ಗುತ್ತಿಗೆದಾರರಿಗೆ ಈ ವರ್ಷ 800 ಕೋಟಿ ಪಾವತಿಸಲಾಗಿದೆ: ಸಿಎಂ ಸಿದ್ದರಾಮಯ್ಯ
ಚಿತ್ರದುರ್ಗ, ಜ 23- ಭದ್ರಾ ಮೇಲ್ದಂಡೆ ಕಾಮಗಾರಿಗಳು ಸ್ಥಗಿತವಾಗಿಲ್ಲ. ಆದರೆ ಶೀಘ್ರಗತಿ ಯಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ. ಗುತ್ತಿಗೆದಾರಿಗೆ ಈ ವರ್ಷ 800 ಕೋಟಿಗಳನ್ನು ಪಾವತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಗುರುವಾರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ನೀಡುವುದಾಗಿ 2023-24 ರ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಘೋಷಿಸಿದ್ದರು. ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರು ತಮ್ಮ ಬಜೆಟ್ ನಲ್ಲಿಯೂ ಇದನ್ನು ಪುನರುಚ್ಚರಿಸಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭದ್ರಾ ಮೇಲ್ದಂಡೆ ಯೋಜನೆ ಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವು ದಾಗಿ ಹೇಳಿದ್ದರು. ಇಷ್ಟು ವರ್ಷಗಳಾದರೂ ಒಂದು ಪೈಸೆಯೂ ರಾಜ್ಯಕ್ಕೆ ಬಂದಿಲ್ಲ ಎಂದರು.
ನಬಾರ್ಡ್ ನಲ್ಲಿ ರಾಜ್ಯಕ್ಕೆ ಬರಬೇಕಾದ ಸಾಲದ ಮೊತ್ತ ಕಡಿತವಾಗಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಿರ್ಮಲ ಸೀತಾರಾಮನ್ ಅವರನ್ನು ಭೇಟಿ ಮಾಡಿದಾಗಲೂ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ಆದರೆ ಇಂದಿನವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸದುರ್ಗ ತಾಲ್ಲೂಕಿನ ಹಿನ್ನೀರಿನಲ್ಲಿ ರೈತರ ಜಮೀನು ಮುಳುಗಡೆಯಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮುಳುಗಡೆಯಾಗದ ರೀತಿಯಲ್ಲಿ ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ವಾಣಿ ವಿಲಾಸ ಸಾಗರ ಅಣೆಕಟ್ಟೆಗೆ 115 ವರ್ಷಗಳ ಇತಿಹಾಸವಿದೆ. ಇಷ್ಟು ವರ್ಷಗಳಲ್ಲಿ ಈ ಅಣೆಕಟ್ಟು ಕೋಡಿ ಬಿದ್ದಿರುವುದು ಮೂರು ಬಾರಿ ಮಾತ್ರ. ಕರ್ನಾಟಕದ ಮೊದಲನೇ ಜಲಾಶಯ ಇದಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಸಂಪಾಜಮ್ಮಣಿಯವರ ಹೆಸರಿನಲ್ಲಿ ಕಟ್ಟಿಸಿದ್ದು, ವಾಣಿ ವಿಲಾಸ ಸಾಗರ ಎಂದು ಕರೆಯಲಾಗಿದೆ. 30.ಟಿ.ಎಂ.ಸಿ ನೀರು ಶೇಖರಣೆ ಮಾಡುವ ಸಾಮರ್ಥ್ಯವಿರುವ ಅಣೆಕಟ್ಟು 33 ಸಾವಿರ ಎಕರೆಗೆ ನೀರುಣಿಸುತ್ತದೆ ಎಂದರು.