ದಿಶಾ ಸಮಿತಿ ಸಭೆಯಲ್ಲಿ ಸಂಸದರಿಗೆ ಅಧಿಕಾರಿಗಳ ಮಾಹಿತಿ
ದಾವಣಗೆರೆ, ಜ. 28- ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರರು ಬರುವ ಮಾರ್ಚ್ ವೇಳೆಗೆ ಏಜೆನ್ಸಿಗಳು ಹಾಗೂ ಮಧ್ಯವರ್ತಿಗಳ ಶೋಷಣೆಯಿಂದ ಬಹುತೇಕ ಮುಕ್ತರಾಗಲಿದ್ದಾರೆ.
ಅಧಿಕಾರಿಗಳು ಮತ್ತು ಕಾರ್ಮಿಕ ಪ್ರತಿನಿಧಿಗಳನ್ನು ಒಳಗೊಂಡ ‘ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ಧೇಶ ಸಹಕಾರ ಸಂಘ’ (ಸೊಸೈಟಿ)ದ ಮೂಲಕ ಹೊರ ಗುತ್ತಿಗೆ ನೌಕರರಿಗೆ ಮಾರ್ಚ್ ವೇಳೆಗೆ ವೇತನ ಪಾವತಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಜಿಲ್ಲಾ ಪಂಚಾಯ್ತಿಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದರು.
ಹೊರ ಗುತ್ತಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಈ ಬಗ್ಗೆ ಬರುತ್ತಿರುವ ದೂರುಗಳ ಕುರಿತು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ದನಿಗೂಡಿಸಿದ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಮಹಾನಗರ ಪಾಲಿಕೆ ಮೇಯರ್ ಚಮನ್ ಸಾಬ್, ಆದಷ್ಟು ಬೇಗನೆ ಹೊರ ಗುತ್ತಿಗೆ ನೌಕರರನ್ನು ಷೋಷಣೆ ಮುಕ್ತರನ್ನಾಗಿ ಮಾಡಬೇಕಿದೆ ಎಂದರು.
ಈ ವೇಳೆ ಮಾತನಾಡಿದ ಜಿ.ಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಈಗಾಗಲೇ ಬೀದರ್ ಹಾಗೂ ರಾಯಚೂರಿನಲ್ಲಿ ಸೊಸೈಟಿ ರಚಿಸಲಾಗಿದೆ. ಮೂರನೇ ಜಿಲ್ಲೆಯಾಗಿ ದಾವಣಗೆರೆಯಲ್ಲಿಯೂ ಸೊಸೈಟಿ ರಚನೆ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು. ಈಗಾಗಲೇ ನೌಕರರಿಂದ ಷೇರು ಸಂಗ್ರಹ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದಾದ ನಂತರ ಎಲ್ಲ ಇಲಾಖೆಗಳಲ್ಲಿ ಇರುವ ಎಲ್ಲ ಹೊರಗುತ್ತಿಗೆ ನೌಕರರು ಸೊಸೈಟಿಯ ಸದಸ್ಯರಾಗಲಿದ್ದಾರೆ. ಸಂಘದಿಂದಲೇ ವೇತನ ಪಾವತಿಸುವುದರಿಂದ ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಚತೆ ಹಾಗೂ ತ್ವರಿತ ಸೇವೆಗೆ ಆದ್ಯತೆ ನೀಡಬೇಕು. ರೋಗಿಗಳು ಹಾಗೂ ರೋಗಿಗಳ ಜೊತೆ ಬಂದ ಸಹಾಯಕರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಸದರು ಜಿಲ್ಲಾ ಸರ್ಜನ್ ಅವರಿಗೆ ಸೂಚಿಸಿದರು.
ಮರಣೋತ್ತರ ಪರೀಕ್ಷೆ ನಡೆಸುವ ಕಟ್ಟಡ ತುಂಬಾ ಹಾಳಾಗಿದ್ದು, ಹೊಸದಾಗಿ ನಿರ್ಮಿಸಬೇಕಿದೆ. ಇತ್ತೀಚೆಗೆ ಆರೋಗ್ಯ ಸಚಿವರು ಆಗಮಿಸಿದ್ದಾಗ ಈ ಬಗ್ಗೆ ಮನವಿ ಮಾಡಲಾಗಿದೆ ಎಂದರು.
ಕೆಳ ಹಂತದಲ್ಲಿನ ಸಿಬ್ಬಂದಿಗಳ ಕಾರ್ಯವೈಖರಿ ಹೇಗಿದೆ ಎಂದು ವರದಿ ನೀಡಿ. ಅಲ್ಲಿ ಇಲ್ಲಿ ಪ್ರಭಾವ ಬಳಸಿ ವರ್ಗಾವಣೆ ಮಾಡಿಸಿಕೊಂಡು ಬಂದು ಕೆಲಸ ಮಾಡದೇ ಇರುತ್ತಾರೆ. ಈ ಬಗ್ಗೆ ಗಮನ ಹರಿಸಬೇಕು. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಇಲಾಖೆಗೆ ಉತ್ತಮ ಹೆಸರು ಬರುತ್ತದೆ ಎಂದು ಸಲಹೆ ನೀಡಿದರು.
