ದಾವಣಗೆರೆ, ಫೆ.16- ಪೋಷಕರು ತಮ್ಮ ಮಕ್ಕಳ ಮೇಲೆ ಸಾಮರ್ಥ್ಯಕ್ಕೂ ಮೀರಿದ ನಿರೀಕ್ಷೆ ಇಟ್ಟುಕೊಂಡು, ಪರೀಕ್ಷಾ ಸಮಯದಲ್ಲಿ ಒತ್ತಡ ಹೇರುವುದು ಸರಿಯಲ್ಲ ಎಂದು ಜಜಮು ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಕೆ.ಎ. ಛಾಯಾ ಅವರು ಪೋಷಕರಿಗೆ ಕಿವಿಮಾತು ಹೇಳಿದರು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ವಿವೇಕ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ `ಪರೀಕ್ಷಾ ಸಮಯದಲ್ಲಿ-ಮಕ್ಕಳ ಆರೋಗ್ಯ, ಪೋಷಕರಿಗೆ ಸುಲಭ ಸೂತ್ರಗಳು’ ಎಂಬ ವಿಷಯವಾಗಿ ಅವರು ಮಾತನಾಡಿದರು.
ನಾವು ಅಡುಗೆ ಮನೆಯಲ್ಲಿ ಒಂದು ತಿನಿಸು ಮಾಡಬೇಕಾದರೆ, ಅದರ ಸಿದ್ಧತೆ ಎಷ್ಟು ಮುಖ್ಯವೋ ಹಾಗೆಯೇ ಮಕ್ಕಳು ತಮ್ಮ ವಾರ್ಷಿಕ ಪರೀಕ್ಷೆಗಳಿಗೆ ಪೂರ್ವಭಾವಿ ತಯಾರಿ ನಡೆಸುವುದು ಅಷ್ಟೇ ಮುಖ್ಯವಾಗಿರುತ್ತದೆ, ಆದರೆ ಇದು ಒಂದೆರಡು ತಿಂಗಳು ಕಠಿಣ ಶ್ರಮವಾಗಿರದೇ ಶಾಲಾ – ಕಾಲೇಜು ಗಳ ಪ್ರಾರಂಭ ದಿನದಿಂದಲೇ ಶುರುವಾಗಿರಬೇಕು.
`ಯುದ್ಧ ಕಾಲೇ ಶಸ್ತ್ರಾಭ್ಯಾಸ’ ಬೇಡ. ಯಾವ ಮಕ್ಕಳು ತರಗತಿಯ ಮೊದಲನೇ ದಿನದಿಂದ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವರೋ ಅವರಿಗೆ ಪರೀಕ್ಷೆಯು ಸುಲಭವಾಗುತ್ತದೆ.
ಪೋಷಕರು ಸಹಜವಾಗಿ ಮಾಡುವ ತಪ್ಪುಗಳನ್ನು ಪಟ್ಟಿ ಮಾಡಿದ ಅವರು, ಪರೀಕ್ಷೆ ಅಂದಕೂಡಲೇ, ಮಕ್ಕಳಿಗಿಂತ ಪೋಷಕರೇ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ.
ನಮ್ಮ ಐದು ಬೆರಳುಗಳು ಹೇಗೆ ಸಮನಾಗಿ ಲ್ಲವೋ ಹಾಗೆಯೇ ಪ್ರತಿಯೊಂದು ಮಗುವಿನ ಓದುವ, ಗ್ರಹಿಸುವ ಮತ್ತು ಕಾರ್ಯರೂಪದಲ್ಲಿ ತರುವ ಶಕ್ತಿ ಬೇರೆ-ಬೇರೆಯೇ ಇರುತ್ತದೆ. ಹಾಗಾಗಿ ಮಕ್ಕಳಿಗೆ ಪರೀಕ್ಷಾ ಒತ್ತಡವನ್ನು ನಿಭಾಯಿಸುವ ರೀತಿ ತಿಳಿಸಬೇಕು. ಕಲಿಯುವಾಗ ಸಂತೋಷ, ಕ್ರಿಯಾಶೀಲತೆಯಿಂದ ಇರುವುದನ್ನು ಕಲಿಸಬೇಕು.
ಮೂಢನಂಬಿಕೆಗಳ ಬಗ್ಗೆ ತಿಳಿ ಹೇಳಬೇಕು. ಪರೀಕ್ಷೆಯೇ ಜೀವನದ ಕೊನೆಯಲ್ಲ. ಎಷ್ಟೋ ಮಹಾನ್ ಪ್ರತಿಭೆಗಳು ಪರೀಕ್ಷೆಯಲ್ಲಿ ನಪಾಸಾಗಿ ದ್ದರೂ ಮುಂದಿನ ದಿನಗಳಲ್ಲಿ ಎತ್ತರದ ಸ್ಥಾನದಲ್ಲಿದ್ದಾರೆ ಎಂಬುದನ್ನು ಗಮನಿಸಬೇಕು.
ಧ್ಯಾನ, ವ್ಯಾಯಾಮ, ದೇವರ ಪೂಜೆ, ಸಹಜ ನಡಿಗೆ ನೃತ್ಯ, ಸಂಗೀತ ಮುಂತಾದ ಸಹಜ ಸ್ಥಿತಿಗೆ ಬರಬೇಕು. ಇದರಿಂದ ನಿಮ್ಮ ಮಗುವಿಗೆ ಪ್ರೀತಿ ಮತ್ತು ಸಹಜ ಆರೈಕೆ ದೊರೆಯುತ್ತದೆ.
ಯಾವುದಾದರೂ ವಿಷಯದಲ್ಲಿ ಒತ್ತಡ ಹೇರಿದಾಗ, ಮಗುವಿಗೆ ತನ್ನ ಹಿಂದಿನ ಕಠಿಣ ಪರೀಕ್ಷೆಯಲ್ಲಿ ಉತ್ತಮವಾಗಿ ಪುದರ್ಶಿಸಿದ ಸವಿನೆನಪನ್ನು ಮರುಕಲ್ಪನೆ ಮಾಡಿಸಬೇಕು. ತಾಳ್ಮೆಯ ಸವಿಮಾತು, ನಿಮ್ಮ ಇರುವಿಕೆ, ಪ್ರೋತ್ಸಾಹಿಸುವ ನುಡಿಗಳು ಮತ್ತು ಮುಗುಳ್ನಗೆ ಮಗುವಿಗೆ ಬೇಕಿರುವ ಸಹಾಯವಾಗಿರುತ್ತದೆ ಎಂದು ಪೋಷಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬಾಪೂಜಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ. ಜಿ. ಗುರುಪ್ರಸಾದ್, ಮಕ್ಕಳ ತಜ್ಞರಾದ ಡಾ.ಕೌಜಲಗಿ, ಡಾ.ಮೃತ್ಯುಂಜಯ, ಡಾ.ಮಧು ಪೂಜಾರ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ ಮತ್ತಿತರರು ಉಪಸ್ಥಿತರಿದ್ದರು.