ದಾವಣಗೆರೆ/ನವದೆಹಲಿ, ಫೆ. 4 – ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ಅವರನ್ನು ಕಾಂಗ್ರೆಸ್ ಸಂಸದರುಗಳು ನವದೆಹಲಿಯ ಕಚೇರಿಯಲ್ಲಿ ಭೇಟಿಯಾಗಿ ರಾಜ್ಯಕ್ಕೆ ಅಗತ್ಯವಿರುವ ಅನುದಾನ ಸೇರಿದಂತೆ, ವಿವಿಧ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿ, ಮನವಿ ಸಲ್ಲಿಸಿದ್ದೇವೆ ಎಂದು ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ 2024-25ರ ಕೃಷಿ ಸಾಲಕ್ಕಾಗಿ ರೂ. 9162 ಕೋಟಿ ಅನುದಾನಕ್ಕೆ ವಿನಂತಿಸಿತ್ತು. ಆದರೆ ನಬಾರ್ಡ್ ಕೇವಲ ರೂ. 2340 ಕೋಟಿ ಮಾತ್ರ ಮಂಜೂರು ಮಾಡಿದೆ. ಇದು ಹಿಂದಿನ ವರ್ಷಕ್ಕಿಂತ 58% ಕಡಿಮೆ ಇದೆ. ಈ ಕೊರತೆಯು ರಾಜ್ಯದ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುವ ಅಪಾಯವಿದೆ. ಸಾಲಮಿತಿಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವಂತೆ ನಬಾರ್ಡ್ ಮತ್ತು ಆರ್.ಬಿ.ಐ ಗೆ ಸೂಚಿಸಲು ಸಚಿವರಿಗೆ ಮನವಿ ಮಾಡಲಾಯಿತು. ಇದರೊಂದಿಗೆ ಎಲ್‌ಐಸಿ ಹಾಗೂ ಜೀವ ವಿಮಾ ಪ್ರತಿ ನಿಧಿಗಳ ಭವಿಷ್ಯಕ್ಕೆ ಮಾರಕವಾಗುವ ತಿದ್ದುಪಡಿಯಿಂದ ಪ್ರತಿ ನಿಧಿಗಳಿಗೆ ತೊಂದರೆಯಾಗಲಿದೆ.
ವಿಮಾ ಸೆಕ್ಷನ್ 42 (2) ತಿದ್ದುಪಡಿ ಪ್ರಸ್ತಾವನೆಯಂತೆ ಏಜೆಂಟರುಗಳಿಗೆ ಬಹು ವಿಮಾ ಕಂಪನಿಗಳೊಂದಿಗೆ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದು ಸಾರ್ವಜನಿಕ ಸಂಸ್ಥೆಯಾದ ಎಲ್.ಐ.ಸಿ ಯ ಸ್ಥಿರತೆಯನ್ನು ಹಾಳು ಮಾಡುವ ಜೊತೆಗೆ, ಲಕ್ಷಾಂತರ ಏಜೆಂಟ್‌ಗಳ ಉದ್ಯೋಗ ಭದ್ರತೆಗೆ ಹಾಗೂ ಗ್ರಾಹಕರ ವಿಶ್ವಾಸಕ್ಕೆ ಆಘಾತ ತರುವಂತಿದೆ. ಈ ತಿದ್ದುಪಡಿಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಚರ್ಚಿಸಿ, ಎಲ್.ಐ.ಸಿ ಯನ್ನು ಹಾಗೂ ಅದರ ಏಜೆಂಟರುಗಳನ್ನು ರಕ್ಷಿಸುವಂತೆ ಮನವಿ ಮಾಡಲಾಯಿತು.
ನಿಯೋಗದಲ್ಲಿ ಕರ್ನಾಟಕದ ಸಂಸದರುಗಳಾದ ಶ್ರೇಯಸ್ ಎಂ. ಪಾಟೀಲ್, ಪ್ರಿಯಾಂಕ ಜಾರಕಿಹೊಳಿ, ಸಾಗರ್ ಖಂಡ್ರೆ, ಸುನೀಲ್ ಬೋಸ್ ಮತ್ತಿತರರಿದ್ದರು.