ಇಂದು ಅಂತರರಾಷ್ಟ್ರೀಯ ಅಪಸ್ಮಾರ ದಿನ
ಅಪಸ್ಮಾರ ಕಾಯಿಲೆ ಅಂದರೇನು ? ಅಪಸ್ಮಾರ ಅಥವಾ ಫಿಟ್ಸ್ ಕಾಯಿಲೆ ಒಂದು ಅಪರೂಪದ ಮಿದುಳಿಗೆ ಸಂಬಂಧಪಟ್ಟ ಸಮಸ್ಯೆ. ಏಕಾಏಕಿ ಮೆದುಳಿನ ವಿದ್ಯುತ್ ಚಲನೆಯಲ್ಲಿ ವ್ಯತ್ಯಯ ಉಂಟಾದಾಗ ಕಂಡು ಬರುವಂತಹ ಕಾಯಿಲೆ ಇದು.
ಅಪಸ್ಮಾರ ಕಾಯಿಲೆ ಯಾರಲ್ಲಿ ಕಂಡು ಬರುತ್ತದೆ ? ಅಪಸ್ಮಾರ ಕಾಯಿಲೆಗೆ ವಯಸ್ಸಿನ ಮಿತಿ ಇಲ್ಲ. ಈ ಕಾಯಿಲೆಯು ಎಳೆಯ ಮಗುವಿನಿಂದ ಹಿಡಿದು ಹಿರಿಯ ನಾಗರಿಕರಲ್ಲಿ ಕಂಡುಬರುವ ಸಾಧ್ಯತೆಗಳಿರುತ್ತವೆ.
ಅಪಸ್ಮಾರ ಕಾಯಿಲೆಗೆ ಕಾರಣಗಳೇನು? ಅಪಸ್ಮಾರ ಕಾಯಿಲೆಗೆ ಹಲವು ಕಾರಣಗಳಿವೆ. ಇದರಲ್ಲಿ ಮುಖ್ಯವಾಗಿ ಮೆದುಳು ಜ್ವರ, ಮೆದುಳಲ್ಲಿ ರಕ್ತಸ್ರಾವ, ಮೆದುಳಲ್ಲಿ ರಕ್ತ ಹೀನತೆ, ಮೆದುಳಲ್ಲಿ ಗಡ್ಡೆ (ಬ್ರೈನ್ ಟ್ಯೂಮರ್), ಅತಿಹೆಚ್ಚು ರಕ್ತದ ಒತ್ತಡ, ಇನ್ನಿತರೆ ಮೆದುಳಿಗೆ ಸಂಬಂಧಪಟ್ಟ ಕಾಯಿಲೆಗಳಲ್ಲಿ ಕಂಡು ಬರುತ್ತದೆ.
ಕೆಲವು ಮಕ್ಕಳಲ್ಲಿ ಸಾಮಾನ್ಯವಾಗಿ ಆರು ವರ್ಷದವರೆಗೆ ಏಕಾಏಕಿ ಜ್ವರ ಏರಿ, ಅಪಸ್ಮಾರ ಕಂಡು ಬರುತ್ತದೆ. ಇದಕ್ಕೆ ಫೆಬ್ರಾಯಿಲ್ ಸೀಸರ್ಸ್ಯ ಎಂದು ಕರೆಯಲ್ಪಡುತ್ತದೆ. ಮೆದುಳಿನ ಕಾಯಿಲೆ ಗಳನ್ನು ಹೊರತುಪಡಿಸಿ, ಶರೀರದಲ್ಲಿ ಕೆಲವು ಬಾರಿ ಸಮಸ್ಯೆ ಉಂಟಾದಾಗ ಅಪಸ್ಮಾರ ಬರುವಂತಹ ಸಾಧ್ಯತೆಗಳು ಇರುತ್ತವೆ. ಉದಾಹರಣೆಗೆ ರಕ್ತದಲ್ಲಿ ಸೋಡಿಯಂ ಲವಣಾಂಶ ಕಡಿಮೆ ಯಾದಾಗ, ಅತಿ ಹೆಚ್ಚಿನ ಮದ್ಯಪಾನ ಸೇವಿಸಿದಾಗ, ಮಾದಕ ವಸ್ತುವಿನ ಅಂಶ ರಕ್ತದಲ್ಲಿ ಹೆಚ್ಚಾದಾಗ, ದಿನನಿತ್ಯ ಮದ್ಯಪಾನ ಮಾಡುವ ವ್ಯಕ್ತಿಗಳು ಒಮ್ಮೆಲೇ ಮದ್ಯಪಾನ ನಿಲ್ಲಿಸಿದಾಗ ಕೂಡ ಅಪಸ್ಮಾರ ಬರುವ ಸಾಧ್ಯತೆಗಳಿರುತ್ತವೆ.
