ಉತ್ತಮ ರಾಜಕಾರಣಿ ಆಯ್ಕೆ ಜನರ ಹೊಣೆ

ಉತ್ತಮ ರಾಜಕಾರಣಿ ಆಯ್ಕೆ ಜನರ ಹೊಣೆ

`ಮಾನವತೆಯ ಬೆಳಕು’ ಕೃತಿ ಲೋಕಾರ್ಪಣೆಗೊಳಿಸಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌

ದಾವಣಗೆರೆ, ಫೆ.20- ವೈದ್ಯರಾದರೆ ವೈದ್ಯಕೀಯ ಕ್ಷೇತ್ರವನ್ನು, ಶಿಕ್ಷಕರಾದರೆ ಶೈಕ್ಷಣಿಕ ಕ್ಷೇತ್ರವನ್ನು ಸುಧಾರಿಸಬಹುದು. ಆದರೆ ರಾಜಕಾರಣಿಗಳಾದರೆ ಎಲ್ಲಾ ಕ್ಷೇತ್ರಗಳಲ್ಲೂ ಸುಧಾರಣೆ ತರಬಹುದು. ಈ ನಿಟ್ಟಿನಲ್ಲಿ ಉತ್ತಮ ರಾಜಕಾರಣಿಗಳನ್ನು ಆಯ್ಕೆ ಮಾಡುವ ಹೊಣೆ ಜನರ ಮೇಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌  ಪ್ರತಿಪಾದಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಜೆ.ಎಂ.ಇಮಾಂ ಟ್ರಸ್ಟ್‌ ಹಾಗೂ ಜೆ.ಎಂ.ಇಮಾಂ ಸ್ಮಾರಕ ಶಾಲೆಯ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಮಾನವತೆಯ ಬೆಳಕು- ಜಗಲೂರು ಮಹಮ್ಮದ್ ಇಮಾಂ’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಹಿಂದೆ ರಾಜಕಾರಣಿಗಳು ರಾಜಕೀಯವನ್ನೂ, ವ್ಯಾಪಾರಿಗಳು ವ್ಯಾಪಾರವನ್ನೇ ಮಾಡುತ್ತಿದ್ದರು. ಇಬ್ಬರಲ್ಲೂ ಪರಸ್ಪರ ಸಹಕಾರವಿರುತ್ತಿತ್ತು. ಬರುಬರುತ್ತಾ ರಾಜಕಾರಣಿಗಳು ಉದ್ಯಮಕ್ಕೂ, ಉದ್ಯಮಿಗಳು ರಾಜಕೀಯಕ್ಕೂ ಕಾಲಿಟ್ಟರು. ಕಾಲಕ್ಕೆ ಅನುಗುಣವಾಗಿ ರಾಜಕಾರಣವೂ ಬದಲಾಯಿತು. ಮೊದಲಿದ್ದ ಪ್ರಾಮಾಣಿಕತೆ ಮರೆಯಾಗಿದೆ. ಮುಂದಿನ ಹತ್ತು ವರ್ಷಗಳಲ್ಲಿ ರಾಜಕಾರಣ ಮತ್ತಷ್ಟು ಕಲುಷಿತಗೊಳ್ಳಬಹುದು ಎಂದು ಹೇಳಿದರು.

ಆಧುನಿಕತೆ ಹಾಗೂ ತಂತ್ರಜ್ಞಾನದ ಕಾಲದಲ್ಲಿ ಮಾನವೀಯತೆ ಮರೆಯಾಗಿದೆ. ಮನುಷ್ಯನ ಜೀವನದಲ್ಲಿ ಮಾನವೀಯತೆಗೆ ಹೆಚ್ಚಿನ ಮಹತ್ವವಿದೆ.  ಯುವ ಜನತೆ ಮಾನವೀಯತೆಯ ರಾಯಭಾರಿಗಳಾಗಬೇಕು. ಆದರೆ ಅದು ಸುಲಭವೂ ಅಲ್ಲ. ಅಂಬೇಡ್ಕರ್, ಇಮಾಂ ಸಾಹೇಬರಂತಹ ಮಾನವೀಯ ಗುಣಗಳು ಯುವ ಜನರಿಗೆ ಪ್ರೇರಣೆ, ಪ್ರೋತ್ಸಾಹ ನೀಡುತ್ತವೆ ಇಂತಹ ಉತ್ತಮ ವ್ಯಕ್ತಿಗಳ ಪುಸ್ತಕ ಓದುವ ಜೊತೆಗೆ ಅವರಂತೆ ಬಾಳಲು ಪ್ರಯತ್ನಿಸಬೇಕು ಎಂದು ಹೇಳಿದರು.

