ದಾವಣಗೆರೆ ನಗರ ಕರ್ನಾಟಕ ರಾಜ್ಯದ ಧಾರ್ಮಿಕ ಕ್ಷೇತ್ರದ ಕೇಂದ್ರ ಬಿಂದು. ಇಂತಹ ನಗರದಲ್ಲಿ ಸನ್ 1973ನೇ ಇಸ್ವಿಯಲ್ಲಿ ಹೈಸ್ಕೂಲ್ ಮೈದಾನದಲ್ಲಿ ಇದ್ದಂತಹ ಮಹಾಕೂಟೇಶ್ವರ ಡ್ರಾಮಾ ಕಂಪನಿಯಲ್ಲಿ ಪ್ರತಿ ದಿನ ಸಂಜೆ 7 ರಿಂದ 9 ರವರೆಗೆ ಪುರಾಣ ಪ್ರವಚನ ಕಾರ್ಯಕ್ರಮ ನಡೆಯುತ್ತಿತ್ತು. ಪುರಾಣ ಪ್ರವಚನ ಕಾರ್ಯಕ್ರಮವನ್ನು ಪುರಾಣಿಕ ಮಠದ ವೀರಬಸಯ್ಯನವರು ಮತ್ತು ಜಾಲಿಮರದ ಸಂಗಪ್ಪನವರು ನಡೆಸಿಕೊಡುತ್ತಿದ್ದರು.
ಪ್ರಥಮ ಬಾರಿಗೆ ಪುರಾಣ ಪ್ರವಚನವನ್ನು ವೇ|| ರೇವಣಸಿದ್ಧಯ್ಯ ಶಾಸ್ತ್ರಿಗಳು ನಡೆಸುತ್ತಿದ್ದರು. ಈಗ ವಿನೋಬನಗರದ 1ನೇ ಮುಖ್ಯರಸ್ತೆ, ಶಂಭುಲಿಂಗನ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಒಂದು ದಿವಸ ವೀರಬಸಯ್ಯನವರು ನಾಳೆ ಈ ಕಾರ್ಯಕ್ರಮಕ್ಕೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳವರು ದಯಮಾಡಿಸುತ್ತಾರೆ. ಅವರಿಗೆ ಎರಡೂ ಕಣ್ಣುಗಳು ಕಾಣಿಸುವುದಿಲ್ಲ. ಆದರೂ ತಬಲಾ, ಹಾರ್ಮೋನಿಯಂ, ವೀಣೆ ಎಲ್ಲವನ್ನೂ ನುಡಿಸುತ್ತಾರೆ ಎಂದು ತಿಳಿಸಿದರು. ಅಂದ ಹಾಗೆ ಮಾರನೇ ದಿನ ಅವರ ದರ್ಶನಕ್ಕಾಗಿ ಭಕ್ತರು ಸಮುದ್ರೋಪಾದಿಯಲ್ಲಿ ನಾಟಕದ ಥಿಯೇಟರ್ ತುಂಬಾ ಸೇರಿದ್ದರು. ಅದರಲ್ಲಿ ನಾನೂ ಒಬ್ಬ ಭಕ್ತ. ಪುಟ್ಟರಾಜರು ದಯಮಾಡಿಸಿದರು. ಪುರಾಣ ಪ್ರವಚನದ ನಂತರ ಗುರುಗಳು ಆಶೀರ್ವಚನ ಪ್ರಾರಂಭಿಸಿದರು. ಪ್ರಾರಂಭದಲ್ಲಿ ಏನು ಇದು? ಎಷ್ಟು ಜನ ಸೇರಿದ್ದೀರಿ? ಥಿಯೇಟರಿನ ಬಲಭಾಗದಲ್ಲಿ ಭಾರೀ ಜನಸ್ತೋಮ ಇದೆ ಎಂದು ಹೇಳಿದರು. ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವಾಯಿತು. ಏನಿದು? ಕಣ್ಣು ಕಾಣುವುದಿಲ್ಲ ಎಂದು ತಿಳಿಸಿದ್ದರು ಆದರೆ ಜನಸ್ತೋಮ ಇರುವುದು ಹೇಗೆ ಗೊತ್ತಾಯಿತು. ಇವರು ಸಾಮಾನ್ಯರಲ್ಲ ಇವರು ಒಬ್ಬ ದೊಡ್ಡ ಯೋಗಿಗಳು ಎಂದು ಭಕ್ತರು ತೀರ್ಮಾನಿಸಿದರು.
