ಇಡೀ ಕುಟುಂಬಗಳೇ ಜೀತಕ್ಕೆ

ಇಡೀ ಕುಟುಂಬಗಳೇ ಜೀತಕ್ಕೆ

ಜೀತ ಪದ್ಧತಿ ನಿರ್ಮೂಲನೆ ದಿನಾಚರಣೆ ಮತ್ತು ಕಾರ್ಯಾಗಾರದಲ್ಲಿ ಮುಕ್ತಿ ಅಲೈಯನ್ಸ್ ಪ್ರತಿನಿಧಿ ಬೃಂದಾ ಅಡಿಗ ಕಳವಳ

ದಾವಣಗೆರೆ, ಫೆ 13- ದಾವಣಗೆರೆ ಸೇರಿದಂತೆ ಹಲವು ಜಿಲ್ಲೆ, ನಗರಗಳ ಬಡವರ ಅನಿವಾರ್ಯತೆಯ ಲಾಭ ಪಡೆಯುವ ಕೆಲವರು, ಇಡೀ ಕುಟುಂಬಕ್ಕೆ ಕೆಲಸ ಕೊಡಿಸುವುದಾಗಿ ಬೆಂಗಳೂರಿಗೆ ಕರೆದೊಯ್ದು ಬಂಧನದಲ್ಲಿಟ್ಟು ದುಡಿಸಿಕೊಳ್ಳುತ್ತಿದ್ದಾರೆ ಎಂದು ಮುಕ್ತಿ ಅಲೈಯನ್ಸ್ ಪ್ರತಿನಿಧಿ ಬೃಂದಾ ಅಡಿಗ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ ಮತ್ತು ಮುಕ್ತಿ ಅಲೈಯನ್ಸ್ ಕರ್ನಾಟಕ ಸಹಯೋಗದಲ್ಲಿ ಜೀತ ಪದ್ಧತಿ ನಿರ್ಮೂಲನೆ ದಿನಾಚರಣೆ ಮತ್ತು ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೀತ ಪದ್ಧತಿ ಎಂದರೆ ಮೇಲ್ನೋಟಕ್ಕೆ ಕಾರ್ಮಿಕರನ್ನು ಬಲವಂತವಾಗಿ ದುಡಿಸಿಕೊಳ್ಳುವ ಒಂದು ಮುಖ ಮಾತ್ರ ಕಾಣಿಸುತ್ತದೆ. ಆದರೆ ಇದರಿಂದ ಹಲವು ವಿಧದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಹೇಳಿದರು.

ಬಡತನದಲ್ಲಿರುವ ಕುಟುಂಬದ ಯಜಮಾನನನ್ನು ಮಾತ್ರ ಜೀತ ಪದ್ಧತಿಗೆ ಸೆಳೆಯದೆ, ಇಡೀ ಕುಟುಂಬವನ್ನು ಜೀತಕ್ಕೆ ಹಚ್ಚುವ ಕೃತ್ಯಗಳು ಇತ್ತೀಚೆಗೆ ನಡೆಯುತ್ತಿವೆ. ಕುಟುಂಬದ ಎಲ್ಲ ಸದಸ್ಯರ ಸ್ವಾತಂತ್ರ್ಯದ ಹಕ್ಕು, ಮಕ್ಕಳ ಶಿಕ್ಷಣದ ಹಕ್ಕು ಕಳೆದುಕೊಳ್ಳುತ್ತಾರೆ ಎಂದರು.

ಮತ್ತೋರ್ವ ಪ್ರತಿನಿಧಿ ರಾಜೇಂದ್ರನ್ ಮಾತನಾಡುತ್ತಾ, ಇಟ್ಟಿಗೆ ಭಟ್ಟಿಗಳು, ಕಲ್ಲು ಕ್ವಾರಿ, ಅಡಿಕೆ ಸಂಬಂಧಿತ ಉದ್ಯಮ, ಖೇಣಿ ಮನೆಗಳು ಮತ್ತು ಅಕ್ಕಿ ಗಿರಣಿಗಳಲ್ಲಿ ಇಂದಿಗೂ ಜೀತದಾಳುಗಳನ್ನು ದುಡಿಸಿಕೊಳ್ಳಲಾಗುತ್ತಿದೆ. ಬಿಹಾರ, ಮಧ್ಯಪ್ರದೇಶ ಸೇರಿದಂತೆ, ಇತರೆ ರಾಜ್ಯಗಳು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಬಡ ಕಾರ್ಮಿಕರು ಜೀತದಾಳು ಪದ್ಧತಿಗೆ ಬಲಿಯಾಗುತ್ತಿದ್ದಾರೆ ಎಂದರು.

