`ಚಿರಂತನ ಉತ್ಸವ’ದಲ್ಲಿ ಖ್ಯಾತ ವೀಣಾವಾದಕಿ ರೇವತಿ ಕಾಮತ್ ಪ್ರತಿಪಾದನೆ
ದಾವಣಗೆರೆ, ಜ. 19- ನೃತ್ಯ, ಸಂಗೀತ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳು ಶಾಲಾ ಕಲಿಕೆಗೆ ಪೂರಕವೇ ಹೊರತು, ಮಾರಕವಲ್ಲ ಎಂದು ಖ್ಯಾತ ವೀಣಾ ವಾದಕಿ, ಕರ್ನಾಟಕ ಕಲಾಶ್ರೀ ರೇವತಿ ಕಾಮತ್ ಪ್ರತಿಪಾದಿಸಿದರು.
ಚಿರಂತನ ಅಕಾಡೆಮಿ ವತಿಯಿಂದ ನಗರದ ಶಿವಯೋಗಿ ಮಂದಿರದ ಆವರಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ `ಚಿರಂತನ ಉತ್ಸವ’ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳನ್ನು ಸಂಗೀತ ಅಥವಾ ನೃತ್ಯ ಶಾಲೆಗಳಿಗೆ ಕಳುಹಿಸಿದರೆ, ನಿತ್ಯದ ವಿದ್ಯಾಭ್ಯಾಸಕ್ಕೆ, ಅಂಕ ಗಳಿಕೆಗೆ ತೊಂದರೆಯಾಗುತ್ತದೆ ಎಂದು ಪೋಷಕರು ಭಾವಿಸುತ್ತಾರೆ. ಇದು ತಪ್ಪು. ಯಾವ ಕಾರಣಕ್ಕೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಮಕ್ಕಳು ಹಿನ್ನಡೆ ಅನುಭವಿಸುವುದಿಲ್ಲ ಎಂದು ಹೇಳಿದರು.
ಮಕ್ಕಳನ್ನು ಶಾಲೆಗೆ ಕಳುಹಿಸುವ ಜೊತೆಗೆ ಒಂದಿಷ್ಟು ವೇಳೆ ನೃತ್ಯ ಅಥವಾ ಸಂಗೀತ ಕಲಿಸಲೂ ಸಹ ಸಮಯ ಮೀಸಲಿಡಿ. ಇದು ಕಲಿಕಾಸಕ್ತಿಯನ್ನೂ ಹೆಚ್ಚಿಸುತ್ತದೆ. ಭವಿಷ್ಯದಲ್ಲಿ ಮಕ್ಕಳು ಒತ್ತಡಕ್ಕೆ ಒಳಗಾಗುವುದು ತಪ್ಪುತ್ತದೆ. ಅಲ್ಲದೇ ಏಕಾಂತ ಕಾಡುವುದಿಲ್ಲ ಎಂದರು.
ಚಿರಂತನ ಸಂಸ್ಥೆ ಕೇವಲ ನೃತ್ಯ, ಸಂಗೀತ ಶಾಲೆ ಯಾಗಿ ಉಳಿಯದೆ, ಕಲಾ ಕೇಂದ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಂಸ್ಥೆಗೆ ಸ್ಥಳೀಯರು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಸಂಗೀತ ನೀಡುವ ತೃಪ್ತಿ ಹಣದಿಂದ ಸಿಗದು : ಪಿ.ಶೇಷಾದ್ರಿ
ಸಂಗೀತ ನೀಡುವ ಸಂತೋಷ, ತೃಪ್ತಿಯನ್ನು ಹಣ ನೀಡುವುದಿಲ್ಲ ಎಂದು ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.
`ಚಿರಂತನ ಉತ್ಸವ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಗೀತ ಶುದ್ಧವಾದ ಕಲೆ. ಆ ಕಲೆಯನ್ನು ಮಕ್ಕಳಲ್ಲಿ ರಕ್ತಗತವಾಗಿಸಬೇಕು ಎಂದು ಹೇಳಿದರು.
ಕಲೆಯು ಶಾಂತಿ, ನೆಮ್ಮದಿ, ಅನುಭೂತಿ, ಆನಂದವನ್ನು ನೀಡುತ್ತದೆ. ಮಕ್ಕಳನ್ನು ಸಿನಿಮಾ, ಧಾರಾವಾಹಿಗೆ ಪ್ರೋತ್ಸಾಹಿಸಿದಂತೆ ನೃತ್ಯಕಲೆಗೂ ಪ್ರೋತ್ಸಾಹಿಸುವಂತೆ ಕರೆ ನೀಡಿದರು.
ದಾವಣಗೆರೆಗೂ ಸಿನಿಮಾ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ. ಎಲ್ಲ ಶುಭ ಕಾರ್ಯಕ್ಕೂ ದಾವಣಗೆರೆಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಇಲ್ಲಿ ಪ್ರತಿಭಾವಂತ ಕಲಾವಿದರಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಪ್ರತಿಯೊಬ್ಬರು ಜೀವನದಲ್ಲಿ ಒಂದಾದರೂ ಮರ ಬೆಳೆಸಬೇಕು. ನಗರದಲ್ಲಿ ಸ್ಥಳೀಯ ಜಾತಿ ಸಸಿಗಳನ್ನು ಬಿಟ್ಟು, ವಿದೇಶಿ ಸಸಿಗಳನ್ನು ನೆಡಲು ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಿರಂತನ ಸಂಸ್ಥಾಪಕ ಅಧ್ಯಕ್ಷೆ ದೀಪಾ ಎನ್.ರಾವ್, ಕಲೆ, ಸಂಸ್ಕೃತಿ, ಸಂಸ್ಕಾರ, ಪರಂಪರೆ ಉಳಿದರೆ ಆ ಜಾಗ, ನಗರ ಹಾಗೂ ದೇಶ ಉದ್ಧಾರವಾಗುತ್ತದೆ ಎಂದರು.
ಚಿರಂತನ ಸಂಸ್ಥೆ ಕೇವಲ ಚಿಕ್ಕ ಸಂಸ್ಥೆಯಾಗಿ ಉಳಿಯದೆ ವಿಶ್ವ ಮಟ್ಟದಲ್ಲಿ ಬೆಳೆಸುವ, ಅಂತರ್ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಸ್ಥೆಯನ್ನಾಗಿಸುವ ಅಭಿಲಾಷೆ ಇದೆ ಎಂದರು.
ದಾವಣಗೆರೆಯಲ್ಲಿ ಸುಸಜ್ಜಿತ ರಂಗ ಮಂದಿರದ ಕೊರತೆ ಇದೆ. ಧ್ವನಿ, ಬೆಳಕು, ಅತ್ಯುನ್ನತ ಸಲಕರಣೆಗಳನ್ನು ಹೊಂದುವ ಸುಸಜ್ಜಿತ ರಂಗ ಮಂದಿರ ನಿರ್ಮಾಣ ಮಾಡುವುದು ನಮ್ಮ ಕನಸಾಗಿದ್ದು, ಸ್ಥಳೀಯರ ಪ್ರೋತ್ಸಾಹ ಬೇಕಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಮಾಧವ ಪದಕಿ ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಚಲವಾದಿ, ಸಹಾಯಕ ನಿರ್ದೇಶಕ ರವಿಚಂದ್ರ,
ಸಂಸ್ಥೆಯ ಸಲಹೆಗಾರರಾದ ಬಿ.ಟಿ. ಅಚ್ಯುತ್, ಲತಿಕಾ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು. ಸುರೇಂದ್ರ ಮತ್ತು ತಂಡದವರು ವಾದ್ಯ ಸಂಗೀತ, ಕು.ಶರಣ್ಯ ಮತ್ತು ತಂಡದವರು ಕರ್ನಾಟಕದ ಹಿರಿಮೆ-ಗರಿಮೆ ಸಾರುವ ನೃತ್ಯ ಪುಂಜ, ವಿದುಷಿ ರಕ್ಷಾ ರಾಜಶೇಖರ್ ನಾಟ್ಯ ವಿಲಾಸ ಹಾಗೂ ಡಾ.ಸಂಜೀವ್ ಶಾಂತಾರಾಮ್ ಮತ್ತು ತಂಡದವರು ಶಿವತಾಂಡವ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.