ತದನಂತರ ಡ್ರಾಮಾ ಕಂಪನಿ ಮಾಲೀಕರಾದ ಯಲ್ಲಪ್ಪ ಮತ್ತು ಶಂಕರಯ್ಯನವರು ಕಾರಣಾಂತರದಿಂದ ಇಬ್ಭಾಗವಾದರು. ಆಗ ಶಂಕರಯ್ಯನವರು ನಗರದ ಹಳೇ ಭಾಗದಲ್ಲಿರುವ ದೊಗ್ಗಳ್ಳಿ ಕೊಟ್ರಪ್ಪನವರ ಕಾಂಪೌಂಡಿನಲ್ಲಿ ಬನಶಂಕರಿ ಡ್ರಾಮಾ ಕಂಪನಿ ಎಂಬ ಹೆಸರಿನ ನಾಟಕದ ಕಂಪನಿ ಪ್ರಾರಂಭಿಸಿದರು.
ಈ ಡ್ರಾಮಾ ಕಂಪನಿಯಲ್ಲಿ ಪುಟ್ಟರಾಜರು ಪುರಾಣ ಪ್ರವಚನ ಕಾರ್ಯಕ್ರಮ ನಡೆಸುತ್ತಿದ್ದರು. 1975-76ನೇ ಇಸ್ವಿಯಲ್ಲಿ ಪುಟ್ಟರಾಜ ಗುರುಗಳು ಸ್ವತಃ ತಾವೇ ಬರೆದಂತಹ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮವನ್ನು 3 ತಿಂಗಳ ಪರ್ಯಂತರ ನಡೆಸಿಕೊಟ್ಟರು. ಕಾರ್ಯಕ್ರಮದ ಮಂಗಳ ಕಾರ್ಯಕ್ರಮ ಎರಡು ದಿನ ನಡೆಯಿತು. ಮೊದಲನೇ ದಿನದ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಚಿತ್ರದುರ್ಗದ ಬೃಹನ್ಮಠದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ನಡೆಸಿಕೊಟ್ಟರು. ಎರಡನೇ ದಿನದ ಕಾರ್ಯಕ್ರಮವನ್ನು ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು ದಿವ್ಯ ಸಾನ್ನಿಧ್ಯವನ್ನು ವಹಿಸಿ ನಡೆಸಿಕೊಟ್ಟರು. ಇದೇ ಕಾರ್ಯಕ್ರಮದಲ್ಲಿ ಭಕ್ತರಿಂದ ಬಂದ ಕಾಣಿಕೆ ಅಂದಾಜು 65 ಸಾವಿರ ರೂ.ಗಳಾಗಿದ್ದವು. ಆಗ ಪುಟ್ಟರಾಜ ಗುರುಗಳಿಗೆ ಸಂಚಾರಕ್ಕೆ ಒಂದು ಹೊಸ ವಾಹನವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅಜ್ಜನವರಿಗೆ ಭಕ್ತಿಯಿಂದ ಅರ್ಪಿಸಿದರು. 1978ರಲ್ಲಿ ಅಜ್ಜನವರು ರೇಣುಕ ಮಂದಿರದಲ್ಲಿ ಸಂಜೆ ಶಿವಾನುಭವಗೋಷ್ಠಿಯನ್ನು ನಡೆಸುತ್ತಿದ್ದರು. ರೇಣುಕ ಮಂದಿರದಲ್ಲಿ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಸಾನ್ನಿಧ್ಯವನ್ನು ರಂಭಾಪುರಿ ಪೀಠದ 119ನೇ ಜಗದ್ಗುರುಗಳಾದ ಜಗದ್ಗುರು ವೀರಗಂಗಾಧರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದರು. ಪುಟ್ಟರಾಜ ಗುರುಗಳು ಉಪಸ್ಥಿತರಿದ್ದರು.