ಹರಿಹರ ಭಾಗದ ಇಟ್ಟಿಗೆ ಭಟ್ಟಿಗಳು, ದಾವಣಗೆರೆ ನಗರ, ತಾಲ್ಲೂಕು ಹಾಗೂ ಹರಿಹರ ತಾಲ್ಲೂಕುಗಳಲ್ಲಿರುವ ಅಕ್ಕಿ ಮಿಲ್‌ಗಳಲ್ಲೂ ಹೊರ ರಾಜ್ಯದ ಜೀತದಾಳುಗಳು ಇದ್ದಾರೆ ಎಂದರು.

ಕಾರ್ಯಾಗಾರಕ್ಕೂ ಮುನ್ನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ಸರ್ಕಾರದ ಯೋಜನೆಗಳಿಂದ ಬಡ ವರೂ ಸಹ ಬದುಕನ್ನು ಕಟ್ಟಿಕೊಂಡಿದ್ದು ಜೀತ ಪದ್ದತಿ ನಿರ್ಮೂಲನೆಗೂ ಸಹಕಾರಿಯಾಗಿದೆ ಎಂದರು.

ಹಿಂದಿನ ದಿನಮಾನದಲ್ಲಿ ಶ್ರೀಮಂತರಿಂದ ಹಣ ಪಡೆದು ಹಣ ತೀರುವಳಿಗೆ ಕೆಲಸ ಮಾಡುವ ಪದ್ದತಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಂದ ಬಡವರು  ಉತ್ತಮ ಬದುಕನ್ನು ಕಟ್ಟಿಕೊಳ್ಳುವಂತಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್ ಮಾತನಾಡಿ,  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೀತ ಪದ್ದತಿ ಕಂಡು ಬಂದಿರುವುದಿಲ್ಲ. ಜೀತ ಕಾರ್ಮಿಕರು ಕಂಡು ಬಂದರೆ ಅವರಿಗೆ ವಸತಿ ಕಲ್ಪಿಸುವುದು, ಸ್ವ ಉದ್ಯೋಗಕ್ಕಾಗಿ ಕೌಶಲ್ಯ ತರಬೇತಿ, ವಿದ್ಯಾಭ್ಯಾಸ,  ಉದ್ಯೋಗ ಹಾಗೂ ಬ್ಯಾಂಕ್‍ಗಳಲ್ಲಿ ಸಾಲ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಮೂಲಕ ಕಾರ್ಯಕ್ರಮಗಳ ಅನುಷ್ಟಾನ ಮಾಡಲಾಗುತ್ತಿದೆ ಎಂದರು.  

ಜಿಲ್ಲೆಯಲ್ಲಿ ಜೀತ ಪದ್ದತಿ ನಿರ್ಮೂಲನಾ ಸಮಿತಿ ರಚನೆ ಮಾಡಲಾಗಿದೆ, ಜಿಲ್ಲಾ ಮಟ್ಟದ ಸಮಿತಿಯಲ್ಲಿ ನ್ಯಾಯಾಧೀಶರು ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಜೀತ ಪದ್ಧತಿ ಕುರಿತು ಬರುವ ದೂರುಗಳನ್ನು ಪರಿಶೀಲಿಸಿ ಅಗತ್ಯ ಕ್ರಮವನ್ನು ತೆಗೆದುಕೊಂಡು ಜಿಲ್ಲೆಯಲ್ಲಿ  ಜೀತ ಪದ್ದತಿ ಸಂಪೂರ್ಣ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. 

ವಕೀಲರ ಸಂಘದ ಅಧ್ಯಕ್ಷ  ಎಲ್.ಹೆಚ್ ಅರುಣಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಮಂಜುನಾಥ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್,  ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಬಿ, ಯೋಜನಾ ನಿರ್ದೇಶಕರಾದ ರೇಷ್ಮ ಕೌಸರ್, ಮುಕ್ತಿ ಅಲೈಯನ್ಸ್ ಸಂಚಾಲಕಿ ಕ್ರಿಸ್ಟೋಫರ್ ಸ್ಪ್ಯಾನಿ  ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

error: Content is protected !!