ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್
ಭರಮಸಾಗರ, ಫೆ. 10- ಮಾಧ್ಯಮ ಸಮಾಜದ ಒಂದು ಭಾಗವಾಗಿದ್ದು, ಸ್ವಾರ್ಥದ ಜೀವನದಲ್ಲಿದ್ದಾಗ ಸತ್ ಚಿಂತನೆಗಳಿರುವುದಿಲ್ಲ. ರೈತರಿಗೆ ಸ್ವಾರ್ಥದ ಅರಿವು ಸಹ ಇರುವುದಿಲ್ಲ. ಅವರು ಅವರ ಕೃಷಿ ಕಾಯಕದಲ್ಲಿ ಮಗ್ನರಾಗಿರುತ್ತಾರೆ. ಯಾವುದೇ ಸಂಸ್ಕೃತಿ ತಂತ್ರಜ್ಞಾನದಲ್ಲಿ ಸಿಗುವುದಿಲ್ಲ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಹೇಳಿದರು.
ಭರಮಸಾಗರದ ತರಳಬಾಳು ಹುಣ್ಣಿಮೆ ಮಹೋತ್ಸವದ ಏಳನೇ ದಿನದ ಕಾರ್ಯಕ್ರಮದಲ್ಲಿ `ಸಮೂಹ ಮಾಧ್ಯಮ ಮತ್ತು ಸಮಾಜ’ ವಿಷಯ ಕುರಿತು ಮಾತನಾಡಿದರು.
ಮಾಧ್ಯಮ ಈ ಹಿಂದೆ ಇದ್ದಂತೆ ಇಲ್ಲ. ಬಹಳಷ್ಟು ಬದಲಾಗಿದೆ. ಮೊಬೈಲ್ ಕೂಡ ಚಾಕುವಿದ್ದಂತೆ ಅದರಿಂದ ಅದ್ಭುತ ಜ್ಞಾನ ಸಂಪಾದನೆ ಮಾಡಬಹುದು. ಸ್ವಲ್ಪ ಯಾಮಾರಿದರೆ ಜೀವನದ ಮಾರಕಕ್ಕೂ ಬಳಕೆಯಾಗುತ್ತಿದೆ. ಆಯ್ಕೆ ನಮ್ಮದು. ಮಾಧ್ಯಮ ಹುಟ್ಟಿದ್ದು ಸಮಾಜದಿಂದ ಆದರೂ ಸಹ ಅದು ಸ್ವಾರ್ಥದ ಕಡೆ ಬದಲಾಗುತ್ತಿದೆ. ಯಾವುದು ಕೂಡ ನಮ್ಮ ಆಸ್ತಿಯಲ್ಲ. ಜೀವನದಲ್ಲಿ ನಾವು ನಾಲ್ಕು ಜನರಿಗೆ ನೆರವಾಗುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಧರ್ಮಗುರುಗಳು, ರಾಜಕಾರಣಿಗಳು, ಮಾಧ್ಯಮದವರು, ಅಧಿಕಾರಿಗಳು ದೇವರ ಏಜೆಂಟರಿದ್ದಂತೆ. ಎಲ್ಲರೂ ಜನಹಿತಕ್ಕಾಗಿ ಕೆಲಸ ಮಾಡುವಂತಾಗಬೇಕು ಎಂಬುದು ದೇವರ ನಿರೀಕ್ಷೆ ಎಂದು ಹೇಳಿದರು.
ಕೇರಳ ರಾಜ್ಯದ ಕನ್ನೂರು ಪೊಲೀಸ್ ಮಹಾನಿರೀಕ್ಷಕ ಯತೀಶ್ಚಂದ್ರ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲಾ ವಿಚಾರಗಳು ಸರಿ ಇರುತ್ತವೆ ಎಂದು ಹೇಳಲಿಕ್ಕಾಗದು. ತಪ್ಪು ಎಂದು
ಹೇಳಲಾಗದು. ಕೆಲವು ವಿಚಾರಗಳು ನಮ್ಮ ಬುದ್ದಿಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತವೆ. ಮತ್ತೊಂದು ಕಡೆ ಮಾನಸಿಕ ಸ್ವಾಸ್ಥ್ಯ ಹಾಳು ಮಾಡುವಂತಹ ವಿಚಾರಗಳು ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್‌ಗೆ ಹೆಚ್ಚು ಮಕ್ಕಳು ಗುರಿಯಾಗುತ್ತಿದ್ದಾರೆ ಎಂದರು.
