ಮೆದುಳಿನ ಒಳಗಿನ ನೋವಿನ ಸ್ವಿಚ್ ಆಫ್ ಮಾಡುವುದೆಂತು…?

ಮೆದುಳಿನ ಒಳಗಿನ ನೋವಿನ ಸ್ವಿಚ್ ಆಫ್ ಮಾಡುವುದೆಂತು…?

ಎರಡನೇ ಮಹಾಸಮರದಲ್ಲಿ ವೈದ್ಯ ಹೆನ್ರಿ ಬ್ರೀಚರ್ ಅವರು ತಮ್ಮ ಸೈನಿಕ ರೋಗಿಗಳಲ್ಲಿ ವಿಚಿತ್ರ ಸಂಗತಿ ಒಂದನ್ನು ಕಂಡಿದ್ದರು. ಅಂಗಹಾನಿಯಂತಹ ಗಂಭೀರ ಸಮಸ್ಯೆಗೆ ಗುರಿಯಾದ ಸೈನಿಕರೂ ಸಹ ತೀವ್ರ ನೋವು ನಿವಾರಕ ಇಲ್ಲದೆ ಚಿಕಿತ್ಸೆ ಪಡೆಯುತ್ತಿದ್ದರು.

ಭಯ, ಒತ್ತಡ ಹಾಗೂ ಭಾವುಕರಾದ ಸಂದರ್ಭದಲ್ಲಿ ಮೆದುಳು ತನ್ನ ನೋವಿನ ಸ್ವಿಚ್ ಆಫ್ ಮಾಡುತ್ತದೆ ಎಂಬ ಗಮನಾರ್ಹ ಸಂಗತಿಯನ್ನು ಬ್ರೀಚರ್ ಕೊಂಡುಕೊಂಡಿದ್ದರು. ಆದರೆ, ಈ ವಿಷಯವನ್ನು ನಮ್ಮ ಅನುಕೂಲಕ್ಕೆ ಬಳಸಬಹುದೇ? ಕೆಲವೊಮ್ಮೆ ನಾವು ಹೊಟ್ಟೆ ನೋವಿನಿಂದ ಹಿಡಿದು ಬಿಸಿ ಪಾತ್ರೆ ಮುಟ್ಟುವವರೆಗೆ ಹಲವಾರು ರೀತಿಯ ನೋವುಗಳನ್ನು ಎದುರಿಸುತ್ತೇವೆ. ಇದೆಲ್ಲದಕ್ಕೂ ನಮ್ಮ ಮೆದುಳಿನಲ್ಲಿ ಉತ್ತರ ಇದೆಯೇ?

ನೋವು ಯಾರಿಗೂ ಹಿತಕರವಲ್ಲ. ಆದರೆ ನೋವು ನಮ್ಮ ಆರೋಗ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನೋವು ನಮ್ಮ ದೇಹಕ್ಕೆ ಆಗುವ ಹಲವಾರು ಅನುಭವಗಳಲ್ಲಿ ಒಂದಾಗಿದೆ. ದೇಹದ ಅಸಂಖ್ಯ ನ್ಯೂರಾನ್‌ಗಳು (ನರಕಣಗಳು) ಸೇರಿಕೊಂಡು ಮೆದುಳಿಗೆ ದೈಹಿಕ ಅನುಭವದ ಮಾಹಿತಿ ರವಾನಿಸುತ್ತವೆ. ಇದರಲ್ಲಿ ನೋವೂ ಸೇರಿದೆ.

ಈ ವಿಶೇಷವಾದ ನ್ಯೂರಾನ್‌ಗಳಿಗೆ ನಾಸಿಸೆಪ್ಟರ್ ಎಂದು ಕರೆಯಲಾಗುತ್ತದೆ. ದೇಹಕ್ಕೆ ಹಾನಿ ತರುವ ಪ್ರಕರಣಗಳನ್ನು ನಾಸಿಸೆಪ್ಟರ್ ಗುರುತಿಸುತ್ತವೆ. ಇದರಲ್ಲಿ ಸಣ್ಣ ಗಾಯದಿಂದ ಹಿಡಿದು ಗಂಭೀರ ಗಾಯದವರೆಗೆ ಎಲ್ಲವೂ ಸೇರಿವೆ.

