ದೇಶದ ಸಂಪತ್ತು ಸಾಧಕರೇ ಹೊರತು ಹಣವಂತರಲ್ಲ

ದೇಶದ ಸಂಪತ್ತು ಸಾಧಕರೇ ಹೊರತು ಹಣವಂತರಲ್ಲ

ಶ್ರೀ ಗುರು ವಾದ್ಯ ವೃಂದ ಮತ್ತು ಶ್ರೀ ಸಂಚಾರಿ ಕೆಬಿಆರ್ ಡ್ರಾಮಾ ಕಂಪನಿಯ ಕಾರ್ಯಕ್ರಮದಲ್ಲಿ ಬಸವಪ್ರಭು ಶ್ರೀ

ರಂಗಭೂಮಿ ಕ್ಷೇತ್ರದಲ್ಲಿ ಕಳೆದ 53 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತನ್ನ ಸೇವೆಯನ್ನು ಸರ್ಕಾರ ಪರಿಗಣಿಸದಿರುವುದು ಬೇಸರ ತಂದಿದೆ.

– ಚಿಂದೋಡಿ ಶಂಭುಲಿಂಗಪ್ಪ, ಹಿರಿಯ ರಂಗಭೂಮಿ ಕಲಾವಿದರು

ದಾವಣಗೆರೆ, ಜ. 27- ದೇಶದ ಸಂಪತ್ತು ಸಾಧಕರೇ ಹೊರತು ಹಣವಂತರಲ್ಲ ಎಂದು ಮಾರ್ಮಿಕವಾಗಿ ವಿಶ್ಲೇಷಿಸಿದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಯಾವುದೇ ಕ್ಷೇತ್ರದ ಸಾಧಕರಿಂದ ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದು ಪ್ರತಿಪಾದಿಸಿದರು.

ಸ್ಥಳೀಯ ಶ್ರೀ ಗುರು ವಾದ್ಯ ವೃಂದ ಮತ್ತು ಶ್ರೀ ಸಂಚಾರಿ ಕೆ.ಬಿ.ಆರ್. ಡ್ರಾಮಾ ಕಂಪನಿ ಇವರ ಜಂಟಿ ಆಶ್ರಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಏರ್ಪಾಡಾಗಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಜೀವನಕ್ಕೆ ಹಣವೊಂದೇ ಮುಖ್ಯವಲ್ಲ. ಮೌಲ್ಯಗಳನ್ನು ಅಳವಡಿಸಿಕೊಂಡಾಗ ಹಣ ಹುಡುಕಿಕೊಂಡು ಬರುತ್ತದೆ. ಹಣವನ್ನು ಎಲ್ಲರೂ ಗಳಿಸಬಹುದು. ಆದರೆ, ಮೌಲ್ಯಯುತ ಜೀವನ ರೂಪಿಸಿಕೊಳ್ಳುವುದು ಕೆಲವರಿಂದ ಸಾಧ್ಯ. ಕೆಲವರು ಹಲವರಾಗಬೇಕು ಎಂದು ಆಶಯ ವ್ಯಕ್ತಪಡಿಸಿದ ಶ್ರೀಗಳು, ಮೌಲ್ಯಗಳನ್ನು ಮೈಗೂಡಿಸಿಕೊಂಡವರು ದೇಶದ ಸಂಪತ್ತಾಗುತ್ತಾರೆ ಎಂದು ತಿಳಿಸಿದರು.