ಅಪಸ್ಮಾರ ಸಾಮಾನ್ಯವಾಗಿ ಬುದ್ಧಿಮಾಂದ್ಯ ಮಕ್ಕಳಲ್ಲಿ ಕಾಣುವ ಸಾಧ್ಯತೆಗಳಿರುತ್ತವೆ. ಕೆಲವು ಬಾರಿ ಗರ್ಭಿಣಿ ಹೆಂಗಸರಲ್ಲಿ ಅಥವಾ ಬಾಣಂತಿ ಯರಲ್ಲಿ ನಾನಾ ಕಾರಣಗಳಿಂದ ಅಪಸ್ಮಾರ ಉಂಟಾಗುವ ಸಾಧ್ಯತೆಗಳಿರುತ್ತವೆ.
ಅಪಸ್ಮಾರ ಬಂದಂತಹ ವ್ಯಕ್ತಿಗಳಲ್ಲಿ ಏನು ಮಾಡಬೇಕು? ತುರ್ತಾಗಿ ಪಿಟ್ಸ್ ಬರುವಂತಹ ವ್ಯಕ್ತಿಗಳನ್ನು ಕಂಡಲ್ಲಿ ಅವರನ್ನು ಹೊಳು ಮಗ್ಗಲಾಗಿ ತಿರುಗಿಸಿ, ಅವರಿಗೆ ಸಾಕಷ್ಟು ಜಾಗವನ್ನು ಕೊಡಬೇಕು. ಬಾಯಲ್ಲಿ ಯಾವುದೇ ತರಹದ ವಸ್ತುವನ್ನಾಗಲೀ, ಬಟ್ಟೆಯನ್ನಾಗಲೀ ಇಡಬಾರದು. ಅವರನ್ನು ಗಟ್ಟಿಯಾಗಿ ಹಿಡಿಯುವುದು, ಕಟ್ಟುವುದು ಹಾನಿಕರ. ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ಅಪಸ್ಮಾರ ನಿಂತು ಹೋಗುತ್ತದೆ, ತದನಂತರ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಜ್ಞರ ಹತ್ತಿರ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಬೇಕು. ಕೆಲವೊಮ್ಮೆ ಫಿಟ್ಸ್ ನಿಲ್ಲದೆ ಹೋದಲ್ಲಿ ತುರ್ತಾಗಿ ನರ ರೋಗ ಕೇಂದ್ರಕ್ಕೆ ಕರೆದೊಯ್ಯಬೇಕಾಗುತ್ತದೆ ಇದಕ್ಕೆ ನಾವು ಸ್ಟೇಟಸ್ ಎಪಿಲೆಪಿಕಸ್ ಎಂದು ಕರೆಯುತ್ತೇವೆ.
ಅಪಸ್ಮಾರಕ್ಕೆ ವೈದ್ಯರು ಏನು ಮಾಡುತ್ತಾರೆ? ಆಸ್ಪತ್ರೆಯಲ್ಲಿ ವೈದ್ಯರು ಮೊದಲಿಗೆ ಅಪಸ್ಮಾರ ವನ್ನು ನಿಲ್ಲಿಸಲು ಸೂಕ್ತ ಔಷಧಿ ಉಪಚಾರ ಮಾಡುತ್ತಾರೆ. ತದನಂತರ ರಕ್ತಪರಿಕ್ಷೆ, ಮೆದುಳಿನ ಸ್ಕ್ಯಾನ್, ಇಇಜಿ ಮುಂತಾದ ಪರೀಕ್ಷೆಗಳನ್ನು ಮಾಡಿಸುತ್ತಾರೆ. ಮೂಲತಃ ಇವೆಲ್ಲ ಪರೀಕ್ಷೆಗಳನ್ನು ಮಾಡಿಸಿ ಕಾರಣ ಹುಡುಕಲು ಪ್ರಯತ್ನಿಸುತ್ತಾರೆ.
ಅಪಸ್ಮಾರವನ್ನು ಯಾಕೆ ಉಪಚರಿಸಬೇಕು ? ಅಪಸ್ಮಾರ ಕಾಯಿಲೆಯ ಉಪಚಾರ ಆಗದಿದ್ದಲ್ಲಿ ಪುನಃ ಪುನಃ ಬರುವ ಸಾಧ್ಯತೆಗಳು ಇರುತ್ತವೆ. ಎಷ್ಟೋ ಸಾರಿ ರಸ್ತೆ ಅಪಘಾತಗಳು ಉಂಟಾಗಿ ಜೀವಕ್ಕೆ ಕುತ್ತು ಬರುವಂತಹ ಉದಾಹರಣೆಗಳಿವೆ. ಮಕ್ಕಳಲ್ಲಿ ಪದೇ ಪದೇ ಈ ಕಾಯಿಲೆ ಕಂಡುಬಂದಲ್ಲಿ ಬುದ್ಧಿ ಮಾಂದ್ಯತೆ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಗರ್ಭಿಣಿ ಹೆಂಗಸರಲ್ಲಿ ಅಪಸ್ಮಾರ ಕಾಯಿಲೆಯ ನಿಯಂತ್ರಣ ಇಲ್ಲದಿದ್ದಲ್ಲಿ ಗರ್ಭಪಾತ ಆಗುವ ಸಾಧ್ಯತೆಗಳು ಇರುತ್ತವೆ.
