ತ್ರಿಪದಿ ಕವಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ
ದಾವಣಗೆರೆ, ಫೆ.20- ಸರ್ವಜ್ಞರು ಸತ್ಯ ಶುದ್ಧ ಕಾಯಕ ಮಾಡುತ್ತಾ ಅನೇಕ ರೀತಿಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತ್ರಿಪದಿ ಕವಿ `ಸರ್ವಜ್ಞ ಜಯಂತಿ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಮಾಜದ ಅಂಕು-ಡೊಂಕುಗಳನ್ನು ತ್ರಿಪದಿಯಲ್ಲಿ ವರ್ಣನೆ ಮಾಡಿದ್ದಾರೆ. ತಮ್ಮ ತ್ರಿಪದಿಗಳ ಮೂಲಕವೇ ಜೀವನದ ಅನುಭವ ಕಲಿಸಿಕೊಟ್ಟು ಬದುಕಿನ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು. ಇಂತಹ ಮಹಾನ್ ವ್ಯಕ್ತಿಗಳ ತತ್ವವನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಮಾತನಾಡಿ, ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು, ಸಮಾಜದ ಜ್ಞಾನ ಅರಿತವರು. ಈ ನಿಟ್ಟಿನಲ್ಲಿ ಸರ್ವಜ್ಞ ಕವಿ ಬಹು ದೊಡ್ಡ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಹೇಳಿದರು.
ಸಾಮಾನ್ಯರಿಗೂ ಅರ್ಥವಾಗುವ ಸರ್ವಜ್ಞರ ತ್ರಿಪದಿಗಳು ಹಾಗೂ ಅವರ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವಂತಹ ಕೆಲಸ ಮಾಡಬೇಕು ಎಂದರು.
ಸಮಾಜದ ಅಧ್ಯಕ್ಷ ಪುಷ್ಪರಾಜ್ ಮಾತನಾಡಿ, ತ್ರಿಪದಿ ಎಂದರೆ ಮೂರು ಸಾಲುಗಳ ಕವಿತೆ. ಆದ್ದರಿಂದ ಸರ್ವಜ್ಞನನ್ನು ತ್ರಿಪದಿ ಕವಿ ಎನ್ನುತ್ತಾರೆ. ಸರ್ವಜ್ಞರ ವ್ಯಕ್ತಿತ್ವ ಅನಿಕೇತನವಾ ದದ್ದು. ನಿಂತಲ್ಲಿ ನಿಲ್ಲದೆ, ಗಾಳಿಯಂತೆ ಊರೂರು ಸುತ್ತಿದ ಚಾರಣ ಕವಿ ಎಂದು ತಿಳಿಸಿದರು.
ಈ ವೇಳೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಕುಂಬಾರ ಸಮಾಜದ ಕಾರ್ಯದರ್ಶಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.