ಸಿರೆಗೆರೆ, ಫೆ.4- ಭರಮಸಾಗರದಲ್ಲಿ ನಡೆಯಲಿರುವ ತರಳಬಾಳು ಮಹೋತ್ಸವದ ಹಿನ್ನೆಲೆಯಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರನ್ನು ಮಂಗಳವಾರ ಬೆಳಿಗ್ಗೆ ಸಿರಿಗೆರೆಯ ಐಕ್ಯ ಮಂಟಪದಿಂದ ಭರಮಸಾಗರಕ್ಕೆ ಭಕ್ತಾದಿಗಳು ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಿದರು.
ಶ್ರೀಗಳು ಐಕ್ಯಮಂಟಪದಲ್ಲಿ ಹಿರಿಯ ಶ್ರೀಗಳಾದ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿಯವರ ಕರ್ತೃಗದ್ದಿಗೆಗೆ ಹಾಗೂ ಲಿಂ. ಶ್ರೀ ಗುರುಶಾಂತೇಶ್ವರ ಸ್ವಾಮೀಜಿಯವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ನಂತರ ಶಿವ ಧ್ವಜಾರೋಹಣ ನೆರವೇರಿಸುವುದರ ಮೂಲಕ ತರಳಬಾಳು ಹುಣ್ಣಿಮೆಗೆ ಚಾಲನೆ ನೀಡಿದರು.
ಶ್ರೀಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಎಲೆಕ್ಟ್ರಿಕ್ ವಾಹನದಲ್ಲಿ ಪ್ರಯಾಣಿಸಿದರು. ಗ್ರಾಮದ ಭಕ್ತಾದಿಗಳು ಫಲಪುಷ್ಪ ನೀಡಿ ಭಕ್ತಿ ಸಮರ್ಪಿಸಿದರು. ಕೊಳಹಾಳ್ ಗ್ರಾಮಸ್ಥರು ಶ್ರೀಗಳ ಕಾರಿಗೆ ಹೂಮಳೆಯ ಸ್ವಾಗತ ಮಾಡಿದ್ದು ನೋಡುಗರ ಗಮನ ಸೆಳೆಯಿತು.
ಬೃಹತ್ ಬೈಕ್ ರಾಲಿ: ಸಿರಿಗೆರೆಯಿಂದ ಭರಮಸಾಗರದ ವರೆಗೂ ದಾವಣಗೆರೆಯ ಶಿವಸೈನ್ಯ, ಹರಪನಹಳ್ಳಿ ಹಾಗೂ ವಿವಿಧ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಸಾವಿರಕ್ಕೂ ಹೆಚ್ಚು ಬೈಕ್‍ಗಳಿಂದ ಬೃಹತ್ ರಾಲಿ ನಡೆಸಿದರು. ಅಲ್ಲಲ್ಲಿ ಕೆಲ ಗ್ರಾಮಸ್ಥರು ಮಜ್ಜಿಗೆ, ಲಘು ದಾಸೋಹ, ಫಲಗಳನ್ನು ಭಕ್ತಾದಿಗಳಿಗೆ ವಿತರಿಸಿದರು. ಶ್ರೀಗಳು ಸಿರಿಗೆರೆ ಕ್ರಾಸ್, ಬಸವನ ಶಿವನಕೆರೆ, ಯಳಗೋಡು, ಕೋಗುಂಡೆ, ಕಸವನಹಳ್ಳಿ ಕ್ರಾಸ್ ಮೂಲಕ ಭರಮಸಾಗರ ತಲುಪಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ಚಂದ್ರಪ್ಪ, ಹರಿಹರದ ಬಿ.ಪಿ.ಹರೀಶ್, ಮಾಜಿ ಸಂಸದ ಜನಾರ್ದನಸ್ವಾಮಿ, ವಿಧಾನ ಪರಿಷತ್ ಸದಸ್ಯ ನವೀನ್, ಸಾಧುಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಬಸವರಾಜಪ್ಪ, ದಾವಣಗೆರೆ ಶಿವಸೈನ್ಯದ ಶಶಿಕುಮಾರ್, ಆಡಳಿತಾಧಿಕಾರಿ ಗಳಾದ ಎಚ್.ವಿ.ವಾಮದೇವಪ್ಪ, ವಿಶೇಷಾಧಿಕಾರಿಗಳಾದ ವೀರಣ್ಣ.ಎಸ್.ಜತ್ತಿ, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು, ಗಣ್ಯರು ಹಾಜರಿದ್ದರು.
ತೆಪ್ಪೋತ್ಸವ: ಭರಮಸಾಗರದ ಐತಿಹಾಸಿಕ ಭರಮಣ್ಣ ನಾಯಕನ ಕೆರೆಯಲ್ಲಿ ದೋಣಿ ವಿಹಾರ ಏರ್ಪಡಿಸಲಾಗಿದ್ದು, ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಮಂಗಳವಾರ ಸಂಜೆ ದೊಡ್ಡ ಕೆರೆಯಲ್ಲಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿ ದೋಣಿ ವಿಹಾರ ಮಾಡಿದರು. ಇದಕ್ಕಾಗಿ ಬೊಟ್‍ಗಳನ್ನು ಹೂವುಗಳಿಂದ ವಿಶೇಷವಾಗಿ ಸಿಂಗರಿಸಲಾಗಿದ್ದು, ಬಲೂನ್ ಡೆಕೋರೇಷನ್ ಮಾಡಲಾಗಿತ್ತು.