ದಾವಣಗೆರೆಗೆ ವಲಸೆ ಪಟ್ಟೆಹೆಬ್ಬಾತುಗಳು

ದಾವಣಗೆರೆಗೆ ವಲಸೆ ಪಟ್ಟೆಹೆಬ್ಬಾತುಗಳು

ದಾವಣಗೆರೆ ಹಲವಾರು ವಿದೇಶಿ-ವಲಸೆ ಹಕ್ಕಿಗಳ ಗಮ್ಯಸ್ಥಾನವಾಗಿರುವುದು ಸಂತೋಷದ ಸಂಗತಿ. ಹೊಸ ವರ್ಷದ ಜನವರಿ ಮೊದಲನೆ ವಾರದಲ್ಲಿ ದಾವಣಗೆರೆಯ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆಯಲ್ಲಿ ಇನ್ನೂರಕ್ಕಿಂತ ಹೆಚ್ಚು ಪಟ್ಟೆ ಹೆಬ್ಬಾತುಗಳು  ಬಂದಿವೆ. ಇವು ಚಳಿಗಾಲದ ವಲಸೆ ಹಕ್ಕಿಗಳು. ಸರಿ ಸುಮಾರು 5000 ಕಿ.ಮೀ. ದೂರದ ಮಂಗೋಲಿಯಾ ದೇಶದಿಂದ ಬಂದಿರುವ ಹಕ್ಕಿಗಳಿವು. 

ಅಲ್ಲಿ ಈಗ ಕೊರೆಯುವ ಚಳಿ. ಕೆರೆಯ ಉಷ್ಣತೆ -20 ಡಿಗ್ರಿ ಸೆಂಟಿಗ್ರೇಡ್‍ಗೆ ಇಳಿದು ಕೆರೆಯ ನೀರೆಲ್ಲಾ ಮಂಜುಗಡ್ಡೆಯಾಗುತ್ತದೆ.  ಈ ಸಮಯದಲ್ಲಿ ದಾವಣಗೆರೆಗೆಯಲ್ಲಿ ತಾಪಮಾನ +25 ಡಿಗ್ರಿ ಸೆಂಟಿಗ್ರೇಡ್ ಇದ್ದು ಇವುಗಳಿಗೆ ಸೂಕ್ತವಾದ ವಾತಾವರಣವಿರುತ್ತದೆ. ಈ ಹಕ್ಕಿಗಳು ಹಿಮಾಲಯ ಪರ್ವತ ಶ್ರೇಣಿಗಳನ್ನು ದಾಟಿ ಬರುವುದರಿಂದ ಪರ್ವತ ಹಕ್ಕಿ ಎಂದು ಸಹ ಕರೆಯುತ್ತಾರೆ. ವೈಜ್ಞಾನಿಕವಾಗಿ ಅನ್ಸರ್ ಇಂಡಿಕಸ್ ಎನ್ನುವರು. ಪ್ರತಿವರ್ಷವೂ ಭಾರತಕ್ಕೆ ಅದರಲ್ಲೂ ಕರ್ನಾಟಕದ ಕೆಲವು ಪ್ರದೇಶಗಳಿಗೆ ಈ ಹಕ್ಕಿಗಳು ಚಳಿಗಾಲದಲ್ಲಿ ವಲಸೆ ಬರುತ್ತವೆ. 

