ಕರ್ನಾಟಕ ಸಂಸ್ಕೃತಿಯ ತವರೂರು, ಕಲೆಗಳ ನೆಲೆವೀಡು, ಕವಿಗಳ ನಾಡು, ಮಠಗಳ ಬೀಡು, ವಿವಿಧತೆಯಲ್ಲಿ ಏಕತೆಯನ್ನು ರೂಢಿಸಿಕೊಂಡಿರುವ ಶ್ರೇಷ್ಠ ನಾಡು, ವೈಚಾರಿಕ ಪ್ರಜ್ಞೆಯೊಂದಿಗೆ ತಾತ್ವಿಕ ತಳಹದಿ ಹಾಕಿಕೊಟ್ಟ ಶರಣರು, ಸಂತರು, ದಾಸರು ಮತ್ತು ದಾರ್ಶನಿಕರಿಂದ ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ವಿವೇಕ, ಸಾಮ್ಯತೆ ಮುಂತಾದ ಮೌಲ್ಯಗಳು ನೆಲೆಸಿದ್ದು ಕನ್ನಡಿಗರ ಸಾಂಸ್ಕೃತಿಕ ಪ್ರಜ್ಞೆಗೆ ಕಳಶವಿಟ್ಟಂತಿವೆ. 12ನೇ ಶತಮಾನ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಹಲವಾರು ಶಿವಶರಣರು ಅವಿರತ ಶ್ರಮಿಸಿ, ಸಮಾನತೆಯ ಸಮಾಜ ನಿರ್ಮಿಸಿದ ಪರ್ವಕಾಲ.
ಕರ್ನಾಟಕದಲ್ಲಿ 12ನೇ ಶತಮಾನ ತುಂಬಾ ಪ್ರಮುಖ ವಾದದ್ದು. ಮನುಕುಲೋದ್ಧಾರದ ಹೊಂಗಿರಣವಾಗಿ ಸರಳತೆ, ಸುಲಲಿತ, ಸುಮಾಧುರ್ಯತೆಯ ಕಂಪನ್ನು ಸೂಸಿದ ವಿಶಿಷ್ಟ ಕಾಲಘಟ್ಟವಿದು. ಜಗದಣ್ಣ ಬಸವಣ್ಣನವರು ವಿಶ್ವ ಕಲ್ಯಾಣದ ಮಹಾಸಾಧನೆಯನ್ನು ಅನುಭವ ಮಂಟಪದಡಿಯಲ್ಲಿ ಸ್ಥಾಪಿಸಿ, ಸಾಮಾಜಿಕ ಕಳಕಳಿಯಿಂದ ಜೀವನವನ್ನು ವಿಭಿನ್ನ ದೃಷ್ಟಿಯಿಂದ ಗ್ರಹಿಸಿದರು. ಅಣ್ಣನ ಬೆಂಬಲಿಗರಾಗಿ ಹಲವಾರು ಶಿವಶರಣರು ಅವಿರತ ಶ್ರಮಿಸಿ, ಸಮಾನತೆಯ ಸಮಾಜ ನಿರ್ಮಿಸಿದರು.
21ನೇ ಶತಮಾನದಲ್ಲೂ ಕೂಡ ಬಸವ ಪರಂಪರೆಯನ್ನು ಅನುಸರಿಸಿ, ಅಣ್ಣನ ಕನಸುಗಳನ್ನು ನನಸು ಮಾಡಲು ತಾತ್ವಿಕ ಸಮಾಜದ ನಿರ್ಮಾಣಕ್ಕೆ ಕರ್ನಾಟಕದಲ್ಲಿ ಹಲವಾರು ಮಠಗಳು ಕಾರ್ಯಪ್ರವೃತ್ತವಾಗಿವೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ವಿರಕ್ತಮಠ ಬಸವ ತತ್ವದ ಪ್ರಚಾರದೊಂದಿಗೆ ಭಕ್ತರು ಸಮಾಜಮುಖಿ ಸೇವೆ ಮಾಡುತ್ತಾ, ಸ್ವಾಸ್ಥ್ಯ ಬದುಕನ್ನು ನಡೆಸಲು ಪ್ರೇರೇಪಿಸಿದೆ.