ಜಾತ್ಯತೀತ ತತ್ವ, ಮಾನವೀಯತೆ, ಸಹೋದರತೆ, ಪ್ರೀತಿ, ವಿಶ್ವಾಸದ ಮೂಲಕ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳುವ ಕೆಲಸವಾಗಬೇಕಿದೆ. ನಮ್ಮ ಧರ್ಮ ಪಾಲಿಸುತ್ತಾ, ಮತ್ತೊಂದು ಧರ್ಮವನ್ನು ಗೌರವಿಸುತ್ತಾ ಊರಿಗೆ ಗೌರವ ತರುವ ಜವಾಬ್ದಾರಿ ಎಲ್ಲರ ಮೇಲಿದೆ. ಸಮಾಜದ ಸಮಸ್ಯೆಗಳನ್ನು ಬಗೆಹರಿಸುವ ಗುಣಗಳು ಯುವಕರಲ್ಲಿ ಬರಬೇಕೇ ಹೊರತು, ಬಿಕ್ಕಟ್ಟು ಸೃಷ್ಟಿಸುವಂತಾಗಬಾರದು. ಇಮಾಂ ಸಾಹೇಬರ ಸಂದೇಶವೂ ಇದೇ ಆಗಿತ್ತು ಎಂದು ಅಭಿಪ್ರಾಯಿಸಿದರು.

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಇಮಾಂ ಅವರ ಜೀವನ ಚರಿತ್ರೆಯನ್ನು ಓದಿ, ಅವರ ಆದರ್ಶ, ಮೌಲ್ಯ, ಸಾಧನೆಗಳನ್ನು ಅರ್ಥ ಮಾಡಿಕೊಂಡು, ಅವರ ಆದರ್ಶವನ್ನು ನಾವೂ ಅಳವಡಿಸಿಕೊಂಡರೆ ಅವರಂತೆ ಸಮಾಜ ಮುಖಿಯಾಗಿ ಬಾಳಬಹುದು ಎಂದರು.

ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿ, ಚಿತ್ರದುರ್ಗ ಹಾಗೂ ತುಮಕೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅವರ ಸಾಧನೆ, ಪ್ರಾಮಾಣಿಕತೆಯನ್ನು ಮೆಚ್ಚಿ ಜನರು ಅವರನ್ನು ಆಯ್ಕೆ ಮಾಡಿದ್ದಾರೆ. ಅಂತಹ ರಾಜಕಾರಣಿ ನಾವಾಗಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ದಾದಾಪೀರ್‌ ನವಿಲೇಹಾಳ್‌, ಅನೇಕ ಪ್ರಸಿದ್ಧ ಲೇಖಕರು, ಚಿಂತಕರು ಸೇರಿದಂತೆ ಎಲ್ಲಾ ಮಹತ್ವದ ಲೇಖಕರು ಬರೆದ ಲೇಖನಗಳನ್ನು `ಮಾನವತೆಯ ಬೆಳಕು’ ಪುಸ್ತಕದಲ್ಲಿವೆ. ಇಂದಿನ ರಾಜಕಾರಣಕ್ಕೆ ಮಾನವೀಯ ಸ್ಪಷ್ಟತೆ ಉಂಟುಮಾಡುವ ಸಂಗತಿಗಳು ಪುಸ್ತಕದಲ್ಲಿ ಹೇರಳವಾಗಿವೆ. ಇದು ಎಲ್ಲರನ್ನೂ ತಲುಪಬೇಕು ಎಂದು ಹೇಳಿದರು.

ಶಾಸಕರುಗಳಾದ ಬಿ.ದೇವೇಂದ್ರಪ್ಪ, ಕೆ.ಎಸ್.ಬಸವಂತಪ್ಪ, ಅಬ್ದುಲ್ ಜಬ್ಬಾರ್, ಟ್ರಸ್ಟ್ ಅಧ್ಯಕ್ಷ ಜೆ.ಕೆ.ಹುಸೇನ್ ಮಿಯ್ಯಾ ಸಾಬ್‌, ಮಾಜಿ ಮೇಯರ್ ಕೆ.ಚಮನ್ ಸಾಬ್, ಪಿಂಜಾರ ನದಾಫ್‌ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಲೀಲ್ ಸಾಬ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ, ಉದ್ಯಮಿ ದಾದಾ ಖಲಂದರ್, ಲೇಖಕ ಎನ್.ಟಿ.ಯ‌ರ್ರಿಸ್ವಾಮಿ, ಆದಾಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಗುರು ಹಾಜರಿದ್ದರು. ಪದ್ಮಶ್ರೀ ಪ್ರಾರ್ಥಿಸಿದರು. ಎಂ. ಶಿಲ್ಪ ಸ್ವಾಗತಿಸಿದರು.

error: Content is protected !!