ಲೇಖನದಲ್ಲಿ ಅಕ್ಷರ ಸಂಸ್ಕೃತಿ ಕಾಪಾಡಿಬೇಕಿದೆ

ಲೇಖನದಲ್ಲಿ ಅಕ್ಷರ ಸಂಸ್ಕೃತಿ ಕಾಪಾಡಿಬೇಕಿದೆ

`ರಾಷ್ಟ್ರೀಯ ಅಕ್ಷರ ಹಬ್ಬದ ಸಮಾರೋಪ ಸಮಾರಂಭದಲ್ಲಿ ಬರಗೂರು ರಾಮಚಂದ್ರಪ್ಪ

ದಾವಣಗೆರೆ, ಫೆ.9- ಅಕ್ಷರ ಸಂಸ್ಕೃತಿಗೆ ಅದರದ್ದೇ ಆದ ಮೌಲ್ಯವಿದೆ. ಮೌಖಿಕವಾಗಿ ನಾಗರ ನಾಲಿಗೆ ಮತ್ತು ಲಿಖಿತವಾಗಿ ಲಜ್ಜೆಗೆಟ್ಟ ಬರವಣಿಗೆ ಇರಬಾರದು. ಲೇಖಕರಾದವರು ಸಹನೆ-ಗೌರ ವದಿಂದ ವರ್ತಿಸಬೇಕು. ಜತೆಗೆ ಲೇಖನದಲ್ಲಿ ಅಕ್ಷರ ಸಂಸ್ಕೃತಿ ಕಾಪಾಡಿಕೊಳ್ಳಬೇಕು ಎಂದು ನಾಡಿನ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ದಾವಣಗೆರೆ ಲಿಟರರಿ ಫೋರಂ ಮತ್ತು ಅರಸೀಕೆರೆಯ ಅರಸೀ ಸಾಂಸ್ಕೃತಿಕ ವೇದಿಕೆ ಯಿಂದ ಇಲ್ಲಿನ ಎಂಬಿಎ ಕಾಲೇಜು ಸಭಾಂಗಣ ದಲ್ಲಿ ಭಾನುವಾರ ಆಯೋಜಿಸಿದ್ದ `ರಾಷ್ಟ್ರೀಯ ಅಕ್ಷರ ಹಬ್ಬ-2025’ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಕ್ಷರ ಸಂಸ್ಕೃತಿ ಆಳುವವರ ಆಳಾಗಬಾರದು, ನಾಗರ ನಾಲಿಗೆ ಆಗಬಾರದು, ಲಜ್ಜೆಗೆಟ್ಟ ಅಕ್ಷರ ಹೊಂದಿರಬಾರದು. ಮಾತು, ಕೃತಿಯಲ್ಲಿ ಭ್ರಷ್ಟಾಚಾರ ಇರಬಾರದು. ಬುದ್ಧ ಮಮತೆ-ಸಮತೆ, ಕಾಠಿಣ್ಯ-ಕಾರುಣ್ಯಗಳ ವೈರುಧ್ಯವನ್ನು ಮೀರಿ  ಹುಸಿತನ-ಹಸಿತನವಿಲ್ಲದೇ ಜನರನ್ನು ತಲುಪಿದಂತೆ ಅಕ್ಷರ ಸಂಸ್ಕೃತಿ ತಲುಪಬೇಕು. ಬುದ್ಧಾಕ್ಷರ ಸಂಸ್ಕೃತಿ ನಮ್ಮದಾದರೆ ಅಕ್ಷರ ಸಂಸ್ಕೃತಿ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಲೇಖಕರು ಗೌರವ, ಬಿರುದುಗಳನ್ನು ಬಯಸಿದಂತೆ, ಜನರು ನಮ್ಮಿಂದ ಸಾಮಾಜಿಕ ಜವಾಬ್ದಾರಿಯನ್ನು ಬಯಸುತ್ತಾರೆ. ಹಾಗಾಗಿ ಜನರ ಅಪೇಕ್ಷೆಯಂತೆ ಬರಹಗಾರರು ಹೊಣೆ ಹೊರಬೇಕು. ಈ ನಿಟ್ಟಿನಲ್ಲಿ ಅಕ್ಷರ ಸಂಸ್ಕೃತಿಯನ್ನು ಉಳಿಸುವ ನಿಜವಾದ ಸಾಮಾಜಿಕ ಜವಾಬ್ದಾರಿ ಲೇಖಕರ ಮೇಲಿದೆ ಎಂದರು.

