2025, ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗುತ್ತಿರುವ ತರಳಬಾಳು ಹುಣ್ಣಿಮೆ ಹಲವು ವಿಶೇಷತೆಗಳಿಂದ ಕೂಡಿ ಗಮನ ಸೆಳೆದಿದೆ. ಜಾತಿ, ಮತ,ಪಂಥ, ಧರ್ಮಗಳನ್ನು ಮೀರಿ ಜ್ಞಾನ ದಾಸೋಹವನ್ನು ಕಳೆದ 75 ವರ್ಷಗಳಿಂದ ಅವ್ಯಾಹತವಾಗಿ ಉಣಬಡಿಸುತ್ತಿರುವ ಈ ಹುಣ್ಣಿಮೆ ಮಹೋತ್ಸವವು `ಭಾವೈಕ್ಯ ಪರಿಷತ್ತು’ ಎಂದೇ ನಾಡಿನಾದ್ಯಂತ ಜನ ಮನ್ನಣೆಗಳಿಸಿದೆ.
1965 ರಲ್ಲಿ ಚಿತ್ರದುರ್ಗ ನಗರದಲ್ಲಿ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಜರುಗಿತು. ಆಗ ನಾನಿನ್ನು ಐದಾರು ವರ್ಷದ ಬಾಲಕ. ಅಂದಿನ ಆ ದೃಶ್ಯಗಳು ನನಗಿನ್ನೂ ಕಣ್ಣಿಗೆ ಕಟ್ಟಿದಂತಿವೆ. ನಿನ್ನೆ ಮೊನ್ನೆ ನಡೆದಂತೆ ನೆನಪು.
ಅಂದು ಹುಣ್ಣಿಮೆಯ ದಿನ. ವೇದಿಕೆಯ ಮಧ್ಯಭಾಗದ ಆಸನದಲ್ಲಿ ಸಮಾರಂಭದ ಕೇಂದ್ರ ಬಿಂದುವಾಗಿ ಶ್ರೀ ತರಳಬಾಳು ಜಗದ್ಗುರುಗಳು ಆಸೀನರಾಗಿದ್ದರು. ಸಾವಿರಾರು ಜನ ಸೇರಿದ್ದ ಸಮಾರಂಭದಲ್ಲಿ ಗಣ್ಯರೊಬ್ಬರ ಆಗಮನದಿಂದಾಗಿ ಇದ್ದಕ್ಕಿದ್ದಂತೆಯೇ ಕ್ಷಣ ಕಾಲ ಇಡೀ ಸಭೆಯಲ್ಲಿ ಮೌನ ಆವರಿಸಿ ಆಗ ಇಡೀ ಮಿಂಚಿನ ಸಂಚಾರವಾದಂತಾಯಿತು. ಸಮಾರಂಭದಲ್ಲಿ ಸೇರಿದ್ದ ಎಲ್ಲರ ಮುಖಗಳು ವೇದಿಕೆಗೆ ಆಗಮಿಸುತ್ತಿದ್ದ ಆ ಗಣ್ಯರ ಕಡೆ ತಿರುಗಿದವು. ಗಜ ಗಾಂಭೀರ್ಯದ, ಮೈಸೂರು ಪೇಟ ಧರಿಸಿದ್ದ ಅಜಾನುಬಾಹು ವ್ಯಕ್ತಿಯೊಬ್ಬರು ನಿಧಾನವಾಗಿ ಹೆಜ್ಜೆಯನ್ನಿಡುತ್ತಾ ವೇದಿಕೆ ಬಳಿ ಆಗಮಿಸಿದರು. ವೇದಿಕೆ
ಏರುವುದಕ್ಕೆ ಮುಂಚೆ ಪಕ್ಕದಲ್ಲಿ ಪಾದರಕ್ಷೆಗಳನ್ನು ಬಿಟ್ಟು ನಿಧಾನವಾಗಿ ಮಂಡಿಯೂರಿ ಶಿರ ಭಾಗಿ ಶ್ರೀ ತರಳಬಾಳು ಜಗದ್ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಜನರೆಲ್ಲ ತದೇಕ ಚಿತ್ತದಿಂದ ಅವರನ್ನೇ ನೋಡುತ್ತಿದ್ದರು. ನಂತರ ಅವರು ಪೂಜ್ಯ ಜಗದ್ಗುರುಗಳ ಪಕ್ಕದಲ್ಲಿ ಆಸೀನರಾದರು. ಅವರೇ ಅಂದು ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು…! ಗುರುಗಳಿಗೆ ಅಂದು ಮೈಸೂರು ಮಹಾರಾಜರು ನಯ ವಿನಯದಿಂದ ತೋರಿದ ಗೌರವಾದರಗಳ ಚಿತ್ರಣದ ಆ ಕ್ಷಣ ನನ್ನ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ.
ಅಂದು 1965ರ ಚಿತ್ರದುರ್ಗದ ತರಳಬಾಳು ಹುಣ್ಣಿಮೆ ಸಂದ ರ್ಭದಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಸಿರಿಗೆರೆ ಶ್ರೀಮಠದಿಂದ
ವಿಶ್ವಗುರು ಬಸವಣ್ಣವವರ 151 ವಚನಗಳನ್ನು ಆಂಗ್ಲ ಭಾಷೆಗೆ
ತರ್ಜುಮೆ ಮಾಡಿಸಿದ ಪುಸ್ತಕವನ್ನು ಲೋಕಾರ್ಪಣೆ ಗೊಳಿಸಿ ಆಶಯ ನುಡಿಗಳನ್ನು ದಯಪಾಲಿಸಿದ್ದರು.
