ಜೀವ ನದಿಗೆ ಇಂದು 6ನೇ ವರ್ಷದ `ತುಂಗಭದ್ರಾ ಆರತಿ’

ಜೀವ ನದಿಗೆ ಇಂದು 6ನೇ ವರ್ಷದ `ತುಂಗಭದ್ರಾ ಆರತಿ’

ತುಂಗಭದ್ರಾ ಆರತಿ ಎಂದು ಮರುನಾಮಕರಣ ಮಾಡಿದ ಜಗದೀಶ್ವರ ಶ್ರೀಗಳಿಗೆ ಸ್ಥಳೀಯರಿಂದ ಅಭಿನಂದನೆ

ಕೋಡಿಯಾಲ ಹೊಸಪೇಟೆಯ ತುಂಗಭದ್ರಾ ನದಿ ತೀರದಲ್ಲಿರುವ ಪುಣ್ಯಕೋಟಿ ಮಠದ ವತಿಯಿಂದ ಇಂದು ಸಂಜೆ 5.30 ರಿಂದ ತುಂಗಭದ್ರಾ ಆರತಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶ್ರೀಶೈಲ ಮಹಾ ಪೀಠದ ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. 

ದೊಡ್ಡ ಹುಣಸೇಕಲ್ಮಠದ ಚನ್ನಬಸವ ಶ್ರೀ, ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಪುಣ್ಯಾಶ್ರಮದ ರೇವಣಸಿದ್ಧ ಶಿವಾಚಾರ್ಯ ಶ್ರೀ, ಅಕ್ಕಿ ಆಲೂರು ಮುತ್ತಿನ ಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ಧರ್ಮಕ್ಷೇತ್ರ ನಾಗವಂದ ಶಿವಯೋಗಿ ಶಿವಾನಂದ ಶಿವಾಚಾರ್ಯ ಶ್ರೀ, ವಿಜಯಪುರ ಸಿದ್ಧಲಿಂಗೇಶ್ವರ ಮಠದ ಸಿದ್ಧಲಿಂಗ ಶ್ರೀಗಳು ಹಾಗೂ ಸ್ಥಳೀಯ ಶಾಸಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗವಹಿಸುವರು.

ಹರಿಹರ, ಫೆ.14- ಆರನೇ ತುಂಗಾರತಿಯನ್ನು ಭಕ್ತರ ಆಶಯದಂತೆ ಫೆ.15ರ ಇಂದು ಸಂಜೆ 5 ಗಂಟೆಗೆ ತುಂಗಭದ್ರಾ ಆರತಿ ಎಂದು ನದಿಯ ಪೂರ್ಣ ಪ್ರಮಾಣದ ಹೆಸರಿನಲ್ಲಿ ಪೂಜಾ ಕಾರ್ಯಕ್ರಮ  ನಡೆಯಲಿದೆ ಎಂದು ಬಾಲಯೋಗಿ ಜಗದೀಶ್ವರ ಶ್ರೀಗಳು ಹೇಳಿದರು. 

ನಗರದ ಸಮೀಪದಲ್ಲಿರುವ ಕೋಡಿಯಾಲ ಹೊಸಪೇಟೆ ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿರುವ ಪುಣ್ಯಕೋಟಿ ಮಠದಿಂದ ಆಯೋಜಿಸಿರುವ `ತುಂಗಭದ್ರಾ ಆರತಿ’ ಎಂದು ಘೋಷಿಸಿರುವ ಹಿನ್ನೆಲೆ ಹರಿಹರದ ಸಾಹಿತಿಗಳು, ಪ್ರಗತಿಪರ ಚಿಂತಕರು ಹಾಗೂ ಮಾಧ್ಯಮ ಮಿತ್ರರರಿಂದ ಗುರುವಾರ ಅಭಿನಂದನಾ ಗೌರವವನ್ನು ಸ್ವೀಕರಿಸಿದ ಶ್ರೀಗಳು ಮಾತನಾಡಿದರು.

