ನೀರಿನ ಮೇಲೆ ಹೆಸರು ಬರೆಯುವ ಸಾಧನೆ ನಿಮ್ಮದಾಗಲಿ-ವಿದ್ಯಾರ್ಥಿಗಳಿಗೆ ಗಂಗಾಧರ್ ನಿಟ್ಟೂರ್ ಹಾರೈಕೆ

ನೀರಿನ ಮೇಲೆ ಹೆಸರು ಬರೆಯುವ ಸಾಧನೆ ನಿಮ್ಮದಾಗಲಿ-ವಿದ್ಯಾರ್ಥಿಗಳಿಗೆ ಗಂಗಾಧರ್ ನಿಟ್ಟೂರ್ ಹಾರೈಕೆ

ಮಲೇಬೆನ್ನೂರು, ಫೆ.15- ಕಾಣುವುದಾದರೆ ದೊಡ್ಡ ಕನಸನ್ನು ಕಾಣಿ, ಮಾಡುವುದಾದರೆ ದೊಡ್ಡ ಸಾಧನೆ ಮಾಡಿ ಎಂಬ ಅಬ್ದುಲ್ ಕಲಾಂ ಅವರ ಮಾತಿನಂತೆ ನಿಮ್ಮ ಕನಸು ನಿಮ್ಮನ್ನು ಸದಾ ಎಚ್ಚರಿಸುತ್ತಾ, ಪ್ರಯತ್ನದ ಕಡೆ ಮುಖ ಮಾಡಿಸಲಿ ಎಂದು ಶಿಕ್ಷಕ ಹಾಗೂ ಸಾಹಿತಿ ಬಿ.ಎಲ್.ಗಂಗಾಧರ್ ನಿಟ್ಟೂರ್ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಜಿ.ಬೇವಿನಹಳ್ಳಿ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶುಕ್ರವಾರ ಹರಿಹರ ತಾ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು `ದಾಸ ಸಾಹಿತ್ಯ ಹಾಗೂ ಪರೀಕ್ಷಾ ಪೂರ್ವ ತಯಾರಿ’ ವಿಷಯ ಕುರಿತು ಮಾತನಾಡಿದರು.

ಮರದ ಮೇಲೆ ಮತ್ತು ಬಂಡೆ ಕಲ್ಲಿನ ಮೇಲೆ ಯಾರು ಬೇಕಾದರೂ ತಮ್ಮ ಹೆಸರು ಬರೆಯಬಹುದು. ಆದರೆ ನೀರಿನ ಮೇಲೆ ಹೆಸರು ಬರೆಯುವ ಪ್ರಯತ್ನ ಬಹು ದೊಡ್ಡ ಸಾಹಸ ಮತ್ತು ಸಾಧನೆಯೇ ಸರಿ ಎಂದು ಕಲಾಂ ಹೇಳಿದ್ದಾರೆ. ಅಂತಹ ಸಾಧನೆ ನಿಮ್ಮದಾಗಲಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 

`ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ಪುರಂದರ
ದಾಸರ ವಾಣಿಯಂತೆ ಗುರುಗಳಿಗೆ ವಿಧೇಯರಾಗಿ ಅವರ ಸಲಹೆ, ಸೂಚನೆ ಮತ್ತು ಸೂಕ್ತ ಮಾರ್ಗದರ್ಶನದಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯಿರಿ ಎಂದು ಶುಭ ಹಾರೈಸಿದರು.

ಬೆಟ್ಟದ ತುದಿ ನಮ್ಮ ಗುರಿಯಾಗಿದ್ದರೂ ಹತ್ತುವ ಕಾಲಿನ ಕಡೆ ನಮ್ಮ ಗಮನ ಇರಬೇಕು ಎಂಬ ನುಡಿಯಂತೆ ಏಕಾಗ್ರತೆ, ಸತತ ಅಭ್ಯಾಸ, ನಿರಂತರ ಪ್ರಯತ್ನದಿಂದ ಏನು ಬೇಕಾದರೂ ಸಾಧಿಸಬಹುದು. 

ಹಿಂದಿನ ಇತಿಹಾಸ ತಿಳಿದವರು ಮಾತ್ರ
ಹೊಸ ಇತಿಹಾಸ ಸೃಷ್ಟಿಸಬಲ್ಲರು. ಹಾಗಾಗಿ ನಿಮ್ಮ ಶಾಲೆಯ ಪೂರ್ವ ಇತಿಹಾಸ ಅರಿತು ಹೊಸ ಇತಿಹಾಸ ಬರೆಯುವ ಮೂಲಕ ಶಾಲೆಗೂ
ಹಾಗೂ ಹೆತ್ತವರಿಗೂ ಕೀರ್ತಿ ತನ್ನರಿ ಎಂದು ಗಂಗಾಧರ್ ಹೇಳಿದರು.

ನಂದಿತಾವರೆ ಬಸವೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಬಿ.ಪಿ.ಉಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಪರ ಹೋರಾಟಗಾರ ಎಕ್ಕೆಗೊಂದಿ ರುದ್ರಗೌಡ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಜಿಲ್ಲಾ ಕಸಾಪ ಸದಸ್ಯ ರಿಯಾಜ್ ಅಹ್ಮದ್, ತಾ. ಕಸಾಪ ಸಂಘಟನಾ ಕಾರ್ಯದರ್ಶಿ ಹೆಚ್.ಎಂ.ಸದಾನಂದ, ಸಿದ್ದಲಿಂಗೇಶ್ವರ ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕಮಲಾಕ್ಷಪ್ಪ ಕಲ್ಲೇರ, ಹೋಬಳಿ ಕಸಾಪ ಕಾರ್ಯದರ್ಶಿ ಚಂದ್ರಶೇಖರ್ ಭಾಗವಹಿಸಿದ್ದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರಿಹರ ತಾ. ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ ಅವರು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿ, ಸರಿ ಉತ್ತರ ಹೇಳಿದವರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಿದರು. 

ಮಲೇಬೆನ್ನೂರು ಹೋಬಳಿ ಕಸಾಪ ಅಧ್ಯಕ್ಷ ದಂಡಿ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕ ಬಿ.ವಿ.ನಾಗರಾಜ್ ಸ್ವಾಗತಿಸಿದರು. ಶಿಕ್ಷಕ ಹೆಚ್.ವಿ.ಶಿವನಗೌಡ ನಿರೂಪಣೆ ಮಾಡಿದರೆ, ಕೊನೆಯಲ್ಲಿ ಶಿಕ್ಷಕ ಕೆ.ಎಂ.ರವೀಂದ್ರ ವಂದಿಸಿದರು.

error: Content is protected !!