ಇಂದು 60 ವರ್ಷಗಳ ನಂತರ 2025ರಲ್ಲಿ ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್
ಅವರ ಮೊಮ್ಮಗ ಈಗಿನ ಮಹಾರಾಜರು, ಹಾಲಿ ಮೈಸೂರು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭಾಗಿಯಾಗುತ್ತಿರುವುದು ಒಂದು ಮಹತ್ತರ ಸಂಗತಿ. ಹಾಗೆಯೇ ಅಂದು ಅವರ ತಾತನವರಿಂದ ಬಸವಣ್ಣನವರ ವಚನಗಳ ಇಂಗ್ಲಿಷ್ ಅನುವಾದ ಲೋಕಾರ್ಪಣೆಗೊಂಡಂತೆ
ಈಗಿನ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಗಳವರು ಅಭಿವೃದ್ಧಿ ಪಡಿಸಿರುವ ‘ಶಿವಶರಣರ ಗಣಕ ವಚನ ಸಂಪುಟ’. ಪರಿಷ್ಕೃತ ಆವೃತ್ತಿಯನ್ನು ಶ್ರೀ ಯದುವೀರ ಒಡೆಯರ್ ಲೋಕಾರ್ಪಣೆ ಮಾಡುತ್ತಿರುವುದು ಕಾಕತಾಳೀಯ. ಮತ್ತೊಂದು ವಿಶೇಷವೆಂದರೆ ಈ ತಂತ್ರಾಂಶದಲ್ಲಿ ಬಸವಣ್ಣನವರ ವಚನಗಳ ರಷ್ಯನ್ ಭಾಷಾ ಅನುವಾದ ಮತ್ತು ಮರಾಠಿ ಭಾಷಾ ಅನುವಾದಗಳೂ ಸಹ ಇದೇ ಸಂದರ್ಭದಲ್ಲಿ ಸೇರ್ಪಡೆಗೊಳ್ಳುತ್ತಿರುವುದು ವಚನ ಸಾಹಿತ್ಯ ಪ್ರೇಮಿಗಳೆಲ್ಲಾ ಸಂಭ್ರಮಿಸುವ ಸಂದರ್ಭ ಇದಾಗಿದೆ.
ಈ ಐತಿಹಾಸಿಕ ಸಂಗತಿ ಶ್ರೀ ತರಳಬಾಳು ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಸನ್ನಿವೇಶವಾಗಿ ಉಳಿಯುತ್ತದೆ…!
ಅಂದು ಬಾಲ್ಯದಲ್ಲಿ ಆಗಿನ ಮೈಸೂರು ಮಹಾರಾಜರ ಆಕರ್ಷಕ ವ್ಯಕ್ತಿತ್ವದ, ಗಂಭೀರ ವದನರಾದ ಮಹಾರಾಜರನ್ನು ನೋಡಿ ಪುಳಕಗೊಂಡಿದ್ದ ನನ್ನಂತಹ ಅನೇಕರಿಗೆ ಈಗ ಅವರ ಮೊಮ್ಮಗ ಭಾಗವಹಿಸುತ್ತಿರುವುದು ಮತ್ತು ಅವರನ್ನು ಪರಮ ಪೂಜ್ಯಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ನೋಡುವ ಅವಕಾಶ ದೊರಕಿರುವುದು ಒಂದು ಸೌಭಾಗ್ಯವೆಂದು ಭಾವಿಸುತ್ತೇನೆ.
ಶ್ರೀ ತರಳಬಾಳು ಜಗದ್ಗುರುಗಳವರ ಕೃಪಾಶೀರ್ವಾದಗಳಿಂದ ಭರಮಸಾಗರ ಮತ್ತು ಸುತ್ತಮುತ್ತಲಿನ ಅನೇಕ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಹರಿದು ಬಂದಿದೆ. ರೈತಾಪಿ ಜನರ ಕನಸು ನನಸಾಗಿರುವ ಶುಭ ಸಂದರ್ಭದಲ್ಲಿ ಹುಣ್ಣಿಮೆ ಮಹೋತ್ಸವ ಜರುಗುತ್ತಿರುವುದು ರೈತ ಸಮುದಾಯದ ಸಂತೋಷಕ್ಕೆ ಪಾರವೇ ಇಲ್ಲ. ಈ ಸಲದ ‘ತರಳಬಾಳು ಹುಣ್ಣಿಮೆ ಒಂದು ರೀತಿಯಲ್ಲಿ ‘ರೈತರ ಹಬ್ಬ’ದಂತೆ ಗೋಚರಿಸುತ್ತಿರುವುದು ಸಹ ಈ ಸಲದ ವಿಶೇಷವಾಗಿದೆ.
– ಡಿ. ಪ್ರಸನ್ನಕುಮಾರ್, ಬೆಂಗಳೂರು.