ನಮ್ಮ ಜೊತೆಗೆ ನಾವು ಸ್ಪರ್ಧೆ ಮಾಡಿದಾಗ ಮನಸ್ಸು ಆರೋಗ್ಯಕರವಾಗಿರುತ್ತದೆ. ಬೇರೆಯವರೊಂದಿಗೆ ಸ್ಪರ್ಧೆ ಮಾಡಿದಾಗ ಅಸೂಯೆ, ಅಹಂಕಾರ ಹೆಚ್ಚಾಗುತ್ತದೆ.
ಸ್ವಾರ್ಥ ಹಾಗೂ ಅಹಂಕಾರ ಕೈ ಬಿಡಬೇಕು.
– ಸ್ವಾಮಿ ಮಹಾಮೇಧಾನಂದಜೀ ಮಹಾರಾಜ್
ಮನಸ್ಸಿನ ನಿಯಂತ್ರಣಕ್ಕೆ ಉದ್ಯಮಿಯಾಗಿ, ಸಮಯ ನಿಯಂತ್ರಿಸಿ, ಪರೋಪಕಾರಿಯಾಗಿರಿ
ದಾವಣಗೆರೆ, ಫೆ.21- ಆರೋಗ್ಯಕರ ಮನಸ್ಸು ನಮ್ಮ ಜೀವನದ ಯಶಸ್ಸನ್ನು ನಿರ್ಧರಿಸುತ್ತದೆ ಎಂದು ಸ್ವಾಮಿ ಮಹಾಮೇಧಾನಂದಜೀ ಮಹಾರಾಜ್ ಪ್ರತಿಪಾದಿಸಿದರು.
ರಾಮಕೃಷ್ಣ ಮಿಷನ್ ವತಿಯಿಂದ ನಗರದ ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಳ್ಳ ಲಾಗಿದ್ದ `ವಿವೇಕ ಚಿಂತನೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು `ಅಭ್ಯಾಸ ಮತ್ತು ವೈರಾಗ್ಯದ ಮರ್ಮ’ ಕುರಿತು ಶ್ರೀಗಳು ಮಾತನಾಡಿದರು.
ಮನಸ್ಸು ನಮ್ಮ ಮಿತ್ರನೂ ಹೌದು, ಶತ್ರುವೂ ಹೌದು. ನಮ್ಮನ್ನು ಉದ್ಧಾರ ಮಾಡುವುದು, ಸರ್ವ ನಾಶ ಮಾಡುವುದೂ ಸಹ ಮನಸ್ಸೇ. ಹೀಗಾಗಿ ಮನಸ್ಸಿನ ಮೇಲೆ ನಿಯಂತ್ರಣ ಅತಿ ಮುಖ್ಯ ಎಂದರು.
ನಮ್ಮ ಮನಸ್ಸು ಪ್ರತಿ ಕ್ಷಣವೂ ಆಲೋಚನೆಗಳು ಮತ್ತು ಸಂವಾದಗಳನ್ನು ನಡೆಸುತ್ತದೆ. ಈ ಆಲೋಚನೆಗಳನ್ನು ಕೇಳಿಸಿಕೊಳ್ಳುವ ಸಾಕ್ಷಿ ಮಾತ್ರ ನಾವಾಗಿರುತ್ತೇವೆ ಎಂದರು. ನಮ್ಮ ಮನಸ್ಸಿನ ಮೇಲೆ ನಿಯಂತ್ರಣವಿದ್ದರೆ ಯಶಸ್ಸು ಸಾಧ್ಯವಿದೆ ಎಂದರು.