ಅಕ್ಷರ ಸಂಸ್ಕೃತಿ ಅನೇಕ ಬಿಕ್ಕಟ್ಟು, ವೈರುದ್ಧ್ಯಗ ಳನ್ನು ಎದುರಿಸುತ್ತಿದೆ. ರಕ್ತಸಿಕ್ತ ಅಕ್ಷರಗಳು, ಉದ್ರೇಕಗೊಳಿಸುವ ಅಕ್ಷರಗಳು ಮತ್ತು ಹಿಂಸಾತ್ಮಕ ಪದಗಳ ಈ ಒಂದು ಕಾಲಾಂತರದ ಬಗ್ಗೆ ಯೋಚಿಸಬೇಕಿದೆ. ಹೊಡಿ, ಬಡಿ, ಕಡಿ ಎನ್ನುವ ಸಂಸ್ಕೃತಿ ಇರುವವರು ಇಂದು ಯಾವುದೇ ಅಳುಕಿಲ್ಲದೇ ಓಡಾಡುವ ವಾತಾವರಣ ನಿರ್ಮಾಣವಾಗಿದೆ. ಇಂಥ ಭಾಷಿಕ ಭ್ರಷ್ಟಾಚಾರ ಮತ್ತು ರಕ್ತಸಿಕ್ತ ಸಂಸ್ಕೃತಿ ನಡುವೆ ನಾವಿಂದು ಬದುಕುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್‌ ಮಾತನಾಡಿ, ಈಗಿನ ಮಕ್ಕಳು ನೋಡದ ಹೊರತು ಏನನ್ನೂ ಊಹಿಸದ ಮಟ್ಟಕ್ಕೆ ಬಂದು ತಲುಪಿವೆ. ಆದ್ದರಿಂದ ಮಕ್ಕಳಿಗೆ ಪುಸ್ತಕದ ಅಭಿರುಚಿ ಬೆಳೆಸಿ ಎಂದರು.

ಮಕ್ಕಳು ಪುಸ್ತಕಗಳ ಗೀಳನ್ನು ಬೆಳೆಸಿಕೊಳ್ಳಲು ಪೋಷಕರು ನೆರವಾಗಬೇಕು. ಪುಸ್ತಕ ಕಲಿಸಿದಷ್ಟು ಯಾವುದು ಕಲಿಸಲಾರದು. ಅಗತ್ಯ ಪಟ್ಟಿಯಲ್ಲಿ ಪುಸ್ತಕ, ಸಾಹಿತ್ಯವೂ ಇರುವಂತಾಗಬೇಕು ಎಂದರು.

ಕುಂಭಮೇಳದಲ್ಲಿ ಮುಳುಗಿದರೆ ಪಾಪ ಪರಿಹಾರ ಆಗುತ್ತದೋ ಇಲ್ಲವೋ ಆದರೆ, ಪುಸ್ತಕದಲ್ಲಿ ಮುಳುಗಿದರೆ ನಿಶ್ಚಯವಾಗಿ ಪಾಪ ಪರಿಹಾರವಾಗುತ್ತದೆ ಎಂದು ಹೇಳಿದರು.

ಈ ವೇಳೆ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದಾಕ್ಷಾಯಿಣಿ ಹುಡೇದ, ಹಿರಿಯ ಪತ್ರಕರ್ತ ಸದಾನಂದ ಹೆಗಡೆ, ಸಾಹಿತಿ ಎ.ಬಿ ರಾಮಚಂದ್ರಪ್ಪ, ರೈತ ಮುಖಂಡ ತೇಜಸ್ವಿ ಪಟೇಲ್ ಹಾಗೂ ಇತರರು ಇದ್ದರು.

error: Content is protected !!