`ನ್ಯಾಯ, ನಿಷ್ಠೂರಿ ದಾಕ್ಷಿಣ್ಯಪರ ನಾನಲ್ಲ, ಲೋಕ ವಿರೋಧಿ ಶರಣನಾರಿಗೂ ಅಂಜುವುದಿಲ್ಲ’ ಎಂಬ ತತ್ವವನ್ನು ಮೈಗೂಡಿಸಿಕೊಂಡಿದ್ದ ಪೂಜ್ಯ ಸಂಗಮನಾಥ ಸ್ವಾಮೀಜಿ ನಾಡಿನ ನಾನಾ ಭಾಗಗಳಲ್ಲಿ ಸಂಚರಿಸಿ ಹರಪನಹಳ್ಳಿ ತಾಲ್ಲೂಕಿನ ಕಮ್ಮತ್ತಹಳ್ಳಿಯಲ್ಲಿ ಬಸವ ತತ್ವ ಪ್ರಚಾರ ಮಾಡಿ ನಂತರ ಚನ್ನಗಿರಿ ತಾಲ್ಲೂಕಿನ ಬಿಲ್ಲಹಳ್ಳಿಗೆ ಬಂದು ನೆಲೆಸುತ್ತಾರೆ. ಇಲ್ಲಿ ಒಂದು ಚಿಕ್ಕ ಮಠವನ್ನು ನಿರ್ಮಿಸಿ, ಸೇವಾ ಕೈಂಕರ್ಯದಲ್ಲಿರುವಾಗ ಚನ್ನಬಸವ ಶಿವಯೋಗಿಗಳನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುತ್ತಾರೆ. ಪೂಜ್ಯದ್ವಯರು ಧರ್ಮ ಪ್ರಚಾರದಲ್ಲಿ ನಿರತರಾಗಿದ್ದಾಗ ಪಾಂಡೋಮಟ್ಟಿಗೆ ಬಂದು ನೆಲೆಸುತ್ತಾರೆ. ಈ ಗ್ರಾಮದಲ್ಲಿ 1961ರ ಫೆಬ್ರವರಿ ತಿಂಗಳಲ್ಲಿ ಭಕ್ತರ ನೆರವಿನಿಂದ ವಿರಕ್ತಮಠ ನಿರ್ಮಾಣವಾಯಿತು.ಅಂದಿನಿಂದ ಪಾಂಡೋಮಟ್ಟಿ ಗ್ರಾಮ ಪೂಜ್ಯದ್ವಯರ ಪಾದಸ್ಪರ್ಶದಿಂದ ಪಾವನಮಟ್ಟಿಯಾಗಿ ಪರಿವರ್ತನೆಯಾಯಿತು. ಇಲ್ಲಿ ಶರಣ ತತ್ವವನ್ನು ಪ್ರಚಾರ ಮಾಡುವ ಏಕೋದ್ಧೇಶದಿಂದ ಪ್ರತಿ ತಿಂಗಳ 3ನೇ ಶನಿವಾರ ಶಿವಾನುಭವ ಗೋಷ್ಠಿಯನ್ನು ನಡೆಸಿಕೊಂಡು ಬರುತ್ತಿದ್ದು, ಇಲ್ಲಿಯವರೆಗೂ 867 ಮಾಸಿಕ ಶಿವಾನುಭವ ಕಾರ್ಯಕ್ರಮಗಳು ನಡೆದಿರುವುದು ದಾಖಲೆಯ ವಿಚಾರ. 1962ರಲ್ಲಿ ಪೂಜ್ಯ ಸಂಗಮನಾಥ ಸ್ವಾಮೀಜಿ ಲಿಂಗೈಕ್ಯರಾದ ತರುವಾಯ, ಪೂಜ್ಯ ಚನ್ನಬಸವ ಶಿವಯೋಗಿಗಳು ನಾಡಿನೆಲ್ಲೆಡೆ ಸಂಚರಿಸುತ್ತಾ ಧರ್ಮ ಪ್ರಚಾರ ಮಾಡತೊಡಗಿದರು.
