ದಾವಣಗೆರೆ, ಜ.23- ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕನಸು ಇಂದಿಗೂ ನನಸಾಗಿಲ್ಲ. ಇದು ಅತ್ಯಂತ ನೋವಿನ ಸಂಗತಿ. ನೇತಾಜಿಯವರ ಎಚ್ಚರಿಕೆಗಳಿಗೆ ಅಂದೇ ಗಮನ ಕೊಟ್ಟಿದ್ದಿದ್ದರೆ, ಬ್ರಿಟಿಷರಿಂದ ಶ್ರೀಮಂತ ಭಾರತೀಯ ಬಂಡವಾಳಶಾಹಿಗಳಿಗೆ ಅಧಿಕಾರ ವರ್ಗಾವಣೆಯಾಗುವ ದುರಂತವನ್ನು ತಪ್ಪಿಸಬಹುದಿತ್ತು ಎಂದು ಮೆಡಿಕಲ್ ಸರ್ವೀಸ್ ಸೆಂಟರ್‌ನ ರಾಜ್ಯ ಕಾರ್ಯದರ್ಶಿ ಡಾ.ವಸುಧೇಂದ್ರ ಬೇಸರ ವ್ಯಕ್ತಪಡಿಸಿದರು.
ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಎಐಡಿವೈಓ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಕಾರರಾಗಿ ಆಗಮಿಸಿ ಅವರು ಮಾತನಾಡಿದರು.
ಆದರೆ, ಇಂದು ಕೋಟ್ಯಾಂತರ ಜನಸಾ ಮಾನ್ಯರ ದುಡಿಮೆಯ ಫಲದ ಬಹುಪಾಲನ್ನು ಕೆಲವೇ ಮಂದಿ ಬಂಡವಾಳಿಗರು ಕಬಳಿಸುತ್ತಿದ್ದಾರೆ. ಈ ಅಸಮಾನತೆಯ ವ್ಯವಸ್ಥೆಯನ್ನು ಕಿತ್ತೊಗೆಯಲು ವಿದ್ಯಾರ್ಥಿ-ಯುವಜನರು ಹೋರಾಟಗಳನ್ನು ಕಟ್ಟಬೇಕೆಂದು ಅವರು ಕರೆ ನೀಡಿದರು.
ಎಐಡಿವೈಓ ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ಚುನಾವಣಾ ಸಮಯದಲ್ಲಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಿಗೆ ಕೋಟಿ ಕೋಟಿ ದೇಣಿಗೆ ನೀಡುವ ಈ ಬಂಡವಾಳಿಗರು, ಸರ್ಕಾರದ ನೀತಿ-ನಿರೂಪಣೆ, ಕಾನೂನುಗಳು ಹೇಗಿರಬೇ ಕೆಂದು ನಿರ್ದೇಶಿಸುತ್ತಾರೆ. ಅದರ ಫಲವಾಗಿ, ಶಿಕ್ಷಣ, ಆರೋಗ್ಯ, ರಸ್ತೆ, ಭೂಮಿ, ಕಾರ್ಖಾನೆ, ನೀರು, ಎಲ್ಲವೂ ಖಾಸಗೀಕರಣಕ್ಕೆ ಒಳಪಟ್ಟು ಮಾರಾಟದ ಸರಕುಗಳಾಗಿವೆ. ಇಂದು ದೇಶದಲ್ಲಿ ನಿರುದ್ಯೋಗಿಗಳ ದೊಡ್ಡ ಪಡೆಯೇ ನಿರ್ಮಾಣವಾಗಿದೆ. ಹಾಗಾಗಿ ಶೋಷಣೆಯ ವಿರುದ್ಧ ನೇತಾಜಿ ಕಟ್ಟಿದ ಹೋರಾಟದ ಮಾರ್ಗದಲ್ಲಿ ಯುವಕರನ್ನು ಮುನ್ನಡೆಸಲು ಎಐಡಿವೈಓ ಅವಿರತ ಪ್ರಯತ್ನ ನಡೆಸುತ್ತಿದೆ ಎಂದರು.
ಎಐಡಿವೈಓನ ಜಿಲ್ಲಾ ಸಮಿತಿ ಸದಸ್ಯರಾದ ಅನಿಲ್ ಕುಮಾರ್, ಗುರು, ಶಶಿ ಹಾಗೂ ವಿ.ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಮತ್ತು ಮೃತ್ಯುಂಜಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.