ಅಲೆಮಾರಿ ಸಮುದಾಯದ ಪ್ರಗತಿಗೆ ಕ್ರಮ ವಹಿಸಿ

ಅಲೆಮಾರಿ ಸಮುದಾಯದ ಪ್ರಗತಿಗೆ ಕ್ರಮ ವಹಿಸಿ

ಅಲೆಮಾರಿ, ಅರೆ ಅಲೆಮಾರಿ ಸಾಹಿತ್ಯ, ಸಾಂಸ್ಕೃತಿಕ ಕಲೋತ್ಸವ ಕಾರ್ಯಕ್ರಮದಲ್ಲಿ ಬಸವ ರಮಾನಂದ ಶ್ರೀ ಸರ್ಕಾರಕ್ಕೆ ಒತ್ತಾಯ

ದಾವಣಗೆರೆ, ಜ.19- ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಅಲೆಮಾರಿ ಮತ್ತು ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ವಸತಿ ನಿಲಯ ಆರಂಭಿಸುವ ಜತೆಗೆ ಅಲೆಮಾರಿ ಸಮುದಾಯಗಳ ಸಮಗ್ರ ಪ್ರಗತಿಗೆ ಸರ್ಕಾರ ಕ್ರಮ ವಹಿಸಬೇಕು ಎಂದು ನೆಲಮಂಗಲದ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ (ಹಿಂದುಳಿದ ವರ್ಗಗಳ ಪ್ರವರ್ಗ–1) ಜನಾಂಗಗಳ ಒಕ್ಕೂಟದಿಂದ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ರಾಜ್ಯಮಟ್ಟದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಹಿತ್ಯ, ಸಾಂಸ್ಕೃತಿಕ ಕಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯವು ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತುಂಬಾ ಹಿಂದುಳಿದಿದೆ. ಸಮುದಾಯದ ಸಾಕ್ಷರತಾ ಪ್ರಮಾಣ ಶೇ.7ರಷ್ಟು ಮಾತ್ರ. ಕಾಯಕವನ್ನೇ ಬದುಕಿಗೆ ಆಧಾರವಾಗಿಸಿಕೊಂಡಿರುವ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಪಾರಂಪರಿಕ ಕುಲಕಸಬುಗಳು ನಶಿಸುತ್ತಿವೆ. ಅಲೆಮಾರಿ ಸಮುದಾಯಗಳು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಬಡತನ, ವಲಸೆಯ ಕಾರಣಕ್ಕೆ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗದಿದ್ದರೆ, ಮಠಕ್ಕೆ ಸೇರಿಸಬೇಕು. ನಮ್ಮ ಮಠದ ವಿದ್ಯಾಕೇಂದ್ರಗಳಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.

ಭೂರಹಿತರಿಗೆ ಭೂಮಿ, ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡಬೇಕು. ಸಮುದಾಯದ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ, ಶುದ್ಧ ನೀರು ಪೂರೈಕೆ ಸೇರಿದಂತೆ ಇನ್ನಿತರೆ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು. ಚಿತ್ರದುರ್ಗದ ಛಲವಾದಿ ಮಹಾಸಂಸ್ಥಾನದ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಪೂರ್ವಜರ ಕಲೆಗಳನ್ನು ಭಿಕ್ಷೆ ಬೇಡಲು ಬಳಸಿಕೊಳ್ಳದೇ, ಪರಂಪರೆಯಾಗಿ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಹಾವು, ಕರಡಿ, ಗಿಳಿಗಳನ್ನು ಆಡಿಸುವ ಶಕ್ತಿ, ಕೌಶಲ್ಯ ಹೊಂದಿರುವ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಜನಪ್ರತಿನಿಧಿಗಳನ್ನೂ ಆಡಿಸುವ ಶಕ್ತಿ ಇದೆ ಹಾಗಾಗಿ ಈ ಸಮುದಾಯವನ್ನು ಕಡೆಗಣಿಸಬಾರದು ಎಂದು ಎಚ್ಚರಿಕೆ ನೀಡಿದರು.

ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಜನರು ಅಂಧಕಾರ, ಮೌಢ್ಯದಿಂದ ಹೊರ ಬರಬೇಕು. ಸಮಾಜದಲ್ಲಿ ಅತ್ಯಂತ ಕಟ್ಟಕಡೆಯ ಸ್ಥಾನದಲ್ಲಿರುವ ಅಲೆಮಾರಿ ಸಮುದಾಯದವರು ಕಾಯಕವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಅಜ್ಞಾನದಿಂದ ಇಂದಿಗೂ ಕೆಲವೆಡೆ ಮೌಢ್ಯ ಆಚರಿಸುತ್ತಿದ್ದಾರೆ. ಈ ಬಗ್ಗೆ ಸಮುದಾಯದ ಸ್ವಾಮೀಜಿಗಳು ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕೆ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ನೇರವಾಗಿ ಪ್ರವೇಶ ಕಲ್ಪಿಸಬೇಕು. ಪ್ರತಿಯೊಂದು ವಸತಿ ನಿಲಯದಲ್ಲೂ ಶೇ.5 ರಷ್ಟು ಸೀಟುಗಳನ್ನು ಈ ಸಮುದಾಯದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು  ತಿಳಿಸಿದರು.

ಬೀದರ್‌ನ ಹೆಳವ ಸಮಾಜದ ಮುಕ್ತಿನಾಥ, ಜನಕಲ್ಯಾಣ ಟ್ರಸ್ಟ್‌ ಗುರುಪೀಠದ ಶಂಕರಲಿಂಗ ಸ್ವಾಮೀಜಿ ಮಾತನಾಡಿದರು.

ಈ ವೇಳೆ ಮಾಜಿ ಶಾಸಕ ಹೆಚ್‌.ಎಸ್‌. ಶಿವಶಂಕರ್‌, ಒಕ್ಕೂಟದ ಗೌರವಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಅಧ್ಯಕ್ಷ ಎಂ. ಪ್ರಕಾಶ್, ಉಪಾಧ್ಯಕ್ಷ ಬಿ.ಕೆ. ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಕುಮಾರ ಜೋಗಿ, ಮಹಿಳಾ ಘಟಕದ ಅಧ್ಯಕ್ಷೆ ಎಂ.ವಿ ರಾಜೇಶ್ವರಿ, ಯುವ ಘಟಕದ ಅಧ್ಯಕ್ಷ ವೈ. ಕುಮಾರ,  ಜಿಲ್ಲಾ ಘಟಕದ ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಗೋಂದಳಿ ಐಕ್ಯತಾ ವೇದಿಕೆ ಸಂಸ್ಥಾಪಕ ವೀರೇಶ್‌ ರಾವ್ ಪಾಚಂಗೆ, ವಿವಿಧ ಜಿಲ್ಲಾ ಘಟಕಗಳ ಪದಾಧಿಕಾರಿಗಳು ಇದ್ದರು.

error: Content is protected !!