ಆರೋಗ್ಯ ಕ್ಷೇತ್ರ ಸುಧಾರಣೆಗೆ ಚಿಂತನೆ
ಎನ್ಜಿಒ ಜೊತೆ ಯಾವ ರೀತಿ ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ಏಜೆನ್ಸಿಗಳು ಆರ್ಥಿಕವಾಗಿ ಹಾಗೂ ಸಂಪನ್ಮೂಲ ನೀಡುವುದರಲ್ಲಿ ಹೇಗೆ ಸಪೋರ್ಟ್ ಮಾಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಪ್ರಾಥಮಿಕ ಹಾಗೂ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ಟೆಸ್ಟ್ಗಳು ನಡೆದರೆ, ಸಿಟಿ ಅಥವಾ ಎಂಆರ್ಐ ಸ್ಕ್ಯಾನ್ ನಡೆದರೆ, ಅದನ್ನು ಶೀಘ್ರವೇ ಜಿಲ್ಲಾಸ್ಪತ್ರೆಯ ನುರಿತ ತಜ್ಞರು ಪರಿಶೀಲಿಸಿ ಸಲಹೆ ನೀಡುವಂತಾಗಬೇಕಿದೆ.
ರೋಗಿಗೆ ತುರ್ತು ಚಿಕಿತ್ಸೆ ಅಗತ್ಯವಾ? ಇಲ್ಲವಾ? ಎಂಬ ಬಗ್ಗೆ ಎರಡನೇ ಸಲಹೆ ಪಡೆಯಲು ಸಹಾಯಕವಾಗುತ್ತದೆ. ಎಷ್ಟೋ ಬಾರಿ ಖಾಸಗಿ ಆಸ್ಪತ್ರೆಯಲ್ಲಿ ಹಣಕ್ಕಾಗಿ ರೋಗಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಆದ್ದರಿಂದ ಸರ್ಕಾರದ ಮಟ್ಟದಲ್ಲಿ ಕೆಲವು ಸುಧಾರಣೆ ತಂದರೆ ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನೊಳಗೊಂಡು ಪ್ರತ್ಯೇಕ ಸಭೆ ನಡೆಸೋಣ ಎಂದು ಸಂಸದರು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ಥಾಯಿ ಸಮಿತಿಗೆ ನಾನೂ ಸಹ ಸದಸ್ಯಳಾಗಿದ್ದು, ಬೇರೆ ರಾಜ್ಯಗಳಲ್ಲಿ ಸರ್ಕಾರದ ಮಟ್ಟದಲ್ಲಿ ಆರೋಗ್ಯ ಸೇವೆ ಸಾಕಷ್ಟು ಸುಧಾರಿಸಿರುವುದನ್ನು ಗಮನಿಸಿದ್ದೇನೆ ಎಂದರು.
ಪ್ರತಿ ಶಾಲೆಗೂ ಕಾಂಪೌಂಡ್
ಶಾಲಾ ಆವರಣದಲ್ಲಿ ಎಲ್ಲೆಂದರಲ್ಲಿ ಸಂಜೆಯ ವೇಳೆ ಮದ್ಯದ ಬಾಟಲಿಗಳು ಬಿದ್ದಿರುತ್ತವೆ. ಬೆಳಗ್ಗೆ ಶಾಲೆಗೆ ಆಗಮಿಸುವ ಮಕ್ಕಳು ಇದೆಲ್ಲವನ್ನು ಗಮನಿಸುವುದ ರಿಂದ ಅವರ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಪ್ರತಿ ಶಾಲೆಗೆ ಕಾಂಪೌಂಡ್ ಇರಬೇಕು ಮತ್ತು ಶಾಲೆಯ ಅಕ್ಕಪಕ್ಕದಲ್ಲಿರುವ ಅಂಗಡಿಗಳಲ್ಲಿ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ತಿನಿಸುಗಳು ಮತ್ತು ಇತರೆ ವಸ್ತುಗಳ ಮಾರಾಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸಂಸದರು ಸೂಚಿಸಿದರು.