ಜಗದ್ಗುರು ವೀರಗಂಗಾಧರ ಶಿವಾಚಾರ್ಯರು ತಮ್ಮ ಆಶೀರ್ವಚನದಲ್ಲಿ ನಾನು ಜಗತ್ತಿನಲ್ಲಿ ಎಲ್ಲರಿಗೂ ಆಶೀರ್ವಾದವನ್ನು ದಯಪಾಲಿಸುತ್ತೇನೆ. ಆದರೆ ಪುಟ್ಟರಾಜ ಗುರುಗಳಿಗೆ ಆಶೀರ್ವಾದವನ್ನು ದಯಪಾಲಿಸುವುದಿಲ್ಲವೆಂದು ತಿಳಿಸಿದರು. ಕಾರಣ ಪುಟ್ಟರಾಜ ಗುರುಗಳು ಸಾಕ್ಷಾತ್ ಶಿವನಿಂದ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆಂದು ತಿಳಿಸಿದರು. ಪುಟ್ಟರಾಜ ಗುರುಗಳು ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಉದಾಹರಣೆ ಒಬ್ಬ ಭಕ್ತರ ಮನೆಯಲ್ಲಿ ಪೂಜೆಗೆ ಕುಳಿತಾಗ ಒಂದು ದೀಪದ ಎಣ್ಣೆ ಕಡಿಮೆಯಾಗಿ ದೀಪ ಸಣ್ಣದಾಗಿ ಉರಿಯುತ್ತಿತ್ತು. ಆಗ ಅಜ್ಜನವರು ಆ ದೀಪದಲ್ಲಿ ಎಣ್ಣೆ ಇಲ್ಲ, ಆ ದೀಪಕ್ಕೆ ಎಣ್ಣೆಯನ್ನು ಹಾಕಿರಿ ಎಂದಾಗ ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವಾಯಿತು.
ಒಂದು ಸಲ ಅಜ್ಜನವರು ದಾವಣಗೆರೆಯಲ್ಲಿ ಪುರಾಣ ಕಾರ್ಯಕ್ರಮವನ್ನು ಮುಗಿಸಿಕೊಂಡು ಯಡಿಯೂರಿಗೆ ಹೋಗುವ ಸಂದರ್ಭದಲ್ಲಿ ರಾತ್ರಿ ವೇಳೆ ವಾಹನದಲ್ಲಿ ಡೀಸೆಲ್ ಖಾಲಿಯಾಗಿ ವಾಹನ ನಿಂತಿತು. ಆಗ ಅಜ್ಜನವರು ಡ್ರೈವರ್ಗೆ ಯಾಕಪ್ಪ
ಎಂದು ಕೇಳಿದಾಗ, ಅಜ್ಜನವರೇ ಗಾಡಿಯಲ್ಲಿ ಡೀಸೆಲ್ ಖಾಲಿಯಾಗಿದೆ ಎಂದು ಹೇಳಿದರು. ಸಿದ್ಧಲಿಂಗೇಶ್ವರ ನೋಡಿಕೊಳ್ಳುತ್ತಾನೆ ಎಂದು ತಿಳಿಸಿದರು. ಅದರಂತೆ ರಾತ್ರಿ ವೇಳೆಯಲ್ಲಿ ಒಬ್ಬ ಮನುಷ್ಯ ಬೈಕ್ನಲ್ಲಿ ಡೀಸೆಲ್ ಅನ್ನು ಒಂದು ಡಬ್ಬದಲ್ಲಿ ತಂದು ಡ್ರೈವರ್ಗೆ ಏನಾಗಿದೆ? ಯಾಕೆ ಹೀಗೆ ನಿಂತಿದ್ದೀರಿ ಎಂದು ಕೇಳಿದರು. ಡೀಸೆಲ್ ಖಾಲಿಯಾಗಿದೆ ಎಂದು ತಿಳಿಸಿದರು. ಆಗ ಆ ಮನುಷ್ಯ ಡೀಸೆಲ್ ಡಬ್ಬಿಯನ್ನು ತಂದು ಕೊಟ್ಟು ಇದನ್ನು ತೆಗೆದುಕೊಳ್ಳಿರಿ ಎಂದು ಹೇಳಿದರು.
ಡೀಸೆಲ್ ಅನ್ನು ಗಾಡಿಗೆ ಹಾಕಿ ತಿರುಗಿ ನೋಡಿದಾಗ ಆ ಮನುಷ್ಯ ಕಾಣಲಿಲ್ಲ. ಆಗ ಅಜ್ಜನವರು ಎಲ್ಲದೂ ಸಿದ್ಧಲಿಂಗೇಶ್ವರನ ಪವಾಡ ಎಂದು ತಿಳಿಸಿದರು.
ಮತ್ತೊಂದು ಪವಾಡ ಏನೆಂದರೆ ಮುರಿಗೆಮ್ಮ ಎಂಬ ಹೆಣ್ಣುಮಗಳು ಅಜ್ಜನವರ ಬಳಿ ಬಂದು ನನಗೆ ಜನಿಸಿದ ಮಕ್ಕಳು ಇದ್ದಕ್ಕಿದ್ದ ಹಾಗೆ ನಿಧನವಾಗುವುವು ಅದಕ್ಕೆ ಪರಿಹಾರ ತಿಳಿಸಿರಿ ಎಂದಾಗ, ಅಜ್ಜನವರು ಐದು ಗುರುವಾರ ಯಡಿಯೂರು ಸಿದ್ಧಲಿಂಗೇಶ್ವರರ ಹೆಸರಿಗೆ ನಂದಾ ದೀಪವನ್ನು ಹಚ್ಚಿರಿ ಎಂದು ತಿಳಿಸಿದರು. ಅದೇ ಪ್ರಕಾರ ಮಾಡಿದಾಗ ಆ ಹೆಣ್ಣು ಮಗಳಿಗೆ ಇಬ್ಬರು ಮಕ್ಕಳಾದರು.
ಸಾವಿರಾರು ಅಂಧ, ಅನಾಥ ಮಕ್ಕಳಿಗೆ ಸಕಲ ಸಂಗೀತ ವಿದ್ಯೆಯನ್ನು ಧಾರೆಯೆರೆದು ಅವರಿಗೆಲ್ಲಾ ಅನ್ನಕ್ಕೆ ದಾರಿ ಮಾಡಿಕೊಟ್ಟಂತಹ ಪುಟ್ಟರಾಜ ಗುರುಗಳು ಸಾಕ್ಷಾತ್ ಅನ್ನಪೂರ್ಣೇಶ್ವರಿಯ ವರಪುತ್ರರು ಎಂದರೆ ತಪ್ಪಾಗಲಾರದು. ಬಾಡಾ ಕ್ರಾಸ್ನಲ್ಲಿ ವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸಿರುತ್ತಾರೆ. ಪ್ರಸ್ತುತ ಈ ಆಶ್ರಮವನ್ನು ಪೂಜ್ಯ ಕಲ್ಲಯ್ಯಜ್ಜನವರು ನಡೆಸಿಕೊಂಡು ಬರುತ್ತಿದ್ದಾರೆ.
