ಮಲೇಬೆನ್ನೂರು, ಫೆ.13- ಭದ್ರಾ ಶಾಖಾ ನಾಲಾ 3ನೇ ಉಪವಿಭಾಗದ 10ನೇ ಉಪನಾಲೆಯಲ್ಲಿ ಆಂತರಿಕ ಸರದಿ ಪಾಲಿಸದ ಕಾರಣ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ನಿಗದಿತ ಪ್ರಮಾಣದಲ್ಲಿ ನೀರು ಬರುತ್ತಿಲ್ಲ ಎಂದು ಆರೋಪಿಸಿದ ರೈತರು ಬುಧ ವಾರ ರಾಜ್ಯ ಹೆದ್ದಾರಿ – 25ರಲ್ಲಿ ರಸ್ತೆ ತಡೆ ನಡೆಸಿದರು.
10ನೇ ಉಪನಾಲೆ ವ್ಯಾಪ್ತಿಯ ರೈತರ ಒತ್ತಡಕ್ಕೆ ಮಣಿದು 2 ದಿನ ಹೆಚ್ಚುವರಿಯಾಗಿ ಇಂಜಿನಿಯ ರ್‌ಗಳು ನೀರು ಹರಿಸುತಿದ್ದಾರೆ. ಆಂತರಿಕ ಸರದಿ ಯಂತೆ 10, 10 ಎ, 12, 12ಎ, 11ಬಿ ಹಾಗೂ 14ನೇ ಉಪನಾಲೆಗಳಿಗೆ ನೀರು ಹರಿಸಬೇಕಿತ್ತು.
ಅಚ್ಚುಕಟ್ಟು ವ್ಯಾಪ್ತಿಯ 11ಎ, 13, 11ಸಿ, ಡಿ, ಇ, ಎಫ್, 15, 16, 17ನೇ ಉಪನಾಲೆಗಳಿಗೆ ನೀರು ಹರಿದು ಬರುತ್ತಿಲ್ಲ. ಆಂತರಿಕ ಸರದಿ ಉಲ್ಲಂಘನೆ ಮಾಡಲಾಗಿದೆ ಎಂದು ಹೊಳೆಸಿರಿಗೆರೆ, ಕಮಲಾಪುರ, ಲಕ್ಕಶೆಟ್ಟಿಹಳ್ಳಿ ರೈತರು ವಾಗ್ವಾದ ನಡೆಸಿ, ರಸ್ತೆ ತಡೆಗೆ ಮುಂದಾದರು.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಾಲೆ ನೀರು ಸಮಸ್ಯೆ ಎಂಜಿನಿಯರ್‌ರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ, ಪ್ರಯಾಣಿಕರಿಗೆ ತೊಂ ದರೆ ಮಾಡಬೇಡಿ, ರಸ್ತೆ ತಡೆ ಕೈಬಿಡಿ ಎಂದರು.
ರಾಜಕಾರಣಿಗಳು, ಇಂಜಿನಿಯರ್‌ಗಳು, ಡಿಸಿ, ತಹಶೀಲ್ದಾರ್ ಬಗ್ಗೆ ವಿಶ್ವಾಸ ಇಲ್ಲ. ಕೊನೆ ಭಾಗದ ರೈತರ ನೀರಿನ ಸಮಸ್ಯೆ ಬಗ್ಗೆ ಯಾರಿಗೂ ಇಚ್ಛಾಶಕ್ತಿ ಇಲ್ಲ. ಒಮ್ಮೆ ಕೂಡ ಯಾರೊಬ್ಬರು ಜಮೀನಿಗೆ ಕಾಲಿಡುವ ಧೈರ್ಯ ಮಾಡಿಲ್ಲ.
