ಚಿಂತಕ ರಾ.ಚಿಂತನ್
ದಾವಣಗೆರೆ, ಫೆ. 23- ‘ಬ್ರಿಟಿಷ್ ವಿರುದ್ಧದ ಹೋರಾಟ ಮಾತ್ರವಲ್ಲ, ರೈತರನ್ನು ಸಂಘಟಿಸುವ, ಕಂದಾಯ ಹಾಗೂ ಭೂ ಮಾಲೀಕತ್ವ ವಿಚಾರದಲ್ಲಿ ಕೂಡ ಹೋರಾಡಿದ್ದ, ಕೆಚ್ಚಿನ ಗುಂಡಿಗೆಯ ಸಂಗೊಳ್ಳಿ ರಾಯಣ್ಣ, ಈಗಲೂ ಕೂಡ ಹೋರಾಟಗಾರರಿಗೆ ಪ್ರೇರಣೆ’ ಎಂದು ಪತ್ರಕರ್ತ, ಚಿಂತಕ ರಾ.ಚಿಂತನ್ ಹೇಳಿದರು.
ನಗರದ ಶಿವಯೋಗಿ ಮಂದಿರದಲ್ಲಿ ಹಮ್ಮಿ ಕೊಂಡಿದ್ದ ಸಂಗೊಳ್ಳಿ ರಾಯಣ್ಣನ 194ನೇ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸ್ವೀಕರಿಸಿ ವಿಶೇಷ ಉಪನ್ಯಾಸ ನೀಡಿದ ಅವರು, ‘ಬ್ರಿಟಿಷ್ ವಿರುದ್ಧ ಆರಂಭಿಕ ಹೋರಾಟಗಾರನಾದ, ಕ್ರಾಂತಿಕಾರಿ ರಾಯಣ್ಣ ಒಂದಲ್ಲಾ ಒಂದು ದಿನ ನಮ್ಮ ನಾಡು ಬಿಳಿಯರ ಕಪಿಮುಷ್ಠಿಯಿಂದ ಬಿಡುಗಡೆ ಹೊಂದುವ ಭರವಸೆಯನ್ನು 150 ವರ್ಷ ಮೊದಲೇ ಕಂಡಿದ್ದರು. 1798ರ ಆಗಸ್ಟ್ 15 ರಂದು ಹುಟ್ಟಿ, 1831ರ ಜನವರಿ 26ರಂದು ಹುತಾತ್ಮನಾಗುವ ರಾಯಣ್ಣ, ರಾಷ್ಟ್ರೀಯ ಹಬ್ಬದ ದಿನದಂದು ಯಾವತ್ತಿಗೂ ನೆನಪಿನಲ್ಲಿ ಉಳಿಯುವುದು ಕನ್ನಡಿಗರಿಗೆಲ್ಲ ರೋಮಾಂಚನದ ಸಂಗತಿ’ ಎಂದರು.
ವಿಶ್ವ ಸಮ್ಮೇಳನಕ್ಕೆ ದಿನಾಂಕ ಪ್ರಕಟಿಸಿ: ಜಿಲ್ಲಾ ಕರವೇ ಅಧ್ಯಕ್ಷ ರಾಮೇಗೌಡ ಮಾತನಾಡಿ, ‘ಕಳೆದ ವರ್ಷ ಹೋರಾಟದ ಫಲವಾಗಿ ರಾಜ್ಯದ ನಾಮ ಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿತು. ಡಾ.ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಉಗ್ರ ಹೋರಾಟಕ್ಕೆ ಮುಂದಾಗುತ್ತಿದ್ದೇವೆ. ದಾವಣಗೆರೆಯಲ್ಲೇ ವಿಶ್ವ ಕನ್ನಡ ಸಮ್ಮೇಳನ ಮಾಡುವ ನಿಟ್ಟಿನಲ್ಲಿ ಸರ್ಕಾರ ದಿನಾಂಕ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ಗೀತೆಗಳ ರಸಮಂಜರಿ, ಕ್ರಾಂತಿವೀರ ರಾಯಣ್ಣ ರೂಪಕ ಹಾಗೂ ಮಲ್ಲಕಂಬ ಸ್ಪರ್ಧೆ ನಡೆಸಲಾಯಿತು. ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ರಾಯಣ್ಣ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಈ ವೇಳೆ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಕಾಂತರಾಜ್, ಪಾಲಿಕೆ ಸದಸ್ಯ ಕೆ.ಪ್ರಸನ್ನಕುಮಾರ್, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್, ಕರವೇ ಜಿಲ್ಲಾ ಘಟಕದ ಈಶ್ವರ್, ಸಂತೋಷ್, ಗೋಪಾಲ್ ದೇವರಮನಿ, ರವಿಕುಮಾರ್, ಪೈಲ್ವಾನ್ ಜಬೀವುಲ್ಲಾ ಖಾನ್, ಮಂಜುಳಾ ಗಣೇಶ್, ಗಿರೀಶ್ ಕುಮಾರ್, ಜಬೀವುಲ್ಲಾ ಮತ್ತಿತರರು ಭಾಗವಹಿಸಿದ್ದರು.
ಸಾಧಕರಿಗೆ ಸನ್ಮಾನ : ಸಮಾಜ ಸೇವಾ ಕ್ಷೇತ್ರದಿಂದ ವಾಸುದೇವ ರಾಯ್ಕರ್, ನಾಗರಿಕ ಸೇವಾ ಕ್ಷೇತ್ರ ಮಂಜುನಾಥ್ ಪಂಡಿತ್, ವೈದ್ಯಕೀಯ ಕ್ಷೇತ್ರ ಡಾ.ಎಸ್.ವಿಜಯಕುಮಾರ್, ಮಾಧ್ಯಮ ಕ್ಷೇತ್ರದಿಂದ ಹಿರಿಯ ಪತ್ರಕರ್ತ ಸದಾನಂದ ಹೆಗಡೆ, ದೃಶ್ಯ ಮಾಧ್ಯಮ ಕ್ಷೇತ್ರ ಚಿದಾನಂದ, ರಂಗಭೂಮಿ ಕ್ಷೇತ್ರದಿಂದ ಎಸ್.ಎಸ್. ಸಿದ್ದರಾಜು, ಕನ್ನಡಪರ ಹೋರಾಟ ಎಂ.ಭೀಮೇಶ್, ರೈತಪರ ಕ್ಷೇತ್ರ ಎಂ.ಓ. ದೇವರಾಜ್ ಹಾಗೂ ಕಲಾವಿದ ಧರ್ಮರಾಜ್ ಅವರನ್ನು ಸನ್ಮಾನಿಸಲಾಯಿತು.