ಪುಟ್ಟರಾಜ ಗುರುಗಳ ಪುರಾಣ ಪ್ರವಚನ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡು ನಡೆಸಿರುತ್ತಾರೆ. ಉದಾ. ಆರ್.ಜಿ. ಗೌರಿಶಂಕರ್, ಧನ್ನೂರ್ ವೀರಸಂಗಯ್ಯ, ನಿಜಲಿಂಗಪ್ಪ ಕಡೇಕೊಪ್ಪ, ಎ.ಹೆಚ್. ತಿಪ್ಪಯ್ಯ ಸ್ವಾಮಿ, ಗೋಪಾಲಪುರದ ವೀರಭದ್ರಪ್ಪ, ಸೋಮಣ್ಣ, ಅಜ್ಜಂಪುರ ಶೆಟ್ರು ಸುಶೀಲಮ್ಮ ಇನ್ನೂ ಮುಂತಾದವರು ಕಾರ್ಯಕ್ರಮ ನಡೆಸಿಕೊಟ್ಟಿರುತ್ತಾರೆ.
ಪ್ರಸ್ತುತ ಪುರಾಣವು ದೊಗ್ಗಳ್ಳಿ ಕೊಟ್ರಪ್ಪನವರ ಕಾಂಪೌಂಡಿನಿಂದ ಚೌಕಿಪೇಟೆಯಲ್ಲಿರುವ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈಗಾಗಲೇ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುತ್ತದೆ. ಸುಶೀಲಮ್ಮನವರ ನಂತರ ಅವರ ಪುತ್ರರಾದ ಎ.ಎಸ್. ಮೃತ್ಯುಂಜಯ (ಅಜ್ಜಂಪುರ ಮುತ್ತಣ್ಣ) ಇವರ ಸಾರಥ್ಯದಲ್ಲಿ ಪುರಾಣ ಕಾರ್ಯಕ್ರಮವು ನಡೆದುಕೊಂಡು ಬಂದಿರುತ್ತದೆ. ಈ ಕಾರ್ಯಕ್ರಮಕ್ಕೆ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿ ಸೇವಾ ಸಂಘದವರು ಮತ್ತು ಶ್ರೀ ಮುರುಘರಾಜೇಂದ್ರ ಸೇವಾ ಸಂಘದವರು ಸಹಕಾರ ನೀಡುತ್ತಾ ಬಂದಿರುತ್ತಾರೆ.
ಪುಟ್ಟರಾಜ ಗುರುಗಳವರ ಪುರಾಣ ಪ್ರವಚನವು 1973ನೇ ಇಸ್ವಿಯಿಂದ ಪ್ರಾರಂಭವಾಗಿ 2024ನೇ ಇಸ್ವಿಗೆ 51 ವರ್ಷಗಳಾದವು. 51 ನೇ ವರ್ಷದ ಪುರಾಣ ಮಹಾದಾಸೋಹಿ ಕಲ್ಬುರ್ಗಿ ಶರಣ ಬಸವೇಶ್ವರರ ಪುರಾಣ ಕಾರ್ಯಕ್ರಮ ನಡೆಯುತ್ತಿದೆ. ಪುಟ್ಟರಾಜ ಗುರುಗಳಿಗೆ ಭಕ್ತರು ಸಾವಿರಾರು ತುಲಾಭಾರದ ಸೇವೆಯನ್ನು ಅರ್ಪಿಸಿ, ಅವರ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ. ಪೂಜ್ಯ ಕಲ್ಲಯ್ಯಜ್ಜನವರಿಗೂ ಕೂಡ ತುಲಾಭಾರದ ಸೇವೆಯನ್ನು ಭಕ್ತರು ಸಮರ್ಪಿಸಿ, ಅವರ ಆಶೀರ್ವಾದಕ್ಕೂ ಪಾತ್ರರಾಗಿದ್ದಾರೆ. 51 ವರ್ಷಗಳ ಪರ್ಯಂತರವಾಗಿ ಪುರಾಣ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಸದ್ಭಕ್ತರಿಗೂ, ದಾನಿಗಳಿಗೂ ಧನ್ಯವಾದಗಳು.
– ಎಲ್.ಎಂ.ಆರ್. ಬಸವರಾಜಯ್ಯ, ದಾವಣಗೆರೆ.