ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಹಾವಳಿ

ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಹಾವಳಿ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳ ಕಳವಳ

ದಾವಣಗೆರೆ, ಜ.23- ನಗರದಲ್ಲಿ ಅನುಮತಿ ಪಡೆಯದೇ ನಡೆಸುವ ಕೋಚಿಂಗ್ ಸೆಂಟರ್ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಪೋಷಕರು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳ ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಗುರುವಾರ ಇಲ್ಲಿನ ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಶಾಲೆಯಲ್ಲಿದೆ ಶಿಕ್ಷಣದ ಜೊತೆಗೆ ರಕ್ಷಣೆ’ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗುಲ್ಬರ್ಗ ಜಿಲ್ಲೆಯಲ್ಲಿ ಅನುಮತಿ ಪಡೆಯದೇ ನಡೆಸಲಾಗುತ್ತಿದ್ದ ವಸತಿ ಶಾಲೆಯಲ್ಲಿ ಶಿಕ್ಷಕನೇ ವಿದ್ಯಾರ್ಥಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಇಂತಹ ಘಟನೆಗಳು ನಡೆಯುವ ಮೊದಲೇ ಎಚ್ಚೆತ್ತುಕೊಳ್ಳುವುದು ಅಗತ್ಯ ಎಂದು ಹೇಳಿದರು.

ಪಿಯುಸಿ ಕಾಲೇಜುಗಳಲ್ಲೂ ಕೋಚಿಂಗ್ ಹೆಸರಿನಲ್ಲಿ ಮಕ್ಕಳನ್ನು ಉಳಿಸಿಕೊಳ್ಳಲಾಗುತ್ತದೆ. ಶಿಕ್ಷಣ ಇಲಾಖೆಯೂ ಇದಕ್ಕೆ ಅನುಮತಿ ನೀಡಲು ಬರುವುದಿಲ್ಲ. ಹೀಗಿದ್ದಾಗ ಯಾವ ಇಲಾಖೆ ಕೇಳಿ ಮಕ್ಕಳನ್ನು ಇಟ್ಟುಕೊಳ್ಳುತ್ತಾರೆ? ಹೀಗೆ ಅನಧಿಕೃತ ವಾಗಿ ಮಕ್ಕಳನ್ನು ಉಳಿಸಿಕೊಳ್ಳುವ ಕಡೆ ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದು ಎಚ್ಚರಿಸಿದರು. ಜಿಲ್ಲೆಯಲ್ಲಿ 6,800 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. 400 ಮಕ್ಕಳು ಕಳೆದ ವರ್ಷ ಹೊರಗೆ ಉಳಿದಿದ್ದರು ಎಂಬ ಅಂಕಿ ಅಂಶ ಇದೆ. ಈ ವರ್ಷ ಏಕೆ ಹೆಚ್ಚು ಎಂಬುದನ್ನು ಗಮನಿಸಬೇಕಿದೆ. ಎರಡೂ ಸಂಖ್ಯೆ ವಿಶ್ವಾಸಾರ್ಹವಾಗಿಲ್ಲ ಎಂದು ಹೇಳಿದರು.

ಸರ್ಕಾರಿ ಶಾಲೆಯಲ್ಲಿ ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಸಂಖ್ಯೆ ಹೆಚ್ಚು ಇದೆ. ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರತಿ ಜಿಲ್ಲೆಯಲ್ಲಿ ಮಾಹಿತಿ ಪಡೆಯಲಾಗುತ್ತಿದೆ. ಬಾಲ್ಯ ವಿವಾಹ ಹಾಗೂ ಪೋಕ್ಸೋ ಸಂತ್ರಸ್ತ ಮಕ್ಕಳ ಸಂಖ್ಯೆ ಸರ್ಕಾರಿ ಶಾಲೆಯಲ್ಲಿ ಹೆಚ್ಚಾಗಿದೆ ಎಂದರು.

ದೇಶದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ ಆದರೆ, ಸಮಾಜಿಕ ಪಿಡುಗುಗಳು ಹೆಚ್ಚಾಗುತ್ತಲೇ ಇವೆ. ಶಾಲೆಗಳಲ್ಲಿ  ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದರೂ ಪ್ರಯೋಜನವಾಗುತ್ತಿಲ್ಲ. ಮಕ್ಕಳಿಗೆ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಸಾಧ್ಯಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

2030ರ ವೇಳೆಗೆ ಭಾರತ ಬಾಲ್ಯ ವಿವಾಹ ಮುಕ್ತ ಆಗುವ ಗುರಿ ಹೊಂದಿದೆ. ಮಗು ಶಾಲೆಗೆ ಗೈರು ಆಗಿದ್ದರೆ ತಕ್ಷಣ ಮಾಹಿತಿ ನೀಡಬೇಕು. ಪರಿಶೀಲನೆ ಮಾಡಬೇಕು. ಖಾಸಗಿ ಶಾಲೆಯ ಮಕ್ಕಳು ಗೈರು ಆಗಿದ್ದರೆ ತಕ್ಷಣ ಪೋಷಕರಿಗೆ ಸಂದೇಶ ರವಾನೆ ಆಗುತ್ತದೆ. ತಂತ್ರಜ್ಞಾನದ ನೆರವಿನಿಂದ ಮಕ್ಕಳ ಮೇಲೆ ನಿಗಾ ಇಡುವ ವ್ಯವಸ್ಥೆ ಕಲ್ಪಿಸಲು ಸಾಧ್ಯ ಇದೆ. ಒಂದು ದಿನ ಮಗು ಶಾಲೆಯಿಂದ ಹೊರಗೆ ಉಳಿದರೆ ಪರಿಶೀಲನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಡಿಡಿಪಿಐ ಜಿ.ಕೊಟ್ರೇಶ್ ಮಾತನಾಡಿ, ಮಕ್ಕಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕೆಲಸ ಮಾಡಿದೆ. ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಉಚಿತ ಮತ್ತು ಕಡ್ಡಾಯ ಶಿಕ್ಷಣದ ಬಗ್ಗೆ ಶಿಕ್ಷಕ ನಾಗರಾಜ. ಡಿ ಉಪನ್ಯಾಸ ನೀಡಿದರು.  ಆರ್.ಸಿ.ಹೆಚ್. ಅಧಿಕಾರಿ ಡಾ.ರೇಣುಕಾರಾಧ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಟಿ ಎನ್. ಅಥಣಿ ಕಾಲೇಜು ಪ್ರಾಂಶುಪಾಲ  ಷಣ್ಮುಖಪ್ಪ  ಉಪಸ್ಥಿತರಿದ್ದರು.

error: Content is protected !!