ವಿಸ್ತಾರ ನ್ಯೂಸ್‌ನ ಎಂ.ಎಸ್. ಶರತ್ ಮಾತನಾಡಿ, ಸರ್ಕಾರದ ಕೆಲವು ಯೋಜನೆಗಳ ಮಾಹಿತಿ ಪಡೆದು ಹಣ ಉಳಿತಾಯ ಮಾಡಬಹುದು. ಮದುವೆ ಮತ್ತಿತರೆ ಶುಭ ಸಮಾರಂಭಗಳಿಗೆ ವಿನಾಕಾರಣ ದುಂದುವೆಚ್ಚ ಮಾಡಿ ಹಣ ಕಳೆದುಕೊಳ್ಳುವ ಬದಲು ಅದೇ ಹಣವನ್ನು ವಿಮೆ, ಇನ್ನಿತರೆ ಕಡೆಗಳಲ್ಲಿ ಹೂಡಿಕೆ ಮಾಡಿ ತಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದರು.
ವಿಜಯ ಕರ್ನಾಟಕ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ ಮಾತನಾಡಿ, ಡಿಜಿಟಲ್ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಪುಸ್ತಕಗಳು ಮತ್ತು ಪತ್ರಿಕೆಗಳು ಮಕ್ಕಳಲ್ಲಿ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ರೂಢಿ ಮಾಡಿಸಿ ಎಂದರು.
ಇದೀಗ ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಪ್ರತಿ ಐದು ವರ್ಷಗಳಿಗೊಮ್ಮೆ ತಂತ್ರಜ್ಞಾನ ಬದಲಾಗುತ್ತಾ ಹೋಗುತ್ತದೆ. ಮುಂದೆ ಕೂಡ ಬದಲಾಗಬಹುದು. ತಂತ್ರಜ್ಞಾನಕ್ಕೆ ತಕ್ಷಣ ತೆರೆದುಕೊಳ್ಳುವ ಮಕ್ಕಳನ್ನು ಅದರಿಂದ ದೂರ ಮಾಡಬಾರದು. ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ಮೊಬೈಲ್ ಪರಿಚಯಿಸಿದ್ದೇವೆ. ಮೊಬೈಲ್ ಹೇಗೆ ಬಳಕೆ ಮಾಡುತ್ತಾರೆ ಎಂಬುದನ್ನು ಪೋಷಕರು ನಿಗಾವಹಿಸಬೇಕು ಎಂದರು.
ಮಾಧ್ಯಮಕ್ಕೆ ಒಂದು ಚೌಕಟ್ಟಿದೆ. ಆ ಚೌಕಟ್ಟು ಮೀರಿದ ಮಾಧ್ಯಮವನ್ನು ಜನ ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಆ ಸ್ವಾತಂತ್ರ್ಯ ಸಮಾಜಕ್ಕಿದೆ. ನಕಾರಾತ್ಮಕ ಸುದ್ದಿಗಳು ಶೇ 20 ರಷ್ಟಿದ್ದರೆ. ಸಕಾರಾತ್ಮಕ, ಮಾಹಿತಿಯುಳ್ಳ ಸುದ್ಧಿಗಳು ಶೇ. 80 ರಷ್ಟು ಇರುತ್ತವೆ. ಆಯ್ಕೆ ನಿಮ್ಮ ಕೈಯ್ಯಲಿದೆ. ಸಕಾರಾತ್ಮಕತೆ ಕಡೆ ಮಕ್ಕಳನ್ನು ಕೊಂಡೊಯ್ಯಬೇಕು. ಪುಸ್ತಕ ಮತ್ತು ಪತ್ರಿಕೆಗಳನ್ನು ಓದಲು ಕೊಡಿ ಎಂದು ಮನವಿ ಮಾಡಿದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಜಗಳೂರು ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮೀಡಿಯಾ ಮಾಸ್ಟರ್ ವಿಮರ್ಶಕ ಎಂ.ಎಸ್. ರಾಘವೇಂದ್ರ, ದಾವಣಗೆರೆ ಪೂರ್ವ ವಲಯ ಐಜಿಪಿ ಡಾ. ಬಿ. ಆರ್. ರವಿಕಾಂತೇಗೌಡ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿದರು.
ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ ಅವರು ವಚನ ಗೀತೆ ಹಾಡಿದರು. ತೀರ್ಥಪ್ಪ ಚಿಕ್ಕಬೆನ್ನೂರು ಸ್ವಾಗತಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರಕಾಶ್ ಹೆಮ್ಮಾಡಿ, ನೇತ್ರಾವತಿ ಹೆಮ್ಮಾಡಿ ಅವರ ಜಾದೂ ಪ್ರದರ್ಶನ ಗಮನ ಸೆಳೆದವು.