ಸುಮಾರು 20-25 ಭಾಷೆಗಳಲ್ಲಿ ಹತ್ತಾರು ಸಾವಿರ ಹಾಡುಗಳನ್ನಾಡಿದ ಎಸ್.ಪಿ. ಬಾಲಸುಬ್ರಹ್ಮಣ್ಯಂ, ವಿದ್ಯೆಯನ್ನೇ ಕಲಿಯದ – ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವುದರ ಜೊತೆಗೆ ಭಕ್ತಿಪ್ರಧಾನ – ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿ, ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಡಾ. ರಾಜ್‌ಕುಮಾರ್, ವಿಶ್ವ ಚಾಂಪಿಯನ್ ಗುಕೇಶ್ ಅವರಂತಹ ವಿವಿಧ ಕ್ಷೇತ್ರಗಳ ಸಾಧಕರು ಸದಾ ಸ್ಮರಣೀಯರು ಎಂದು ಶ್ರೀಗಳು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಇತ್ತೀಚಿನ ವರ್ಷಗಳಲ್ಲಿ ಟಿವಿ, ಮೊಬೈಲ್‌ಗಳ ಹಾವಳಿಯಿಂದ ವೇದಿಕೆ ಸಿಗುತ್ತಿಲ್ಲ ಎಂಬ ಕೊರಗು ಬೇಡ ಎಂದು ಕಲಾವಿದರಿಗೆ ಕಿವಿಮಾತು ಹೇಳಿದ ಶ್ರೀಗಳು, ಕಾಲಕ್ಕನುಗುಣವಾಗಿ ನಾವು ಬದಲಾಗುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಕಲಾ ಪ್ರದರ್ಶನ ಮಾಡಬೇಕು ಎಂದು ಕರೆ ನೀಡಿದರು.

ದೂರದರ್ಶನದ ಧಾರಾವಾಹಿಗಳನ್ನು ಪ್ರಸ್ತಾಪಿಸಿದ ಶ್ರೀಗಳು, ಸಂಬಂಧಗಳ ನಡುವಿನ ಜಗಳವನ್ನೇ ಹೆಚ್ಚಾಗಿ ಬಿತ್ತರಿಸುವುದರ ಬಗ್ಗೆ ವ್ಯಾಕುಲತೆ ವ್ಯಕ್ತಪಡಿಸಿದರು. ಜೀವನದ ನೆಮ್ಮದಿ ಗಾಗಿ ರಂಗಭೂಮಿ, ಸಾಂಸ್ಕೃತಿಕ ಕಾರ್ಯಕ್ರಮ ಗಳು, ಅಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದು ಹಿತನುಡಿದರು.

ಜ್ಯೋತಿಯನ್ನು ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ, ನಾಲ್ಕೈದು  ದಶಕಗಳಿಂದ ರಂಗಭೂಮಿ ಕಲೆಯನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಚಿಂದೋಡಿ ಶಂಭುಲಿಂಗಪ್ಪ ಅವರಂತಹ ಸಾಧಕರನ್ನು ಪರಿಗಣಿಸಿ, ಸ್ಥಾನ-ಮಾನಗಳನ್ನು ನೀಡುವಂತೆ ಸರ್ಕಾರವನ್ನು ಕೇಳಿಕೊಂಡರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ರಂಗಭೂಮಿ ಕ್ಷೇತ್ರದ ಮೂಲಕ ದಾವಣಗೆರೆಗೆ ಕೀರ್ತಿ ತಂದಿರುವ ಚಿಂದೋಡಿ ಮನೆತನದ ಎಲ್ಲಾ ಕಲಾವಿದರನ್ನು ಅಭಿನಂದಿಸಿದರು.

ಸ್ವಾಗತ ಕೋರಿದ ಶ್ರೀ ಗುರು ವಾದ್ಯ ವೃಂದದ ಅಧ್ಯಕ್ಷರೂ, ಹಿರಿಯ ರಂಗಭೂಮಿ ಕಲಾವಿದರೂ ಆದ ಚಿಂದೋಡಿ ಶಂಭುಲಿಂಗಪ್ಪ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ  ರಂಗಭೂಮಿ ಕ್ಷೇತ್ರದಲ್ಲಿ ಕಳೆದ 53 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತನ್ನ  ಸೇವೆಯನ್ನು ಸರ್ಕಾರ ಪರಿಗಣಿಸದಿರುವುದು ಬೇಸರ ತಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಂಚಾಲಕ ಬಿ.ಕೆ. ಗಣೇಶ್ ಬಿಸಲೇರಿ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿ. ಶಿವಕುಮಾರ್ ವಂದಿಸಿದರು.

ದರ್ಶನ್ ಮತ್ತು ತಂಡದವರಿಂದ ಸುಗಮ ಸಂಗೀತ ನಡೆಯಿತು. ಕಾರ್ಯಕ್ರಮದ ನಂತರ ಕಿವುಡ ಮಾಡಿದ ಕಿತಾಪತಿ ನಾಟಕ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. 

error: Content is protected !!