ಬಿಸಿ ಕಡಾಯಿಯನ್ನು ಮುಟ್ಟಿದಂತಹ ಪ್ರಕರಣಗಳಲ್ಲಿ ತಕ್ಷಣವೇ ಕೈಯನ್ನು ಹಿಂದಕ್ಕೆ ಸರಿಸುತ್ತೇವೆ. ಇದರಿಂದಾಗಿ ಕೈಗೆ ಇನ್ನಷ್ಟು ಹಾನಿಯಾಗುವುದು ತಪ್ಪುತ್ತದೆ.

ಈ ರೀತಿಯ ಸಂಕೇತಗಳನ್ನು ರವಾನಿಸುವ ವ್ಯವಸ್ಥೆ ನಮ್ಮ ಚರ್ಮದಿಂದ ಆರಂಭವಾಗಿ ನರಗಳ ಮೂಲಕ ಬೆನ್ನುಹುರಿಯ ಮಾರ್ಗವಾಗಿ ಮೆದುಳಿಗೆ ತಲುಪುತ್ತದೆ. ಅಲ್ಲಿ ಸೆರಬ್ರಲ್ ಕಾರ್ಟೆಕ್ಸ್ ಎಂಬ ಭಾಗ ನೋವಿನ ಅನುಭವ ಸೃಷ್ಟಿಸುತ್ತದೆ.

ಈ ಭಾಗಕ್ಕೆ ನೋವಿನ ಸಂಕೇತ ತಲುಪುವುದನ್ನು ತಡೆದಾಗ ನಮಗೆ ಯಾವುದೇ ನೋವಿನ ಅನುಭವ ಆಗುವುದಿಲ್ಲ. ಅನಸ್ತೇಶಿಯ ಸಂದರ್ಭದಲ್ಲಿ ಇದೇ ಪ್ರಕ್ರಿಯೆ ನಡೆಯುತ್ತದೆ‌. ನೋವಿನ ಅನುಭವ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಹಲವರು ಹೆಚ್ಚು ನೋವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಇನ್ನು ಕೆಲವರು ಕಡಿಮೆ ನೋವಿಗೆ ಹೆಚ್ಚು ಪರಿತಪಿಸುತ್ತಾರೆ.

ಕೆಲ ರೋಗಿಗಳು ಹುಟ್ಟಿನಿಂದಲೇ ನೋವನ್ನು ಗ್ರಹಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಇಂತಹ ಸಮಸ್ಯೆಯನ್ನು ಕಾಗ್ನಿಷಿಯಲ್ ಅನಲ್ಗೆಷಿಯ ಎಂದು ಕರೆಯಲಾಗುತ್ತದೆ. ಇವರು ನೋವಿಲ್ಲದೆ ಬದುಕುತ್ತಾರೆ. ಇದು ಒಳ್ಳೆಯ ಜೀವನ ಎಂದು ನೀವು ಯೋಚಿಸಬಹುದು. ಆದರೆ ಈ ವ್ಯಕ್ತಿಗಳ ದೇಹಕ್ಕೆ ಏನೇ ಹಾನಿಯಾದರೂ ಅವರಿಗೆ ತಿಳಿಯುವುದಿಲ್ಲ. ಇದರಿಂದಾಗಿ ಅವರು ಗಂಭೀರ ಗಾಯಗಳಿಗೆ ಸಿಲುಕುತ್ತಾರೆ ಹಾಗೂ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಾರೆ.

ಆಸಕ್ತಿಕರ ಅಂಶ ಎಂದರೆ ನಮ್ಮೆಲ್ಲರ ಮೆದುಳಿನಲ್ಲಿ ನೈಸರ್ಗಿಕವಾದ ನೋವು ನಿವಾರಕ ವ್ಯವಸ್ಥೆ ಇದೆ. ಮೆದುಳಿನ ಮಧ್ಯಭಾಗದಲ್ಲಿರುವ ಪಿರಿಯಾ ಕ್ಯೂಡೆಕ್ಟಲ್ (ಪಿಎಜಿ) ಎಂಬ ಹೃದಯಾಕಾರದ ಭಾಗ ನೈಸರ್ಗಿಕ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಭಾಗವು ಸೆರೆಬ್ರಲ್ ಕಾರ್ಟೆಕ್ಸ್‌ಗೆ ಬರುವ ನೋವಿನ ಸಂಕೇತಗಳ ತೀವ್ರತೆ ತಗ್ಗಿಸುವ ಸಾಮರ್ಥ್ಯ ಹೊಂದಿದೆ.

ಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಗಾಯ ಆದಾಗ ನೋವು ಕಾಣಿಸಿಕೊಳ್ಳುವುದು ಒಳಿತಿಗಿಂತ ಕೆಡುಕನ್ನೇ ತರುತ್ತದೆ.‌ ಅದೆಷ್ಟೇ ನೋವಿದ್ದರೂ ಸೈನಿಕರು ಕಾರ್ಯನಿರ್ವಹಿಸ ಬೇಕಾಗುತ್ತದೆ, ಅಪಾಯದಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ ಹಾಗೂ ಇತರೆ ಸೈನಿಕರಿಗೆ ನೆರವು ನೀಡಬೇಕಾಗುತ್ತದೆ.

ನಮ್ಮ ದೈನಂದಿನ ಅನುಭವವನ್ನೇ ನೋಡುವುದಾದರೆ, ಒಲೆಯ ಮೇಲೆ ಬಿಸಿ ಪಾತ್ರೆಯನ್ನು ಎತ್ತಿರುತ್ತೇವೆ, ಆಗ ನೋವು ಕಾಣಿಸಿಕೊಂಡ ತಕ್ಷಣವೇ ಕೈಬಿಟ್ಟರೆ ಪಾತ್ರೆಗೆ ಹಾನಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ಒಂದೆರಡು ಕ್ಷಣ ನೋವು ಸಹಿಸಿ ಪಾತ್ರೆಯನ್ನು ಸುರಕ್ಷಿತ ಜಾಗದಲ್ಲಿ ಇಡುತ್ತೇವೆ. ಇಂತಹ ಸಂದರ್ಭದಲ್ಲಿ ಪಿಎಜಿ ನೋವು ತಗ್ಗಿಸಲು ಸಕ್ರಿಯವಾಗಿರುತ್ತದೆ.

ಈ ರೀತಿಯ ಪರಿಣಾಮವನ್ನು ಸೃಷ್ಟಿಸುವ ಎನ್ಕಿಫಲಿನ್ಸ್ ಎಂಬ ಕಣಗಳು ಕೇವಲ ಪಿಎಜಿ ಅಷ್ಟೇ ಅಲ್ಲದೆ ಮೆದುಳಿನ ಇತರ ಹಲವು ಭಾಗಗಳು ಹಾಗೂ ಬೆನ್ನುಹುರಿಯಲ್ಲಿ ಉತ್ಪಾದನೆಯಾಗುತ್ತವೆ. ಇವುಗಳು ಬಲಿಷ್ಠ ನೋವು ನಿವಾರಕದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.

ಕೆಲವೊಮ್ಮೆ ದೀರ್ಘಕಾಲದ ಅನಾರೋಗ್ಯದ ಸಂದರ್ಭ ದಲ್ಲಿ ನೋವಿನ ಅನುಭವದಿಂದ ದೇಹಕ್ಕೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ನೈಸರ್ಗಿಕ ನೋವು ನಿವಾರಕ ವ್ಯವಸ್ಥೆ ಸಕ್ರಿಯವಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದೆಲ್ಲವನ್ನು ಪರಿಗಣಿಸಿದಾಗ, ನಮ್ಮ ನರಮಂಡಲ ವ್ಯವಸ್ಥೆಯ ಬಳಸಿಕೊಂಡು ನೋವು ಕಡಿಮೆ ಮಾಡಿಕೊಳ್ಳಲು ಏನಾದರೂ ಮಾರ್ಗವಿದೆಯೇ ಎಂಬ ಪ್ರಶ್ನೆ ಹುಟ್ಟುತ್ತದೆ. ಹಲವಾರು ಮಾರ್ಗಗಳ ಮೂಲಕ ನೋವು ಕಡಿಮೆ ಮಾಡುವ ಎನ್ಕಿಫಾಲಿನ್ಸ್ ಅಂಶಗಳು ಉತ್ಪಾದನೆಯಾಗುವಂತೆ ಮಾಡಬಹುದು. ಕಸರತ್ತು ಇದಕ್ಕೆ ಉತ್ತಮ ಮಾರ್ಗವಾಗಿದೆ.