ಮನಸ್ಸು ಆಲೋಚನೆಗಳ ಪ್ರವಾಹ. ಮನಸ್ಸಿನ ನಿಯಂತ್ರಣಕ್ಕೆ ಯಾವಾಗಲೂ ಉದ್ಯಮಿಯಾಗಿರ ಬೇಕು. ಉದ್ಯಮಿಯಾಗುವುದು ಎಂದರೆ ಪ್ರತಿ ಕ್ಷಣ ಏನಾದರೂ ಕ್ರಿಯಾಶೀಲ ಕೆಲಸ ಮಾಡುತ್ತಿರಬೇಕು. ಶಿಸ್ತು ಬದ್ಧ ದಿನಚರಿ ಮೂಲಕ ಸಮಯವನ್ನು ನಿಯಂತ್ರಿಸಬೇಕು ಹಾಗೂ ಪರೋಪಕಾರಿಗಳಾಗಿ ರಬೇಕು. ಸ್ನೇಹಿತರು, ನೆರೆ ಹೊರೆಯವರಿಗೆ ಏನಾದರೊಂದು ಸಹಾಯ ಮಾಡುತ್ತಿರಬೇಕು ಆಗ ಮನಸ್ಸು ಆರೋಗ್ಯಕರವಾಗಿರುತ್ತದೆ ಎಂದರು.
ಶಾಲಾ-ಕಾಲೇಜುಗಳಲ್ಲಿ ಪಠ್ಯ ಓದಿ ಹೆಚ್ಚು ಅಂಕ ಗಳಿಸುವುದಷ್ಟೇ ಬುದ್ಧಿವಂತಿಕೆ ಅಲ್ಲ. ಸ್ವತಂತ್ರವಾಗಿ ಚಿಂತನೆ ಮಾಡುವುದೇ ಬುದ್ಧಿವಂತಿಕೆ, ಆಗ ಮಾತ್ರ ನಿಜವಾದ ಯಶಸ್ಸು ಲಭಿಸುತ್ತದೆ. ಪಠ್ಯದಲ್ಲಿ ಹೆಚ್ಚು ಅಂಕ ಪಡೆದವರು ಜೀವನದಲ್ಲಿ ವೈಫಲ್ಯ ಅನುಭವಿಸಿದ ಅನೇಕ ಉದಾಹರಣೆಗಳಿವೆ ಎಂದರು. ಐಎಎಸ್, ಐಪಿಎಸ್ ಉತ್ತೀರ್ಣರಾದ ವರು ಜಾಣರು. ಆದರೆ ಹೆಚ್ಚಿನವರು ಪ್ರಾಮಾಣಿ ಕರಾಗಿ ರುವುದಿಲ್ಲ. ಯಾವುದೇ ಕ್ಷೇತ್ರವಾಗಿರಲಿ ಅಲ್ಲಿ ಪ್ರಾಮಾಣಿಕತೆ ಇರಬೇಕು ಎಂದರು.
`ಯೋಗ್ಯ ದಿನಚರಿಯಿಂದ ಮಾತ್ರ ಯಶಸ್ಸು ಸಾಧ್ಯ’ ವಿಷಯ ಕುರಿತು ಮಾತನಾಡಿದ ಶಿಕ್ಷಕ ಜಗನ್ನಾಥ್ ನಾಡಿಗೇರ್, ಶಿಸ್ತು ಬದ್ಧ ಜೀವನವೇ ದಿನಚರಿ ಎಂದು ಹೇಳಿದರು.
ದಿನಚರಿಯಲ್ಲಿನ ಒಂದು ಚಿಕ್ಕ ಬದಲಾವಣೆ ನಮ್ಮ ಉನ್ನತಿಗೂ, ಅವನತಿಗೂ ಕಾರಣವಾಗ ಬಲ್ಲದು. ಈ ಹಿನ್ನೆಲೆಯಲ್ಲಿ ನಮ್ಮ ದಿನಚರಿ ಶಿಸ್ತುಬದ್ಧವಾಗಿರಬೇಕು ಎಂದು ಹೇಳಿದರು.
ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರೂ ಪ್ರತಿಭಾವಂತ ಆಟಗಾರರು. ಜೀವನದಲ್ಲಿ ಶಿಸ್ತು ಕಾಪಾಡಿಕೊಂಡ ಸಚಿನ್ ಎಲ್ಲರ ಮನೆ ಮಾತಾದರು. ಆದರೆ ಅಶಿಸ್ತಿನ ಕಾರಣ ಕಾಂಬ್ಳಿ ತೆರೆ ಮರೆಗೆ ಸರಿಯಬೇಕಾಯಿತು ಎಂದು ಉದಾಹ ರಿಸಿದರು. ದಿನಚರ್ಯ, ಸಹಚರ್ಯ ಹಾಗೂ ಬ್ರಹ್ಮಚರ್ಯ ಈ ಮೂರೂ ಯಶಸ್ವಿ ಜೀವನಕ್ಕೆ ಅತ್ಯಗತ್ಯ. ಏಣಿ ಹತ್ತಲು ಪ್ರತಿಭೆ ಬೇಕು. ಆದರೆ ಅದರ ಮೇಲೆ ನಿಲ್ಲಲು ಉತ್ತಮ ದಿನಚರಿ ಅಗತ್ಯ. ಹೀಗಾಗಿ ಬೆಳಿಗ್ಗೆ ಎದ್ದಾಗಿನಿಂದ ಮಲಗುವವರೆಗೆ ಶಿಸ್ತು ಬದ್ಧ ದಿನಚರಿ ರೂಪಿಸಿಕೊಳ್ಳಬೇಕು ಎಂದರು.
ಉತ್ತಮ ಆಹಾರ ಪದ್ಧತಿ ವಿದ್ಯಾರ್ಥಿಗಳಿಗೆ ಅತಿ ಮುಖ್ಯ. ಸಾತ್ವಿಕ ಆಹಾರದಿಂದ ಏಕಾಗ್ರತೆ ಹೆಚ್ಚುತ್ತದೆ. ಅದರಂತೆ ಉತ್ತಮ ನಿದ್ರೆಯೂ ಮುಖ್ಯ. ನಾವು ಎಷ್ಟು ಗಂಟೆ ಮಲಗುತ್ತೇವೆ ಎಂಬುದಕ್ಕಿಂತ ಎಷ್ಟು ಹೊತ್ತು ನಿದ್ರಿಸುತ್ತೇವೆ ಎಂಬುದು ಮುಖ್ಯ ಎಂದರು.
ಕಥೆಯೊಂದರ ಮೂಲಕ ಉತ್ತಮ ಸ್ನೇಹಿತರ ಮಹತ್ವ ತಿಳಿಸಿಕೊಟ್ಟ ನಾಡಿಗೇರ್, ಜೀವನದಲ್ಲಿ ಯಶಸ್ಸು ಕಾರಣಲೂ ಉತ್ತಮ ಸ್ನೇಹಿತರೂ ಮುಖ್ಯ ಎಂದು ಹೇಳಿದರು. ಸದ್ ಗ್ರಂಥಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳುವಂತೆಯೂ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ರಾಮಕೃಷ್ಣ ಮಿಷನ್ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ರಾಮಕೃಷ್ಣ ಮಿಷನ್ನ ಕಾರ್ಯದರ್ಶಿ ಶ್ರೀ ಸ್ವಾಮಿ ತ್ಯಾಗೀಶ್ವರಾನಂದರು ಉಪಸ್ಥಿತರಿದ್ದರು. ಸ್ವಾಮಿ ತೀರ್ಥಂಕರಾನಂದ ಮಹಾರಾಜ್ ವಂದಿಸಿ ದರು. ಕು.ಶಾರದ ಸ್ವಾಗತಿಸಿದರು. ಮಧ್ಯಾಹ್ನ ಶಿಕ್ಷಕ ರಿಗಾಗಿ ವಿಚಾರಗೋಷ್ಠಿ ಹಾಗೂ ಸಂಜೆ ಭಕ್ತರಿಗಾಗಿ ಭಕ್ತಿ ರಸಗಂಗೆ ನಡೆಯಿತು. ವಿವೇಕ ಹಂಸ ಬಳಗದವರು ವಿಶೇಷ ಭಜನೆ ನಡೆಸಿಕೊಟ್ಟರು.