. ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಾ, ಚಿತ್ರಗಳನ್ನು ಬಿಡಿಸುವುದರಿಂದ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಹೇಳಿದರು.
ಚಿತ್ರ ಕಲೆ ರೂಢಿಸಿಕೊಂಡವರಿಗೆ ಉತ್ತಮ ಆಲೋಚನಾ ಶಿಕ್ತಿ ಇರುತ್ತದೆ. ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಬಿಡಿಸುವ ಚಿತ್ರಗಳಿಗೂ ಅಂಕಗಳಿರುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಚಿತ್ರಕಲೆಯತ್ತ ಆಸಕ್ತಿ ಬೆಳೆಸಿಕೊಳ್ಳಿ ಎಂದು ಹೇಳಿದರು.
ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಚಿತ್ರಕಲಾವಿದ ಶ್ರೀನಾಥ್ ಬಿದರೆ, ದೃಶ್ಯಕಲಾ ವಿವಿ ಪ್ರಾಚಾರ್ಯ ಡಾ. ಜೈರಾಜ್ ಚಿಕ್ಕಪಾಟೀಲ್, ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ಕುಮಾರ್ ವೈ. ಉಪಸ್ಥಿತರಿದ್ದರು.