ಈಗಾಗಲೇ ಗದಗದ ಮಾಗಡಿ ಕೆರೆಗೆ ಇವು ನವೆಂಬರ್ ಮೊದಲ ವಾರದಲ್ಲಿ ಬಂದಿವೆ. ಅಪ್ಪಟ ಸಸ್ಯಹಾರಿಯಾಗಿರುವ ಇವು ಹುಲ್ಲಿನ ಚಿಗುರು, ಕಡ್ಲೆ ಕಾಳು ಮುಂತಾದವುಗಳನ್ನು ಆಹಾರವಾಗಿ ತಿನ್ನುತ್ತವೆ. ಸಂಜೆಯಾದೊಡನೆ ಆಹಾರಕ್ಕಾಗಿ ಕೆರೆಯಿಂದ ದೂರದ ಪ್ರದೇಶಗಳಿಗೆ ಪ್ರತ್ಯೇಕ ಗುಂಪುಗಳಲ್ಲಿ ಹೊರಡುತ್ತವೆ. ಬೆಳಿಗ್ಗೆ ಕೆರೆಗೆ ಹಿಂದಿರುಗಿ ಹಗಲಿನಲ್ಲಿ ವಿಶ್ರಾಂತಿ ಪಡೆಯುತ್ತವೆ. ಬೆಳಿಗ್ಗಿನಿಂದ ಸಂಜೆಯವರೆಗೆ ಕೆರೆಯಲ್ಲಿ ಈ ಹಕ್ಕಿಗಳನ್ನು ನೋಡಬಹುದು.

ಕಳೆದ ಹತ್ತು ವರ್ಷಗಳಿಂದ ದಾವಣಗೆರೆಯನ್ನು ಮರೆಯದೇ ಈ ಹಕ್ಕಿಗಳು ಬರುತ್ತಿರುವುದು ಸಂತೋಷದ ಸಂಗತಿ. ಈ ರೀತಿಯ ಅಪೂರ್ವ ಹಕ್ಕಿಗಳಿಂದ ದಾವಣಗೆರೆಗೆ ಪ್ರಪಂಚದ ಪಕ್ಷಿ ಭೂಪಟದಲ್ಲಿ ಹೆಸರು ಬಂದಿರುವುದು ಹೆಮ್ಮೆಯ ವಿಚಾರ. ಎಲ್ಲವೂ ಸರಿಯಿದ್ದರೆ ಈ ಹಕ್ಕಿಗಳು ಮಾರ್ಚ್‌ ತಿಂಗಳವರೆಗೆ ಇಲ್ಲಿರುತ್ತವೆ. ನಂತರ ಟಿಬೆಟ್‍ಗೆ ತೆರಳಿ ಮರಿ ಮಾಡಿ ಮಂಗೋಲಿಯಾಗೆ ಹಿಂದಿರುಗುತ್ತವೆ. 

ಆದರೆ ಕೊಂಡಜ್ಜಿ ಕೆರೆ ಹಾದಿ ತಪ್ಪಿದ ಯುವಕರ ತಂಗುದಾಣವಾಗಿದೆ. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಜೊತೆಗೂಡಿ ಇಲ್ಲಿನ ಪರಿಸರವನ್ನು ಹಾಳುಗೆಡಹುತ್ತಿರುವ ಯುವಕರನ್ನು ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕಿದೆ. ವಿದೇಶದ ಈ ಅಪೂರ್ವ ಅತಿಥಿಗಳನ್ನು ಜತನದಿಂದ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಹಲವಾರು ವರ್ಷಗಳಿಂದ ದಾವಣಗೆರೆಗೆ ವಲಸೆ ಹಕ್ಕಿಗಳ ದಂಡು ಬರುತ್ತಿರುವುದು ನಮ್ಮೆಲ್ಲರ ಹೆಮ್ಮೆ. ನಮ್ಮ ಪರಿಸರವನ್ನು ಯೋಗ್ಯವಾಗಿರಿಸಿ ಜೀವವೈವಿಧ್ಯಕ್ಕೆ ಕೊಡುಗೆ ನೀಡೋಣ. 

– ಚಿತ್ರಲೇಖನ

– ಡಾ. ಎಸ್. ಶಿಶುಪಾಲ,

ಸೂಕ್ಷ್ಮಜೀವಿಶಾಸ್ತ್ರ ವಿಭಾಗ ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ದಾವಣಗೆರೆ. (8792674905)

error: Content is protected !!