`ಬೆಳಗುವ ಜ್ಯೋತಿಯ ತಿರುಳಿನಂತೆ ಹೊಳೆವ ಕಂಗಳ ಕಾಂತಿ
ಒಳಹೊರಗೆನ್ನದೆ ಅಳವಟ್ಟ ಶಿವಯೋಗಿಯ ಕಂಡೆನಾ
ನಿಜವುಂಡ ನಿರ್ಮಳದ ಘನವ ಕಂಡು
ಬೆರಗಾದೆನು, ಗುಹೇಶ್ವರ ಲಿಂಗದಲ್ಲಿ ಚೆನ್ನ
ಬಸವಣ್ಣನಿಂದ ನಾನು ಬದುಕಿದೆನು’
ದಯೆ ಧರ್ಮದ ಮೂಲವಾಗಬೇಕು, ಪ್ರೀತಿ-ಅಂತಃಕರಣ ಉಸಿರಾಗಬೇಕು, ವಾತ್ಸಲ್ಯ-ಮಮಕಾರವನ್ನು ಪ್ರತಿಯೊಬ್ಬ ವ್ಯಕ್ತಿಯೂ ಮೈಗೂಡಿಸಿಕೊಳ್ಳಬೇಕು, ಮಾನವ ಮಹಾತ್ಮನಾಗಬೇಕು ಆಗಮಾತ್ರ ಜೀವನ ಸಾರ್ಥಕ ಎನ್ನುವಂತೆ ಬದುಕಿ, ವರ್ಣಭೇದ ವರ್ಗಭೇದ, ವಯೋಭೇದ, ಜಾತಿಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸುತ್ತಾ ವ್ಯಕ್ತಿಗೆ ಮಾನ್ಯತೆಯನ್ನು ಕೊಡದೆ ತತ್ವಕ್ಕೆ ಮಾನ್ಯತೆ ಕೊಟ್ಟಿದ್ದ ಪೂಜ್ಯ ಶ್ರೀ ಸಂಗಮನಾಥ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಚನ್ನಬಸವ ಶಿವಯೋಗಿಗಳ ಸ್ಮರಣೋತ್ಸವ ಇಂದಿನಿಂದ ಮೂರು ದಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ನಡೆಯಲಿದೆ.
-ಎಂಬಂತೆ ಬದುಕಿದ ಪೂಜ್ಯ ಚನ್ನಬಸವ ಶಿವಯೋಗಿಗಳು ತಾವು ಬದುಕಿದ್ದ ಅವಧಿಯಲ್ಲಿ ಬಸವ ತತ್ವದಲ್ಲಿ ಮಿಂದು, ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸಿ, ನಡೆದಾಡುವ ದೇವರಾಗಿ ಕಂಗೊಳಿಸಿದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ತಮ್ಮ ಎಳೆಯ ವಯಸ್ಸಿನಲ್ಲಿ ಅಧ್ಯಾತ್ಮಿಕ ಚಿಂತನೆ ರೂಢಿಸಿಕೊಂಡು ಜೈನ ಸಾಹಿತ್ಯ, ವಚನ ಸಾಹಿತ್ಯದ ಆಳವಾದ ಅಧ್ಯಯನ ಮಾಡಿದ್ದರು. ತತ್ವಚಿಂತನೆ, ಸಾಹಿತ್ಯದ ಅಧ್ಯಯನ ಅವರ ಉಸಿರಾಗಿತ್ತು. ‘ಪ್ರಭುದೇವ ಲಿಂಗಜ್ಞಾನ ಸಾಹಿತ್ಯ ಮಾಲೆ’ ಅಡಿಯಲ್ಲಿ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿ ಸಹೃದಯರಿಗೆ ತಲುಪಿಸಿದ್ದಾರೆ. ಇದರ ಬೆಲೆ ಭಕ್ತಿಯಿಂದ ಓದಿ ಅನುಭಾವವನ್ನು ತಿಳಿದು ಆಚರಿಸುವುದೇ ಆಗಿದೆ ಎಂಬಲ್ಲಿ ಅವರ ಜ್ಞಾನದ ಪರಿಪೂರ್ಣತೆ ನಮಗೆ ಗೋಚರಿಸುತ್ತದೆ.
ಹಿರಿಯ ಪೂಜ್ಯರಾದ ಲಿಂ.ಸಂಗಮನಾಥ ಸ್ವಾಮೀಜಿಯ ಹೆಸರಿನಲ್ಲಿ ನೂರಾರು ತತ್ವಬದ್ಧವಾದ ಮೌಲ್ಯಗಳಿಂದ ಕೂಡಿದ ವಚನಗಳನ್ನು, ಷಟ್‍ಸ್ಥಲ ಪೂಜಾ ವಿಧಾನ, ಲಿಂಗವಂತರ ಆಚರಣೆಗಳು, ಬುದ್ಧಿಯ ಮಾತು, ಸ್ತ್ರೀ ನೀತಿ ಸಾರ, ಶಿವಾನುಭವ ಸೂತ್ರ, ವಚನಮಧು, ಬಸವ ಮಂತ್ರಸಾರ, ಚಿನ್ಮಯ ಜ್ಞಾನದೀಕ್ಷೆ, ಕರಣಹಸಿಗೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ವಚನಶಾಸ್ತ್ರ ಪಿತಾಮಹ ಫ.ಗು.ಹಳಕಟ್ಟಿಯವರು ಸಂಪಾದಿಸಿರುವ ಸಮಗ್ರ ವಚನಗಳನ್ನು ಅಧ್ಯಯನ ಮಾಡಿ, ಲಿಂಗಾಯತ ಧರ್ಮದ ತಿರುಳನ್ನು ಅರಿತು ಅಳವಡಿಸಿಕೊಂಡು ಶ್ರೀಮಠಕ್ಕೆ ಬರುತ್ತಿದ್ದ ಭಕ್ತವೃಂದಕ್ಕೆ ಬಹಳ ಕಳಕಳಿಯಿಂದ ತಿಳಿಸುತ್ತಿದ್ದರು. ಮೈಲಾರ ಬಸವಲಿಂಗ ಶರಣರು ರಚಿಸಿದ `ಗುರುಕರಣ ತ್ರಿವಿಧಿ’ಯನ್ನು ವ್ಯಾಖ್ಯಾನ ಸಹಿತ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಬಸವ ತತ್ವವನ್ನು ನಾಡಿನಾದ್ಯಂತ ಪ್ರಚಾರ ಮಾಡುತ್ತಾ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ, ಎನ್ನುವಂತೆ ಸದಾಕಾಲ ಕ್ರಿಯಾಶೀಲ ರಾಗಿದ್ದು, ಸರ್ವಸಮಾನತೆಯ ಪ್ರತಿಬಿಂಬದಂತಿದ್ದರು. ನಾಡಿನ ಹಲವಾರು ಮಠಗಳಿಗೆ ಸ್ವಾಮೀಜಿಗಳಾಗುವವರಿಗೆ ದೀಕ್ಷಾ ಸಂಸ್ಕಾರಕೊಟ್ಟ ಹಿರಿಮೆ ಪೂಜ್ಯರದ್ದು.
