ಎಂಇಎಸ್ ಪುಂಡಾಟಿಕೆಗೆ ಆಕ್ರೋಶ

ಎಂಇಎಸ್ ಪುಂಡಾಟಿಕೆಗೆ ಆಕ್ರೋಶ

ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬಣಗಳಿಂದ ಪ್ರತ್ಯೇಕ ಪ್ರತಿಭಟನೆ

ಬೆಳಗಾವಿ, ಫೆ. 25 – ಬಸ್ ಕಂಡಕ್ಟರ್ ಮಹಾದೇವ ಹುಕ್ಕೇರಿ ಮೇಲಿನ ಹಲ್ಲೆ ಹಾಗೂ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಇಲ್ಲಿನ ರಾಣಿ ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ. ನಾರಾಯಣಗೌಡ, ಪ್ರವೀಣ ಶೆಟ್ಟಿ ಬಣಗಳ ಕಾರ್ಯಕರ್ತರು ಮಂಗಳವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ರಾಣಿ ಚನ್ನಮ್ಮ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕನ್ನಡ ಪರ ಕಾರ್ಯಕರ್ತರು ಕನ್ನಡ ಬಾವುಟಗಳನ್ನು ಹಿಡಿದು ಎಂಇಎಸ್, ಶಿವಸೇನೆ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಆರಂಭದಲ್ಲಿ ಪ್ರತಿಭಟನೆಗೆ ಮುಂದಾದ ಪ್ರವೀಣ ಶೆಟ್ಟಿ ಹಾಗೂ ಅವರ ಬಣದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಬಳಿಕ ಆಗಮಿಸಿದ ಕ.ರ.ವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಡಕ್ಟರ್ ಮಹಾದೇವ ಹುಕ್ಕೇರಿ ಅವರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಬಳಿಕ ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬಾಳೇಕುಂದ್ರಿ ಚಲೋ ಗೆ ಮುಂದಾದ ನಾರಾಯಣಗೌಡ ಅವರನ್ನು ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮನವೊಲಿಸುವಲ್ಲಿ ಯಶಸ್ವಿಯಾದರು. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, ಕಂಡಕ್ಟರ್ ಮೇಲೆ ಹಲ್ಲೆ ಮಾಡಿದವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕರ್ನಾಟಕದಿಂದ ಗಡೀ ಪಾರು ಮಾಡಬೇಕು ಎಂದು ಆಗ್ರಹಿಸಿದರು.

ಮಹಾಜನ್ ವರದಿ ಪ್ರಕಾರ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎನ್ನುವುದು ತೀರ್ಮಾನವಾಗಿದೆ. ಆದಾಗ್ಯೂ, ಎಂಇಎಸ್ ಪುಂಡರು, ಮರಾಠಿ, ಮಹಾರಾಷ್ಟ್ರ ಮುಂದಿಟ್ಟುಕೊಂಡು ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ ಮಾಡುತ್ತಿದ್ದಾರೆ.ಶಿವಸೇನೆ ಕಿತ್ತೋದ ಶಿವಸೇನೆ. ಶಿವ ಹೆಸರು ಯಾಕೆ ಇಟ್ಟುಕೊಂಡಿದ್ದೀರಿ, ಮಹಾರಾಷ್ಟ್ರದ ಗೂಂಡಾ ಸೇನೆ ಎಂದು ಹೆಸರು ಇಟ್ಟುಕೊಳ್ಳಿ ಎಂದು ವಾಗ್ದಾಳಿ ನಡೆಸಿದ ಅವರು, ಗೂಂಡಾಗಳಿಗೆ ಇಲ್ಲಿಂದಲೇ ಉತ್ತರ ಕೊಡಬೇಕು ಎಂದು ಬಂದಿದ್ದೇವೆ. ಪುಂಡಾಟಕ್ಕೆ ಕೊನೆ ಆಗಬೇಕು. ಪುಂಡರನ್ನು ಗೂಂಡಾ ಕಾಯ್ದೆ ಹಾಕಿ ಬಂಧಿಸಿ ಜೈಲಿಗೆ ಕಳುಹಿಸಿ ಎಂದು ಒತ್ತಾಯಿಸಿದರು.

error: Content is protected !!