ಕೇವಲ ಕಸರತ್ತು ಅಷ್ಟೇ ಅಲ್ಲದೆ ಒತ್ತಡದ ಪರಿಸ್ಥಿತಿಗಳು, ಸ್ತನ್ಯಪಾನ ಹಾಗೂ ಸಂಭೋಗದಂತಹ ಚಟುವಟಿಕೆಗಳು ಎನ್ಕಿಫಾಲಿನ್ಸ್ ಉತ್ಪಾದಿಸುತ್ತವೆ.

ನೋವು ಅತ್ಯಂತ ಸಂಕೀರ್ಣ ವ್ಯವಸ್ಥೆಯಾಗಿದೆ. ಈ ಬಗ್ಗೆ ನಾವು ತಿಳಿದುಕೊಳ್ಳುವುದು ಇನ್ನೂ ಸಾಕಷ್ಟಿದೆ. ಆದರೆ ನರಮಂಡಲ ವಿಜ್ಞಾನ ಮುಂದುವರಿದಂತೆ ಈ ದಿಸೆಯಲ್ಲಿ ಹೆಚ್ಚು ಮಾಹಿತಿ ದೊರೆಯುತ್ತಿದೆ. ಕಳೆದ ತಿಂಗಳಷ್ಟೇ ಅಮೆರಿಕದ ಔಷಧ ನಿಯಂತ್ರಕ ಎಫ್‌ಡಿಎ ಜೋರ್ನವಕ್ಸ್ ಎಂಬ ನೋವು ನಿರ್ವಹಣೆಯ ಹೊಸ ಔಷಧಿಗೆ ಅನುಮತಿ ನೀಡಿದೆ.

ಇದು ನೋವಿನ ಅನುಭವ ತರುವ ನಾಸಿಸೆಪ್ಟರ್‌ಗಳ ತಡೆಯುತ್ತದೆ. ಆ ಮೂಲಕ ನೋವಿನ ಸಂಕೇತಗಳು ಮೆದುಳಿಗೆ ತಲುಪದಂತೆ ಮಾಡುತ್ತದೆ. ವ್ಯಸನಕಾರಿಯಾದ ಮಾರ್ಫೈನ್ ಹಾಗೂ ಫೆಂಟಾನೈಲ್ ರೀತಿಯ ಔಷಧಿಗಳ ಬದಲು ಜೋರ್ನಾವಕ್ಸ್ ಬಳಕೆ ಉತ್ತಮ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ನರಮಂಡಲ ವ್ಯವಸ್ಥೆಯಲ್ಲಿ ನೋವಿನ ಕಾರ್ಯನಿರ್ವಹಣೆ ಕುರಿತು ಹೆಚ್ಚಿನ ಮಾಹಿತಿಗಳು ಲಭ್ಯವಾದಷ್ಟು ಹೊಸ ರೀತಿಯ ನೋವು ನಿವಾರಕ ಚಿಕಿತ್ಸೆ ಸುಲಭವಾಗುತ್ತದೆ. ಈ ಕಾರ್ಯ ಕಠಿಣವಾಗಿದೆ ಆದರೆ ನೋವನ್ನು ನಮ್ಮ ನರಮಂಡಲವು ಯಾವ ರೀತಿ ನಿರ್ವಹಿಸುತ್ತದೆ ಎಂಬುದನ್ನು ಹೆಚ್ಚು ಅರ್ಥ ಮಾಡಿಕೊಂಡಲ್ಲಿ ನೋವಿನಿಂದ ಮುಕ್ತಿ ಪಡೆಯುವುದು ಸುಲಭವಾಗಲಿದೆ.

error: Content is protected !!