ಇವನಾರವ ಇವನಾರವ ಇವನಾರವ ನೆಂದೆನಿಸದೆ
ಇವನಮ್ಮವ ಇವನಮ್ಮವನೆಂದೆನಿಸಯ್ಯಾ
ಎಂಬ ವಚನದಂತೆ ದಯೆ ಧರ್ಮದ ಮೂಲವಾಗಬೇಕು, ಪ್ರೀತಿ-ಅಂತಃಕರಣ ಉಸಿರಾಗಬೇಕು, ವಾತ್ಸಲ್ಯ-ಮಮಕಾರವನ್ನು ಪ್ರತಿಯೊಬ್ಬ ವ್ಯಕ್ತಿಯೂ ಮೈಗೂಡಿಸಿಕೊಳ್ಳಬೇಕು, ಮಾನವ ಮಹಾತ್ಮನಾಗಬೇಕು. ಆಗ ಮಾತ್ರ ಜೀವನ ಸಾರ್ಥಕ ಎನ್ನುವಂತೆ ಬದುಕಿದರು. ವರ್ಣಭೇದ, ವರ್ಗಭೇದ, ವಯೋಭೇದ, ಜಾತಿಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸುತ್ತಿದ್ದರು. ವ್ಯಕ್ತಿಗೆ ಮಾನ್ಯತೆಯನ್ನು ಕೊಡದೆ ತತ್ವಕ್ಕೆ ಮಾನ್ಯತೆ ಕೊಟ್ಟಿದ್ದರು. ಭಕ್ತರಿಂದ ಕಾಣಿಕೆಯನ್ನು ಅಪೇಕ್ಷಿಸದೇ ಭಕ್ತರಿಗೆ ತೊಂದರೆಗೊಳಗಾದ ಭಕ್ತರಿಗೆ ಹಣ ನೀಡುತ್ತಿದ್ದ ಮೇರು ವ್ಯಕ್ತಿತ್ವ ಪೂಜ್ಯರದಾಗಿತ್ತು.
ಫಲವಿತ್ತರೆಂಬೆ ಬಾಗುತ್ತದೆ ಎನ್ನುವಂತೆ ಸದಾಕಾಲ ಬಾಗಿದ ತಲೆ, ಮುಗಿದ ಕೈಯಾಗಿರಿಸಿದಂತೆ ವಿನಯ ಗುಣವೇ ಮೈವೆತ್ತಂತೆ ಬಾಳಿದ ಪೂಜ್ಯರು ಕ್ರಿಯೆ ಜ್ಞಾನಗಳ ಸಾಕಾರ ಮೂರ್ತಿಗಳಾಗಿ, ನಾಡಿನಾದ್ಯಂತ ಹಲವಾರು ಭಕ್ತರಿಗೆ ನಡೆ ನುಡಿ ಕಲಿಸಿದರು. ತಂದೆ-ತಾಯಿಗಳಿಗೆ ಗೌರವ ಕೊಡಿ, ಪ್ರೀತಿ ವಿಶ್ವಾಸದಿಂದಿರಿ, ಇಷ್ಟಲಿಂಗ ಧಾರಣೆ ಮಾಡಿಕೊಳ್ಳಿ, ಭಸ್ಮಧರಿಸಿ ವಚನಗಳನ್ನು ಅಭ್ಯಾಸ ಮಾಡಿ ಎಂದು ತಿಳಿಸುತ್ತಾ ಮನುಷ್ಯ ಹೇಗೆ ಬಾಳಬೇಕೆಂದು ತೋರಿಸಿಕೊಟ್ಟರು. 93 ವರ್ಷಗಳ ಕಾಲ ಬದುಕಿ ಬಸವದೀಪ ಬೆಳಗಿದ ಶ್ರೀ ಗಳು ಉತ್ತಮ ಸಾಧನೆಯೊಂದಿಗೆ ಆಧ್ಯಾತ್ಮದ ಉತ್ತುಂಗ ಶಿಖರಕ್ಕೇರಿ ಭಕ್ತರ ಮನದಲ್ಲಿ ಇಂದಿಗೂ ನೆಲೆಸಿದ್ದಾರೆ.
ಭೂಮಿಯೊಳಗೆ ಬೀಜ ಬಿದ್ದಲ್ಲಿ ಕೆಟ್ಟಿತ್ತೆನಬೇಡ
ಮುಂದಣ ಫಲದೊಳಗರಸಿಕೊ
ಕಾಸಿ ಕರಗಿಸಿದ ಬಂಗಾರ ಕೆಟ್ಟಿತ್ತೆನಬೇಡ
ಮುಂದಣ ಬಣ್ಣದೊಳಗರಸಿಕೊ
ಹೊತ್ತಿಸಿದ ದೀಪ್ತಿ ಕೆಟ್ಟಿತ್ತೆನಬೇಡ
ಮುಂದಣ ಅಗ್ನಿಯೊಳಗರಸಿಕೋ.