ಜಿಲ್ಲಾಡಳಿತ, ಪೊಲೀಸ್, ಕಾನೂನು ಸುವ್ಯವಸ್ಥೆ ಬಗ್ಗೆ ನೀವು ಮಾತನಾಡುತ್ತೀರಿ. ನಮ್ಮ ಜಮೀನಿಗೆ ನೀರು ಪಡೆಯುವುದು ನಮ್ಮ ಹಕ್ಕು, ಹೋರಾಟ ಮಾಡುವುದು ಕೂಡಾ ಅನಿವಾರ್ಯ ಎಂದು ರೈತರು ಪೊಲೀಸರಿಗೆ ಎಚ್ಚರಿಸಿದರು.
ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸಿದರೆ, ನಾವು ನಿಮಗೆ ತೊಂದರೆ ನೀಡುವ ಬದಲು ನಮ್ಮ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಾ ಇರ್ತೇವೆ ಎಂದು ರೈತರು ಹರಿಹಾಯ್ದರು.
ಕೊನೆಗೂ ಪೊಲೀಸರು ರೈತರ ಜೊತೆ ಸಂಧಾನ ನಡೆಸಿ, ರಸ್ತೆ ತಡೆ ತೆರವು ಮಾಡಿಸಿದರು. ನಂತರ ನೀರಾವರಿ ಕಚೇರಿಯಲ್ಲಿ ಪ್ರತಿಭಟನೆ ಮುಂದುವರೆದಿತ್ತು. ಬಸವಾಪಟ್ಟಣ ಉಪವಿಭಾಗದ ಎಇಇ ಧನಂಜಯ ಅವರು ರೈತರೊಂದಿಗೆ ಮಾತನಾಡಿದರು.
ಆಂತರಿಕ ಸರದಿ ಬದಲಾವಣೆ ಕುರಿತು ಪ್ರಕಟಣೆ ಹೊರಡಿಸಬೇಕು. 11 ದಿನ ಆಂತರಿಕ ಸರದಿ ರೂಪಿಸಿ, ಕೊನೆಭಾಗಕ್ಕೆ ನೀರು ಹರಿಸಿ ಎಂದು ರೈತರು ಪಟ್ಟುಹಿಡಿದರು.
ನಾಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಇಂಜಿನಿಯರ್‌ಗಳು ಆಂತರಿಕ ಸರದಿ ಉಲ್ಲಂಘಿಸಿದರೆ, ಕೊನೆ ಭಾಗಕ್ಕೆ ಹೇಗೆ ನೀರು ತಲುಪುತ್ತದೆ ? ತಾರತಮ್ಯದ ಕೆಲಸವನ್ನು ಬೇಸಿಗೆ ವೇಳೆ ಮಾಡಬೇಡಿ ಎಂದು ರೈತರು ಇಂಜಿನಿಯರ್‌ರನ್ನು ತರಾಟೆಗೆ ತಗೆದುಕೊಂಡರು.
ರೈತರ ಒತ್ತಡಕ್ಕೆ ಮಣಿದ ಎಇಇ ಅವರು 10ನೇ ಉಪನಾಲೆ ಗೇಟ್ ಹಾಕಿಸಿದರು. ಆಗ ರೈತರು ಪ್ರತಿಭಟನೆ ಕೈಬಿಟ್ಟರು.
ಗ್ರಾ.ಪಂ ಅಧ್ಯಕ್ಷ ರಮೇಶ್, ಗಂಗಾಧರ್, ವಸಂತಣ್ಣ, ಬಸವರಾಜ್, ಹಳೇಮನೆ ನಾಗರಾಜ್, ಕೊಟ್ರೆಶ್, ಷಣ್ಮುಖಪ್ಪ, ಮಲ್ಲಪ್ಪ, ಮಲ್ಲಿಕಾರ್ಜುನ್, ಗಣೇಶ್, ಬೀರಪ್ಪ, ಬಳ್ಳಾರಿ ಕರಿಬಸಪ್ಪ ಸೇರಿದಂತೆ ಇನ್ನೂ ಅನೇಕ ರೈತರು ಈ ವೇಳೆ ಇದ್ದರು. ಪೊಲೀಸರು ಭದ್ರತೆ ಒದಗಿಸಿದ್ದರು.