ಪುಣ್ಯಕೋಟಿ ಮಠಕ್ಕೆ ಭಕ್ತರೇ ಆಸ್ತಿ, ಅವರ ಆಶಯದಂತೆ ತುಂಗಾರತಿಯನ್ನು ತುಂಗಭದ್ರಾ ಆರತಿಯಾಗಿ ಆಯೋಜಿಸುತ್ತಿರುವುದು ನಮಗೂ ಖುಷಿ ತಂದಿದೆ. ಶ್ರೀಮಠದ ಭಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪ್ರಕೃತಿ ಪೂಜೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಹಿರಿಯ ಸಾಹಿತಿ ಪ್ರೊ.ಸಿ.ವಿ ಪಾಟೀಲ್ ಮಾತನಾಡಿ, ಪುಣ್ಯಕೋಟಿ ಮಠದ ಜಗದೀಶ್ವರ ಶ್ರೀಗಳು ಆಯೋಜಿಸುತ್ತಿರುವ ತುಂಗಾರತಿ ಕಾರ್ಯಕ್ರಮವು ಮಧ್ಯ ಕರ್ನಾಟಕದಲ್ಲಿ ಅತ್ಯಂತ ಜನ ಮನ್ನಣೆ ಪಡೆದ ಕಾರ್ಯಕ್ರಮವಾಗಿದೆ ಎಂದರು.

ಶ್ರೀಗಳು ಈ ವರ್ಷದಿಂದಲೇ ತುಂಗಾರಾತಿಯನ್ನು `ತುಂಗಭದ್ರಾ ಆರತಿ’ ಎಂದು ಘೋಷಣೆ ಮಾಡುವ ಮೂಲಕ ಜನರ ಆಶೋತ್ತರಗಳಿಗೆ ಮನ್ನಣೆ ನೀಡಿರುವುದಕ್ಕೆ ಅಭಿನಂದನೆಗಳ ಸಲ್ಲಿಸಿದರು.

ಹಿರಿಯ ಸಾಹಿತಿ ಭಿಕ್ಷಾವರ್ತಿಮಠ ಮಾತನಾಡಿ, ಶ್ರೀಗಳು ಎಲ್ಲರ ಧ್ವನಿಯಾಗಿ ತುಂಗಾರಾತಿಯನ್ನು ತುಂಗಭದ್ರಾ ಆರತಿಯಾಗಿ ಮರು ನಾಮಕರಣಗೊಳಿಸಿ ಕಾರ್ಯಕ್ರಮ ಆಯೋಜಿಸಿರುವುದು ಎಲ್ಲರಲ್ಲೂ ಸಂತೋಷ ಮೂಡಿಸಿದೆ ಎಂದರು.

ಕಾರ್ಮಿಕ ಮುಖಂಡ ಹೆಚ್.ಕೆ ಕೊಟ್ರಪ್ಪ ಮಾತನಾಡಿ, 6ನೇ ವರ್ಷದ ತುಂಗಾರತಿಯನ್ನು ತುಂಗಭದ್ರಾ ಆರತಿಯನ್ನಾಗಿ ಆಚರಣೆ ಮಾಡುತ್ತಿರುವುದು ಜನರ ಅಪೇಕ್ಷೆಗೆ ಮನ್ನಣೆ ನೀಡಿದಂತಾಗಿದೆ ಎಂದು  ತಿಳಿಸಿದರು.

ಈ ವೇಳೆ ನಗರಸಭೆ ಸದಸ್ಯ ಕೆ.ಬಿ ರಾಜಶೇಖರ್, ವಾಲ್ಮೀಕಿ ಮಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್, ವಕೀಲ ವೀರೇಶ್ ಅಜ್ಜಣ್ಣನವರ್, ಉದ್ಯಮಿ ಸುರೇಶ್ ರಾಜೇನವರ್, ಪತ್ರಕರ್ತರಾದ ಶೇಖರಗೌಡ ಪಾಟೀಲ್, ಜಿ.ಕೆ ಪಂಚಾಕ್ಷರಿ ಮಾತನಾಡಿದರು. ಕೃಷ್ಣ ರಾಜೊಳ್ಳಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚೇತನ್ ಸೇರಿದಂತೆ ಇತರರಿದ್ದರು.

error: Content is protected !!