ಅಪಸ್ಮಾರ ಅಂಟುರೋಗವೇ ? ಖಂಡಿತಾ ಇಲ್ಲ ಈ ಕಾಯಿಲೆಯು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ಅನುವಂಶೀಯವಾಗಿ ಕಂಡುಬರುತ್ತದೆ.
ಅಪಸ್ಮಾರ ಕಾಯಿಲೆಗೆ ಚಿಕಿತ್ಸೆ ಇದೆಯೇ? ಖಂಡಿತಾ ಇದೆ. ಮೊದಲು ಔಷಧೋಪಚಾರ ಮಾಡುತ್ತೇವೆ. ಕಾಯಿಲೆಯ ತೀವ್ರತೆಯ ಅನುಗುಣವಾಗಿ ನಿರ್ದಿಷ್ಟ ಸಮಯದವರೆಗೆ ಔಷಧಿಗಳನ್ನು ಸೇವಿಸಲು ಸಲಹೆ ನೀಡುತ್ತೇವೆ. ಸಾಮಾನ್ಯವಾಗಿ ಒಂದರಿಂದ ಐದು ವರ್ಷಗಳವರೆಗೆ ಔಷಧಿಗಳನ್ನು ತೆಗೆದುಕೊಳ್ಳುವಂತಹ ಸಲಹೆಯನ್ನು ಮಾಡುತ್ತೇವೆ. ಕೆಲವು ಸಂದರ್ಭಗಳಲ್ಲಿ ಜೀವನ ಪೂರ್ತಿ ಔಷಧೋಪಚಾರ ಮಾಡಬೇಕಾಗುತ್ತದೆ. ಔಷಧಿಗಳಿಂದ ನಿಯಂತ್ರಿಸಲು ಸಾಧ್ಯವಾಗದಿದ್ದಲ್ಲಿ ಹೆಚ್ಚಿನ ಪರೀಕ್ಷೆಗಳನ್ನು ಮಾಡಿಸಿ ಶಸ್ತ್ರಚಿಕಿತ್ಸೆ ಮಾಡಿಸುವ ಸಂದರ್ಭಗಳೂ ಉಂಟಾಗಬಹುದು.
ಅಪಸ್ಮಾರ ವ್ಯಕ್ತಿಯನ್ನು ಮದುವೆಯಾಗಬ ಹುದೇ? ನಿಸಂಶಯವಾಗಿ ಮದುವೆಯಾಗಬಹುದು. ಮೊದಲೇ ಹೇಳಿದ ಹಾಗೇ ಸರಿಯಾಗಿ ಔಷಧೋಪ ಚಾರ ಮಾಡಿಸಿದಾಗ ಕಾಯಿಲೆಯು ನಿಯಂತ್ರಣಕ್ಕೆ ಬರುತ್ತದೆ. ಸರಿಯಾದ ಸಲಹೆ ಪಡೆದಲ್ಲಿ ತೃಪ್ತವಾದ ದಾಂಪತ್ಯ ಜೀವನವನ್ನು ಸಾಗಿಸಬಹುದು.
ಅಪಸ್ಮಾರ ಕಾಯಿಲೆಗೆ ಎಸ್ಎಸ್ ನಾರಾಯಣ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇದೆಯೇ? ಎಸ್ಎಸ್ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಪಸ್ಮಾರ ಕಾಯಿಲೆಯ ಪರೀಕ್ಷೆಗಳನ್ನು ಮಾಡುವಂತಹ ಅತ್ಯಾಧುನಿಕ ತಂತ್ರ ಜ್ಞಾನ ಹೊಂದಿರುವ ವೈದ್ಯರು ಹಾಗೂ ಉಪಕರಣ ಗಳು ಇವೆ. ನಾವು ಸಾವಿರಾರು ರೋಗಿಗಳಿಗೆ ಸಫಲಕರ ಚಿಕಿತ್ಸೆಯನ್ನು ಮಾಡಿರುತ್ತೇವೆ.
– ಡಾ. ವೀರಣ್ಣ ಗಡಾದ, ಹಿರಿಯ ಪ್ರಾಧ್ಯಾಪಕರು ಹಾಗೂ ನರರೋಗ ತಜ್ಞರು, ಎಸ್ ಎಸ್ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದಾವಣಗೆರೆ.