ಹೋರ್ಡಿಂಗ್ಸ್‌ಗೆ ಅನುಮತಿ ಅಧಿಕಾರ ಪಿಡಬ್ಲೂಡಿಗೆ ಇಲ್ಲ

ಹೋರ್ಡಿಂಗ್ಸ್‌ಗೆ ಅನುಮತಿ ಅಧಿಕಾರ ಪಿಡಬ್ಲೂಡಿಗೆ ಇಲ್ಲ

ದಾವಣಗೆರೆ, ಜ.21- ಹೋರ್ಡಿಂಗ್ಸ್ ಅಳವಡಿಸಲು ಅನುಮತಿ ನೀಡುವ ಅಧಿಕಾರ ಲೋಕೋಪಯೋಗಿ ಇಲಾಖೆಗೆ ಇಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ರಾಜ್ಯ ಹೆದ್ದಾರಿ ಅಥವಾ ರಾಷ್ಟ್ರೀಯ ಹೆದ್ದಾರಿಗಳೇ ಆಗಲಿ, ಹೋರ್ಡಿಂಗ್ಸ್ ಅಳವಡಿಕೆಯಿಂದ ಅಪಘಾತಗಳಾಗುವುದಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಎನ್‌ಒಸಿ ಕೊಡಲು ಮಾತ್ರ  ಪಿಡಬ್ಲೂಡಿಗೆ ಅಧಿಕಾರವಿದೆ. ಎನ್‌ಓಸಿ ಪಡೆದು ಗ್ರಾಮ ಪಂಚಾಯ್ತಿ, ಮಹಾನಗರ  ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಮಾತ್ರ ಹೋರ್ಡಿಂಗ್ಸ್ ಅಳವಡಿಸಲು ಅನುಮತಿ ನೀಡಬಹುದಾಗಿದೆ ಎಂದರು. ರಸ್ತೆಗಳಲ್ಲಿ ಹಂಪ್ಸ್‌ಗಳ ಅಳವಡಿಕೆಗೂ ಪರವಾನಗಿ ಪಡೆಯಬೇಕು. ಅವೈಜ್ಞಾನಿಕ ಹಂಪ್ಸ್‌ಗಳಿಂದಲೂ  ಅಪಘಾತಗಳು ಹೆಚ್ಚುತ್ತಿವೆ ಎಂದು ಹೇಳಿದರು.

ಪದೇ ಪದೇ ಅಪಘಾತವಾಗುವ ಸ್ಥಳಗಳನ್ನು ಗುರುತಿಸಿ, ಅಪಘಾತ ತಡೆಗೆ ಮುಂದಾಗಬೇಕಿದೆ. ಅಪಘಾತಗಳನ್ನು ತಪ್ಪಿಸುವುದು ಪುಣ್ಯದ ಕೆಲಸವಾಗಿದ್ದು, ಎಲ್ಲಾ ಇಲಾಖೆಯವರೂ ಕೈ ಜೋಡಿಸಬೇಕು ಎಂದ ಜಿಲ್ಲಾಧಿಕಾರಿ,  ಮುಂದಿನ ಸಭೆಗೆ ಲಾರಿ ಮಾಲೀಕರು, ಆಟೋ ಮಾಲೀಕರು ಸೇರಿದಂತೆ ಸಂಘಟನೆಗಳನ್ನೂ ಸೇರಿಸಿಕೊಳ್ಳಬೇಕಿದೆ. ಅಪಘಾತಗಳ ತಡೆಗೆ ಅವರ ಸಹಕಾರವೂ ಮುಖ್ಯ ಎಂದರು. 2022 ರಲ್ಲಿ ರಸ್ತೆ ಅಪಘಾತದಲ್ಲಿ 308, 2023 ರಲ್ಲಿ 293 ಮತ್ತು 2024 ರಲ್ಲಿ 283 ಮರಣಗಳು ಸಂಭವಿಸಿದ್ದು ಕಳೆದ ಮೂರು ವರ್ಷಗಳಲ್ಲಿ ಸರಾಸರಿ 57 ಅಪಘಾತ ಪ್ರಮಾಣ ಕಡಿಮೆಯಾಗಿವೆ. ಆದರೂ ಸಹ ಅಪಘಾತ ಪ್ರಮಾಣವನ್ನು ತೀವ್ರವಾಗಿ ತಗ್ಗಿಸಲು ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಸಭೆಯನ್ನು ಕರೆದು ಪರಿಶೀಲನೆ ನಡೆಸಲಾಗುತ್ತದೆ ಎಂದರು. 

ಜಿಲ್ಲೆಯಲ್ಲಿ ಈಗಾಗಲೇ ಅಪಘಾತ ವಲಯಗಳನ್ನು ಗುರುತಿಸಲಾಗಿದ್ದು ಒಂದೇ ಸ್ಥಳದಲ್ಲಿ ಹೆಚ್ಚು ಅಪಘಾತವಾಗಿರುವ ಸ್ಥಳಗಳನ್ನು ಗುರುತಿಸಿ ಅಲ್ಲಿ ರಸ್ತೆ ಅಭಿವೃದ್ದಿ, ವೇಗ ನಿಯಂತ್ರಕ, ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ ಎಂದರು.

ಇದೇ ವೇಳೆ ನಗರ ಸಾರಿಗೆ ಬಸ್‌ ಹಾಗೂ ಹರಿಹರ-ದಾವಣಗೆರೆ ಮಾರ್ಗದ ಬಸ್‌ಗಳು ಸಿಗ್ನಲ್‌ ಗಳ ಬಳಿಯೇ ಪ್ರಯಾಣಿಕರನ್ನು ಇಳಿಸುತ್ತವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಟೋ ಚಾಲಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಸಂಚಾರಿ ಪೊಲೀಸರು, ನಗರ ಸಾರಿಗೆ ಬಸ್‌ಗಳು ಬಾಗಿಲುಗಳೇ ಮುಚ್ಚಿರುವುದಿಲ್ಲ ಎಂದರು.

ಸಾಮಾಜಿಕ ಸೇವಾ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಮಾತನಾಡಿ, ಸಂಚಾರ ನಿರ್ವಹಣೆಗೆ ಮತ್ತೊಂದು ಲಯನ್ ವಾಹನದ ಅಗತ್ಯವಿದೆ ಎಂದರು.  ಪಿಡಬ್ಲೂಡಿ ರಸ್ತೆಗಳು ಇದುವರೆಗೂ ಮಹಾನಗರ ಪಾಲಿಕೆಗೆ  ಹಸ್ತಾಂತರವಾಗಿಲ್ಲ ಎಂದು ಸಭೆ ಗಮನಕ್ಕೆ ತಂದರು.

ನಗರದ ಹಲವೆಡೆ ಹಲವೆಡೆ ಬೀದಿ ದೀಪಗಳಿಲ್ಲ. ಎಲ್ಲೆಲ್ಲಿ ಬೀದಿ ದೀಪ ಅಗತ್ಯವಿದೆ ಎಂಬ  ಪಟ್ಟಿ ಸಹಿತ   ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದ್ದರೂ ಕ್ರಮ ಕೈಗೊಂಡಿಲ್ಲ  ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.

ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!