ಐರಣಿ ಮಠದ ನೂತನ ಪೀಠಾಧಿಪತಿಯ ಪಟ್ಟಾಭಿಷೇಕದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
ರಾಣೇಬೆನ್ನೂರು, ಫೆ. 10- ಇವರು ಸ್ವಾಮೀಜಿ ಅಣ್ಣ, ತಮ್ಮ, ಅಳಿಯ, ಮಾವ ಎಂದು ಪರಿಚಯಿ ಸುವ ಮಠಗಳಾಗಬಾರದು. ಭಕ್ತರನ್ನು ಪರಿಚಯಿಸುವ ಮಠಗಳಾಗಬೇಕು. ಅಣ್ಣ-ತಮ್ಮಂದಿರ ಹೆಂಡಿರ ಜೊತೆ ಸರಸ – ಸಲ್ಲಾಪವಾಡುವ ಮಠಗಳಾಗ ಬಾರದು. ರಕ್ತ ಸಂಬಂಧಿಗಳ ಮಠವಾಗದೇ ಭಕ್ತ ಸಂಬಂಧಿಗಳ ಮಠವಾಗಬೇಕು ಎಂದು ಸಾಣೇಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ದಿನಾಂಕ 8ರಿಂದ ನಡೆದ ತಾಲ್ಲೂ ಕಿನ ಐರಣಿ ಹೊಳೆಮಠದ ನೂತನ ಪೀಠಾಧಿಪತಿಯ ಪಟ್ಟಾಭಿಷೇಕ ಹಾಗೂ ತುಲಾಭಾರ ಕಾರ್ಯಕ್ರಮ-ಧರ್ಮಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶಿರ್ವಚನ ನೀಡುತ್ತಿದ್ದರು.
ಇಂದಿನ ರಾಜಕೀಯ ಕ್ಷೇತ್ರ ಕುಲಗೆಟ್ಟಿದೆ, ಸಂಪೂರ್ಣ ಹಾಳಾಗಿದೆ. ಧರ್ಮ ಗುರುಗಳು ರಾಜಕಾರಣಿಗಳನ್ನು ಕರೆದು ಬುದ್ಧಿ ಹೇಳುವಂತಿರಬೇಕು. ಭಕ್ತರಲ್ಲಿ ಭೇದ-ಭಾವವೆಣಿಸದ, ನ್ಯಾಯ- ನಿಷ್ಠೂರತೆ ಹೊಂದಿರುವ ಗುರುಗಳು ಈ ಕಾರ್ಯ ಮಾಡಲು ಸಾಧ್ಯವಾಗಲಿದೆ. ಗುರು ದಾರಿ ತಪ್ಪಿದರೆ ಶಿಷ್ಯ, ಶಿಷ್ಯ ದಾರಿ ತಪ್ಪಿದರೆ ಗುರು ಕರೆದು ಬುದ್ಧಿ ಹೇಳುವಂತಿರಬೇಕು. ಒಬ್ಬರಿಗೆ ಇತರರು ಅಂಜಿ ಸರಿ ದಾರಿಯಲ್ಲಿ ನಡೆಯುವಂತಿರಬೇಕು. ಹಾಗಾದಲ್ಲಿ ಮಠದ, ಮಠದ ಭಕ್ತರ ಉದ್ಧಾರ ಸಾಧ್ಯವಾಗಲಿದೆ ಎಂದು ಶ್ರೀಗಳು ನುಡಿದರು.
ಭಕ್ತರೆಲ್ಲರನ್ನು ಸಮಭಾವದಿಂದ ನೋಡುವ ಸ್ವಾಮೀಜಿಯಾಗಬೇಕು
ನಾಡಿನಲ್ಲಿ ಮಠಗಳಿಗೆ ಕೊರತೆಯಿಲ್ಲ.ಮಠಗಳಿಗೆ, ಸ್ವಾಮೀಜಿಗಳಿಗೆ ಭಕ್ತಿ ಸಲ್ಲಿಸುವ ಭಕ್ತರು ಅಪಾರ ಸಂಖ್ಯೆಯಲಿದ್ದಾರೆ. ಸ್ವಾಮಿಗಳನ್ನು ಪರೀಕ್ಷಿಸದೇ ಅವರು ಹಾಕಿದ ಕಾವಿ ಬಟ್ಟೆಯ ಲಾಂಛನಕ್ಕೆ ಗೌರವ ಕೊಡುವ ಭಕ್ತರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಅವರು ಸಲ್ಲಿಸುವ ಭಕ್ತಿಗೆ ಬೆಲೆ ಕೊಡುವ ಸ್ವಾಮೀಜಿಯಾಗಬೇಕು. ಭಕ್ತರಲ್ಲಿ ಶ್ರೀಮಂತ, ಬಡವ, ಜಾತಿ, ಅಧಿಕಾರ, ಅಂತಸ್ತುಗಳನ್ನು ನೋಡದೆ ಮಠಕ್ಕೆ ಬರುವ ಭಕ್ತರೆಲ್ಲರನ್ನು ಸಮಭಾವದಿಂದ ನೋಡುವ ಸ್ವಾಮೀಜಿಯಾಗಬೇಕು.
– ಪಂಡಿತಾರಾಧ್ಯ ಶ್ರೀಗಳು, ಸಾಣೇಹಳ್ಳಿ
ಘನತೆ, ಗೌರವ, ಸಭ್ಯತೆ, ಹೃದಯವಂತಿಕೆಯ ಬದುಕು, ಸರಳತೆ, ಸಜ್ಜನಿಕೆಯ ಸಾಗರದಂತೆ ಗುರು ಇರಬೇಕು. ಬಸವರಾಜ ದೇಶಿಕೇಂದ್ರ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಬಹಳಷ್ಟು ವಿದ್ವತ್ತು ಪಡೆದು, ಅಪಾರ ಜ್ಞಾನ ಗಳಿಸಿ ಮಠದ ಘನತೆ ಹೆಚ್ಚಿಸುವಲ್ಲಿ ನೂತನ ಸಿದ್ದಾರೂಢ ಶ್ರೀಗಳು ಬಹಳಷ್ಟು ಶ್ರಮಪಡಬೇಕು ಎಂದು ಡಾ. ಪಂಡಿತಾರಾಧ್ಯ ಶ್ರೀಗಳು ನುಡಿದರು.
ಕಾಗಿನಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು, ಗದಗ ಶಿವಾನಂದ ಮಠದ ಸದಾಶಿವಾನಂದ ಸ್ವಾಮಿಗಳು, ಕುಳ್ಳೂರು ಬಸವಾನಂದ ಸ್ವಾಮಿಗಳು, ಹೊನ್ನಾಳಿ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ, ಆವರಗೊಳ್ಳ ಓಂಕಾರ ಶ್ರೀಗಳು, ಗಂಗಾಪೂರ ಮರುಳಶಂಕರ ಶ್ರೀಗಳು, ತುಮ್ಮಿನಕಟ್ಟಿ ಪ್ರಭುಲಿಂಗ ಶ್ರೀಗಳು, ತೆಲಗಿ ಪೂರ್ಣಾನಂದ ಶ್ರೀಗಳು, ಒಳ್ಳೆ ಕುರುಬನ ದೇವಾಲಯದ ಫಾದರ್ ವಿವೇಕಪಾಲ ಸಿ.ಕೆ. ಮೌಲಾನಾಬೂಸ್ ಪ್ಯಾನ ಮದನಿ, ಉಪಸಭಾಪತಿ ರುದ್ರಪ್ಪ ಲಮಾಣಿ ಮತ್ತಿತರರು ಇದ್ದರು.