ರಸ್ತೆ, ಚರಂಡಿ ಒತ್ತುವರಿ ಸಲ್ಲದು
ನಗರ, ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆ ಹಾಗೂ ಚರಂಡಿ ಒತ್ತುವರಿ ಮಾಡಿ ಕೊಂಡು ಮನೆಗಳನ್ನು ನಿರ್ಮಾಣ ಮಾಡುವುದು ಕಂಡು ಬಂದಿದ್ದು ಸಾರ್ವಜನಿಕರಿಗೆ ಅನುಕೂಲವಾ ಗುವ ನಿಟ್ಟಿನಲ್ಲಿ ಯಾರೂ ಸಹ ಚರಂಡಿ, ರಸ್ತೆಗಳನ್ನು ಒತ್ತುವರಿ ಮಾಡದಂತೆ ಮನೆ ನಿರ್ಮಾಣ ಮಾಡುವ ವೇಳೆ ಲೈಸೆನ್ಸ್ ನೀಡಬೇಕು. ಉಲ್ಲಂಘನೆ ಮಾಡಿ ನಿರ್ಮಾಣ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು.
ಅಕ್ಕ ಕೆಫೆ ಸೇವೆ ವಿಸ್ತರಿಸಿ
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ನೂತನವಾಗಿ ಆರಂಭಿಸಲಾಗಿರುವ ಅಕ್ಕ ಕೆಫೆ ಸೇವೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆಯೂ ಹಾಗೂ ಕ್ಯಾಟರಿಂಗ್ ನೀಡುವ ಮೂಲಕ ಸೇವೆ ವಿಸ್ತರಿಸುವಂತೆಯೂ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಸರ್ಕಾರವು ಗರ್ಭಿಣಿಯರ ಆರೋಗ್ಯಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದೆ. ಇದು ಸದ್ಭಳಕೆಯಾಗಬೇಕು. ತಾಯಿ ಹಾಗೂ ಮಗುವಿನ ಆರೋಗ್ಯ ತುಂಬಾ ಮಹತ್ವದ್ದು. ಈ ನಿಟ್ಟಿನಲ್ಲಿ ಹೆಚ್ಚು ಅಪಾಯದ ಗರ್ಭಿಣಿಯರನ್ನು ಸರ್ವೇ ನಡೆಸಿ, ಅವರನ್ನು ಎರಡು ವಾರಗಳ ಕಾಲ ಮನೆಯಿಂದ ಕರೆತಂದು ಹೆರಿಗೆೆ ಸೌಲಭ್ಯ ಇರುವ ಕಡೆ ಇಟ್ಟು ಆರೈಕೆ ಮಾಡುವ ಕೆಲಸ ಮಾಡಿದಾಗ ಪ್ರಾಣಾಪಾಯದಿಂದ ಕಾಪಾಡುಬಹುದು ಎಂದು ಡಿಹೆಚ್ಒ ಅವರಿಗೆ ಸಂಸದರು ಸೂಚಿಸಿದರು.
ಗಾಜಿನ ಮನೆಯಲ್ಲಿ ಮೂಲ ಸೌಲಭ್ಯಗಳಿರಲಿ: ಗಾಜಿನ ಮನೆಗೆ ರಸ್ತೆ, ಶೌಚಾಲಯ ಸೇರಿ ಮೂಲ ಸೌಲಭ್ಯ ಕಲ್ಪಿಸುವಂತೆ ಸಂಸದರು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಗಾಜಿನ ಮನೆ ಆವರಣದಲ್ಲಿ ಶೀಘ್ರ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ. ಸಾರ್ವಜನಿಕರು ಒಂದು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಿದ್ದು, ನೆರಳಿಗಾಗಿ ಮಾರ್ಗದುದ್ದಕ್ಕೂ ಸಸಿಗಳನ್ನು ನಡೆಸಿ. ಹೊರ ಊರುಗಳಿಂದ ಹೆದ್ದಾರಿ ಮಾರ್ಗವಾಗಿ ಬರುವವರಿಗೆ ರಸ್ತೆ ವ್ಯವಸ್ಥೆ ಕಲ್ಪಿಸಿ ನಾಮ ಫಲಕ ಅಳವಡಿಸಿರಿ ಎಂದು ಸೂಚಿಸಿದರು.
ಪಿ.ಬಿ. ರಸ್ತೆ ವಿಭಜಕದಲ್ಲಿನ ಗಿಡಗಳನ್ನು ಕಾಪಾಡಿಕೊಳ್ಳಿ: ಪಿ.ಬಿ. ರಸ್ತೆ ವಿಭಜಕದಲ್ಲಿ ಉತ್ತಮ ಗಿಡಗಳನ್ನು ಬೆಳೆಸಲಾಗಿದೆ. ಆದರೆ ಅವುಗಳ ನಿರ್ವಹಣೆ ಮಾಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ನೀರು ನೀಡುವುದು. ಕೊಂಬೆಗಳನ್ನು ಕತ್ತರಿಸುವುದು ಸೇರಿದಂತೆ ಸಮರ್ಪಕ ನಿರ್ವಹಣೆ ಮಾಡಿ ಗಿಡಗಳನ್ನು ಕಾಪಾಡಿಕೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಸಭೆಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ, ಪಾಲಿಕೆ ಮೇಯರ್ ಕೆ.ಚಮನ್ ಸಾಬ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್ ಮತ್ತಿತರರಿದ್ದರು.