ಎಂಬ ಚನ್ನಬಸವಣ್ಣನವರ ವಚನದಂತೆ ಹಿರಿಯ ಪೂಜ್ಯದ್ವಯರು ಬಿತ್ತಿದ ಬೆಳೆ ಈಗಿನ ವಿರಕ್ತಮಠದ ಸ್ವಾಮೀಜಿ ಗಳಾದ ಡಾ. ಗುರುಬಸವ ಶಿವಯೋಗಿಗಳ ರೂಪದಲ್ಲಿ ಭಕ್ತರಿಗೆ ತಲುಪುತ್ತಿದೆ. ಯಾವುದೇ ಜಾತಿ, ಪಂಗಡಗಳನ್ನು ಗಮನಿಸದೆ, ಎಲ್ಲರನ್ನು ಸಮಾನತೆಯ ಭಾವದಿಂದ ನೋಡುತ್ತಾ ಸಾಮಾಜಿಕ ವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕ ವಾಗಿ ಸೇವೆಯನ್ನು ಮುಂದುವರೆಸಿರುವ ಶ್ರೀ ಮಠ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನೈತಿಕ ತಳಹದಿಯ ಮೇಲೆ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಜ್ಞಾನ ದಾಸೋಹ ನೀಡುತ್ತಾ ಬಂದಿದೆ. ಪೂಜ್ಯ ಶ್ರೀ ಗುರುಬಸವ ಸ್ವಾಮೀಜಿಯವರು ನಾಡಿನ ಎಲ್ಲ ಕಡೆ ಬಸವ ತತ್ವವನ್ನು ಪ್ರಚಾರ ಮಾಡುತ್ತಾ ಹಿರಿಯ ಸ್ವಾಮೀಜಿಯವರ ಕನಸನ್ನು ನನಸುಗೊಳಿಸುತ್ತಿದ್ದಾರೆ. ಪೂಜ್ಯರ ಸಾನ್ನಿಧ್ಯದಲ್ಲಿ ಲಿಂಗೈಕ್ಯ ಸಂಗಮನಾಥ ಸ್ವಾಮೀಜಿಯವರ 63 ನೇ ಲಿಂ.ಚನ್ನಬಸವ ಶಿವಯೋಗಿಗಳ 18 ನೇ ಸ್ಮರಣೋತ್ಸವ ಹಾಗೂ ಬಸವ ತತ್ವ ಸಮ್ಮೇಳನ ಜನವರಿ 17 ರಿಂದ 19 ವರೆಗೆ ನಡೆಯಲಿದೆ.
ಈ ನಾಡಿನ ಬಿದಿರು ಕೊಳಲು ಆಗಲು
ಸೋರೆ ವೀಣೆಯಾಗಲು
ಉಕ್ಕು ಉಳಿಯಾಗಲು ಅಕ್ಕಿ ಅನ್ನವಾಗಲು
ಹತ್ತಿ ವಸ್ತ್ರವಾಗಲು ಸಂಸ್ಕೃತಿ ಉಳಿದು ಬೆಳೆಯಲು
ಬಸವ ತತ್ವದ ಹಣತೆ ಬೆಳಗಲು
ಗುರುವಿನ ಬೋಧನೆಯು ಅವಶ್ಯಕ
ಬನ್ನಿ ಬಸವ ದೀಪವನ್ನು ಮನೆ ಮನೆಗಳಲ್ಲಿ, ಭಕ್ತರ ಮನ ಮನಗಳಲ್ಲಿ ಹೊತ್ತಿಸಿದ ಪೂಜ್ಯದ್ವಯರಿಗೆ ನಾವೆಲ್ಲರೊಂದಾಗಿ ಭಕ್ತಿ ಪೂರ್ವಕ ನುಡಿ ನಮನ ಸಲ್ಲಿಸೋಣ.
– ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ.