ಆರನೇ ವರ್ಷದ ಪುಣ್ಯ ಸ್ಮರಣೋತ್ಸವದಲ್ಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ, ಜ.21- ತ್ರಿವಿಧ ದಾಸೋಹಿ ಸಿದ್ಧಗಂಗಾ ಡಾ. ಶಿವಕುಮಾರ ಮಹಾಸ್ವಾಮೀಜಿ ಯವರನ್ನು `ರಾಷ್ಟ್ರ ಸಂತ’ ಎಂದು ಪರಿಗಣಿಸಿ, ಘೋಷಿಸಬೇಕೆಂದು ಕೂಡಲಸಂಗಮ ಲಿಂಗಾ ಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಕೊಂಡಜ್ಜಿ ರಸ್ತೆಯಲ್ಲಿನ ಆರ್ಟಿಓ ಕಚೇರಿ ಬಳಿ ಸಿದ್ಧಗಂಗಾ ಡಾ. ಶಿವಕುಮಾರ ಮಹಾಸ್ವಾಮೀಜಿ ವೃತ್ತದಲ್ಲಿ ಶ್ರೀಗಳ ಪುತ್ಥಳಿ ಅನಾವರಣಗೊಳಿಸಿ, ನಂತರ ನಡೆದ ಶ್ರೀಗಳ ಆರನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ದಾಸೋಹ ದಿನಾಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಡಾ. ಶಿವಕುಮಾರ ಮಹಾಸ್ವಾಮೀಜಿ ಯವರು 20ನೇ ಶತಮಾನದ ಮಾತನಾಡುವ ದೇವರು, ನಡೆದಾಡುವ ವಿಶ್ವವಿದ್ಯಾಲಯ. ಇನ್ನೂ ಸಾವಿರ ಜನುಮ ಹೊತ್ತು ಬಂದರೂ ಶ್ರೀಗಳ ಋಣ ತೀರಿಸಲು ಸಾಧ್ಯವಿಲ್ಲ. ಶ್ರೀಮಠವನ್ನು ಜಾತ್ಯತೀತವಾಗಿ ನಡೆಸುವ ಮೂಲಕ ಕೋಟ್ಯಂತರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿದ ಮಹಾತ್ಮರು ಎಂದು ಬಣ್ಣಿಸಿದರು.
ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣ ಮತ್ತು ಧರ್ಮಕಾರಣ ಕಲುಷಿತಗೊಂಡಿದ್ದು, ಇವೆರಡೂ ಶುದ್ಧೀಕರಣವಾಗಬೇಕಿದೆ. ಅಶುದ್ಧ ವ್ಯಕ್ತಿಗಳಿರುವ ಕಾರಣ ರಾಜಕಾರಣ ಕೆಟ್ಟಿದ್ದು, ಧರ್ಮದ ಬಗ್ಗೆ ಅಪಾರ್ಥ ಮಾಡಿಕೊಂಡವರಿಂದ ಧರ್ಮಕಾರಣ ಕೆಟ್ಟಿದೆಯೇ ಹೊರತು ಧರ್ಮಕಾರಣ ಎಂದಿಗೂ ಕೆಡುವುದಿಲ್ಲ ಎಂದು ಹೇಳಿದರು.
ದಾವಣಗೆರೆ ಈ ಹಿಂದೆ ಚಳವಳಿ ನಗರಿ, ವ್ಯಾಪಾರಿ ನಗರಿಯಾಗಿ ನಂತರದಲ್ಲಿ ಶಿಕ್ಷಣ ನಗರಿಯಾಗಿದ್ದು, ಇದರೊಟ್ಟಿಗೆ ದಾನ ಧರ್ಮದ ನಗರ ಕೂಡ ಆಗಿದೆ. ಜಯದೇವ ಜಗದ್ಗುರು, ಬಕ್ಕೇಶ್ವರ ಶ್ರೀ ಸೇರಿದಂತೆ ಅನೇಕ ಸ್ವಾಮೀಜಿಯವರು ದಾನ, ಧಾರ್ಮಿಕ ನಗರವಾಗಲು ಕಾರಣರಾಗಿದ್ದಾರೆ. ದಾವಣಗೆರೆಯಲ್ಲೂ ದಾಸೋಹ ಸಂಸ್ಕೃತಿ ಬೆಳೆಯಲು ಮೂಲ ಪ್ರೇರಣೆ ಸಿದ್ಧಗಂಗಾ ಶ್ರೀಗಳು. ಅವರ ಹೆಸರನ್ನು ವೃತ್ತಕ್ಕೆ ಇಟ್ಟಿರುವುದು ಸಂತಸದ ವಿಚಾರ ಎಂದರು.
ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ತ್ರಿವಿಧ ದಾಸೋಹಿ ಡಾ. ಶಿವಕುಮಾರ ಮಹಾಸ್ವಾಮಿಗಳಿಗೆ ದೇಶದ ಅತ್ಯುನ್ನತ `ಭಾರತ ರತ್ನ’ ಪ್ರಶಸ್ತಿಯನ್ನು ಇದೇ ದಿನಾಂಕ 26 ರೊಳಗೆ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಶಿವಕುಮಾರ ಶ್ರೀಗಳಿಗೆ `ಭಾರತ ರತ್ನ’ ಘೋಷಿಸುವಲ್ಲಿ ಕೇಂದ್ರ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಗಣರಾಜ್ಯೋತ್ಸವದೊಳಗೆ ಪ್ರಶಸ್ತಿಯನ್ನು ಘೋಷಿಸಬೇಕೆಂದು ಆಗ್ರಹಿಸಿದರು.
ಯಾವುದೇ ಜಾತಿ, ಮತ, ಪಂಥಗಳ ಭೇದವಿಲ್ಲದೇ ಜಾತ್ಯತೀತವಾಗಿ ಸರ್ವರಿಗೂ ಸಮನಾಗಿ ಅನ್ನ, ಅಕ್ಷರ, ಆಶ್ರಯದ ಜೊತೆೆಗೆ ಜ್ಞಾನ ದಾಸೋಹ ನೀಡಿದ ಮಹಾತ್ಮ ಸಿದ್ಧಗಂಗಾ ಶ್ರೀಗಳು. ಅಪ್ಪಟ ಬಸವ ತತ್ವದ ಅನುಯಾಯಿಯಾಗಿದ್ದ ಶ್ರೀಗಳು ಕಾಯಕ, ದಾಸೋಹ ಮತ್ತು ಸಮಾನತೆಯ ಮಂತ್ರವನ್ನು ನೀಡಿದವರು. ಇಂತಹ ಮಹಾಪುರುಷರಿಗೆ `ಭಾರತ ರತ್ನ’ ಪ್ರಶಸ್ತಿ ನೀಡಿದರೆ ಭಾರತದ ಸಂಸ್ಕೃತಿಯನ್ನು ಮತ್ತು ಜಾತ್ಯತೀತ ಮಠವನ್ನು ಗೌರವಿಸಿದಂತಾಗುತ್ತದೆ ಎಂದರು.
ದಾವಣಗೆರೆ ಕೊಂಡಜ್ಜಿ ರಸ್ತೆಯ ವೃತ್ತವೊಂದಕ್ಕೆ ಡಾ. ಶಿವಕುಮಾರ ಸ್ವಾಮೀಜಿ ವೃತ್ತ ಎಂದು ನಾಮಕರಣ ಮಾಡುವ ಜೊತೆಗೆ ಅವರ ಪುತ್ಥಳಿ ಅನಾವರಣಗೊಳಿಸುವ ಕಾರ್ಯ ಶ್ಲ್ಯಾಘನೀಯವಾದುದು. ಈವರೆಗೆ ಆರ್ಟಿಓ ಸರ್ಕಲ್ ಎಂದೇ ಕರೆಯಲ್ಪಡುತ್ತಿದ್ದ ಸರ್ಕಲ್ ಅನ್ನು ಇನ್ನುಮುಂದೆ ಸಿದ್ಧಗಂಗಾ ಡಾ. ಶಿವಕುಮಾರ ಮಹಾಸ್ವಾಮಿ ವೃತ್ತ ಎಂದೇ ಕರೆಯಬೇಕು. ಯುವ ಮುಖಂಡ ಶಂಕರ್ ಶಿರೇಕರ್ ಪವಾರ್ ಮತ್ತವರ ತಂಡ ಪುತ್ಥಳಿ ಸ್ಥಾಪಿಸಿರುವುದು ಸಂತಸದ ವಿಚಾರ.ಆದಷ್ಟೂ ಬೇಗ ಕಂಚಿನ ಪುತ್ಥಳಿ ಸ್ಥಾಪಿಸುವ ಅವರ ಆಶಯ ಈಡೇರಲಿ ಎಂದು ಆಶಿಸಿದರು.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಖ್ಯಾತಿ ಗಳಿಸಿದ್ದ ಸಿದ್ಧಗಂಗಾ ಜಗದ್ಗುರು ಡಾ. ಶಿವಕುಮಾರ ಮಹಾಸ್ವಾಮೀಜಿಯವರು ಕೋಟ್ಯಂತರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ನೀಡಿದ ಮಹಾಪುರುಷರು ಎಂದು ಬಣ್ಣಿಸಿದರು.
ಸಿದ್ಧಗಂಗಾ ಮಠದ ದಾಸೋಹಕ್ಕೆ ನಾಡಿನ ಭಕ್ತರು ಸ್ವಯಂಪ್ರೇರಿತರಾಗಿ ದವಸ-ಧಾನ್ಯಗಳನ್ನು ನೀಡುತ್ತಾ ಬಂದಿದ್ದಾರೆ. ಅಂದು ಹೊತ್ತಿಸಿದ ಒಲೆ ಇಂದಿಗೂ ಆರಿಲ್ಲ. ನಿತ್ಯ ನಿರಂತರವಾಗಿ ನಡೆಯುತ್ತಿರುವುದು ವಿಶೇಷ ಎಂದರು.
ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಮನುಷ್ಯ ಜೀವಂತವಾಗಿ ಇದ್ದಾಗಲೇ ಮಾಡಿದ ಸೇವಾ ಕಾರ್ಯಗಳು, ಸಾಧನೆಗಳು ಮುಂದಿನ ಪೀಳಿಗೆಗೆ ಸ್ಮರಣೀಯವಾಗಲಿ, ಅವರ ಮಾರ್ಗದಲ್ಲಿ ಮುನ್ನಡೆಯಲಿ ಎಂದು ಅವರ ಸ್ಮರಣೀಯನ್ನಾಗಲಿ, ಪುತ್ಥಳಿಯನ್ನಾಗಲಿ ನಿರ್ಮಿಸುತ್ತಾರೆ. ಆದರೆ ಇದೀಗ ಕಾಲ ವ್ಯತಿರಿಕ್ತವಾಗಿದೆ. ಸರ್ಕಾರದ ಹಣದಲ್ಲಿ ಕೆಲವರು ಜೀವಂತವಾಗಿದ್ದಾಗಲೇ ಬಡಾವಣೆಗಳಿಗೆ, ವೃತ್ತಗಳಿಗೆ, ಸಭಾಂಗಣಗಳಿಗೆ, ಕೆರೆಗಳಿಗೆ ಹೆಸರುಗಳನ್ನಿಟ್ಟಿದ್ದಾರೆ. ದಾವಣಗೆರೆಯಲ್ಲಿ ಯಾರಾದರೂ ಮಹಾಪುರುಷರ ಹೆಸರು ಇಡಬೇಕೆಂದರೆ ಎಲ್ಲೂ ಕೂಡ ಜಾಗ ಇಲ್ಲದಂತೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ದೂಡಾ ಮಾಜಿ ಆಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಕೊಂಡಜ್ಜಿ ರಸ್ತೆಯ ಈ ವೃತ್ತಕ್ಕೆ ಸಿದ್ಧಗಂಗಾ ಸ್ವಾಮೀಜಿ ಹೆಸರು ಮತ್ತು ಪುತ್ಥಳಿ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು ಎಂದು ಹೇಳಿದರು.
ಚನ್ನಗಿರಿ ಹಿರೇಮಠದ ಡಾ. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಚತ್ರದುರ್ಗ ಐಮಂಗಲದ ಶ್ರೀ ಮಹಾ ಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಜಿಗರಹಳ್ಳಿ ಶ್ರೀ ಜಗದ್ಗುರು ಮರುಳಶಂಕರ ದೇವರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಬೆಂಗಳೂರು ಸರ್ವಧರ್ಮ ಸಮನ್ವಯ ಪೀಠದ ಶ್ರೀ ಸಂಗಮಾನಂದ ಸ್ವಾಮೀಜಿ ಮಾತನಾಡಿದರು.
ಶ್ರೀಮತಿ ಶಾಂತಮ್ಮ, ದೂಡಾ ಸದಸ್ಯೆ ವಾಣಿ ಬಕ್ಕೇಶ್, ಉದ್ಯಮಿ ಬಕ್ಕೇಶ್, ಗಾಂಧಿನಗರ ಪಿಎಸ್ಐ ಲಲಿತಮ್ಮ, ಬಿಜೆಪಿ ಮುಖಂಡರಾದ ಗೌತಮ್ ಜೈನ್, ಟಿಂಕರ್ ಮಂಜಣ್ಣ, ನವೀನ್, ಹೆಚ್.ಎಸ್. ವೀರೇಶ್, ಶಿವಪ್ರಸಾದ್, ಬೇಕರಿ ಶ್ರೀನಿವಾಸ್, ತೆಲಿಗಿ ಮಹೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಅಕ್ಕಮಹಾದೇವಿ ಭಜನಾ ಮಂಡಳಿಯ ಮಹಾದೇವಿ ಮತ್ತು ಸಂಗಡಿಗರು ವಚನ ಗೀತೆ, ಭಕ್ತಿಗೀತೆಗಳನ್ನು ಹಾಡಿದರು. ಪಕ್ಕೀರಗೌಡ ಹಳೆಮನಿ ನಿರೂಪಿಸಿದರು. ಶಂಕರ್ ಶಿರೇಕರ್ ಪವಾರ್ ಸ್ವಾಗತಿಸಿದರು.