ತೆರವುಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಆದೇಶಿಸಿದ್ದ ಜಿಲ್ಲಾಧಿಕಾರಿ
ದಾವಣಗೆರೆ, ಜ. 17- ನಗರದ ಸೌಂದರ್ಯಕ್ಕೆ ಧಕ್ಕೆಯಾಗಿದ್ದ, ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿದ್ದ ಎಲ್ಲಾ ಬೃಹತ್ ಫ್ಲೆಕ್ಸ್ ಹಾಗೂ ಹೋರ್ಡಿಂಗ್ಸ್ ತೆರವು ಕಾರ್ಯಾಚರಣೆ ಶುಕ್ರವಾರ ನಡೆದಿದೆ.
ಪಾಲಿಕೆ ಆಯುಕ್ತರ ಆದೇಶದ ಮೇರೆಗೆ ಬೆಳಿಗ್ಗೆ 6 ಗಂಟೆಯಿಂದಲೇ ನಾಲ್ಕು ತಂಡಗಳಿಂದ ನಗರದ ನಾಲ್ಕೂ ದಿಕ್ಕುಗಳಿಂದ ಹೋರ್ಡಿಂಗ್ಸ್ ತೆರವು ಆರಂಭವಾಯಿತು.
ಕ್ರೇನ್‌ಗಳನ್ನು ಬಳಸಿ ಅಕ್ರಮವಾಗಿ ಅಳವಡಿಸಲಾಗಿದ್ದ ಹೋರ್ಡಿಂಗ್ಸ್, ಫ್ಲೆಕ್ಸ್ ಗಳನ್ನು ತೆರವುಗೊಳಿಸಿ ಹೋರ್ಡಿಂಗ್ಸ್ ಬಳಸಲಾಗಿದ್ದ ಕಬ್ಬಿಣದ ಪರಿಕರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.
ಈ ವೇಳೆ ಫ್ಲೆಕ್ಸ್ ಹಾಗೂ ಹೋರ್ಡಿಂಗ್ಸ್ ಸಂಬಂಧಪಟ್ಟವರು, ತೆರವುಗೊಳಿಸದಂತೆ ಪಾಲಿಕೆ ಅಧಿಕಾರಿ ವರ್ಗಕ್ಕೆ ಮನವಿ ಮಾಡಿದರಾದರೂ, `ನಮ್ಮ ಆದೇಶ ನಾವು ಪಾಲಿಸುತ್ತಿದ್ದೇವೆ’ ಎಂಬ ಉತ್ತರ ಬರುತ್ತಿತ್ತು. ಪಾಲಿಕೆಯ ಮೂರು ವಲಯಗಳಲ್ಲೂ ತೆರವು ಕಾರ್ಯಾಚರಣೆ ಆರಂಭವಾಗಿತ್ತು. ಜನತೆ ತದೇಕಚಿತ್ತದಿಂದ ಈ ಕಾರ್ಯ ವೀಕ್ಷಿಸುತ್ತಿದ್ದರು.
ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಪರವಾನಿಗೆ ಪಡೆಯದೇ ಕಾನೂನು ಬಾಹಿರವಾಗಿ ಬೃಹತ್ ಗಾತ್ರದ ಜಾಹೀರಾತು ಹೋರ್ಡಿಂಗ್ಸ್ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಸಂಘ-ಸಂಸ್ಥೆಗಳೂ ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಈ ಬಗ್ಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಶೀಘ್ರವೇ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ತೆರವುಗೊಳಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದರು. ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆ, ದೂಡಾದಿಂದ ಅನುಮತಿ ಪಡೆಯದೇ, ಸುರಕ್ಷತಾ ಕ್ರಮ ಕೈಗೊಳ್ಳದೇ ಹೋರ್ಡಿಂಗ್ಸ್ ಮತ್ತು ಫ್ಲೆಕ್ಸ್ ಅಳವಡಿಸುವವರ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆಯೂ ಸೂಚಿಸಿದ್ದರು.
ಹೋರ್ಡಿಂಗ್ಸ್ ಸಂಘ ಆಕ್ರೋಶ
ನಗರದಲ್ಲಿ ಹೋರ್ಡಿಂಗ್ಸ್ ಅಸೋಸಿಯೇಷನ್ನಿಂದ ಅಧಿಕೃತ ವಾಗಿ ಅಳವಡಿಸಲಾಗಿದ್ದ ಹೋರ್ಡಿಂಗ್ಸ್ ತೆರವುಗೊಳಿಸಲಾಗಿದೆ ಎಂದು ದಾವಣಗೆರೆ ಹೋರ್ಡಿಂಗ್ಸ್ ಸಂಘದ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಆರೋಪಿಸಿದ್ದಾರೆ.
ಕಳೆದ 16 ವರ್ಷಗಳಿಂದ ಸಂಘದಿಂದ ಹೋರ್ಡಿಂಗ್ಸ್ ಅಳವಡಿಸುವ ಕೆಲಸ ಮಾಡಲಾಗುತ್ತಿತ್ತು. 2019ರವರೆಗೂ ಕಂದಾಯ ಕಟ್ಟುತ್ತಿದ್ದೆವು. ಪಾಲಿಕೆಯಿಂದ ತೆರಿಗೆ ನವೀಕರಿಸಿ ನಿರ್ಧರಿಸಬೇಕಿತ್ತು. ಈ ಬಗ್ಗೆ ನಾವೇ ಮನವಿಯನ್ನೂ ನೀಡಿದ್ದೆವು. ಇಲ್ಲಿಯವರೆಗೂ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದರು.
ಇಬ್ಬರು ಪಾಲಿಕೆ ಸದಸ್ಯರು ಗುಂಡಿ ವೃತ್ತದಲ್ಲಿ ಅನಧಿಕೃತವಾಗಿ ಹೋಲ್ಡಿಂಗ್ಸ್ ಅಳವಡಿಸಿದರು. ಇದನ್ನು ಬೇರೆ ಸದಸ್ಯರು ನಿನ್ನೆ ನಡೆದ ಸಾಮಾನ್ಯ ಸಭೆಯಲ್ಲೂ ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿಗಳೂ ಸಹ ಅನಧಿಕೃತ ಹೋರ್ಡಿಂಗ್ಸ್ ತೆರವಿಗೆ ಆದೇಶಿಸಿದ್ದಾರೆ. ಅನಧಿಕೃತ ತೆರವಿಗೆ ನಮ್ಮ ಆಕ್ಷೇಪವಿಲ್ಲ. ಆದರೆ ಅಧಿಕೃತ ಇದ್ದವನ್ನೂ ತೆಗೆಸಲಾಗಿದೆ ಎಂದರು.
ಸಂಜೆ ನಮ್ಮ ಸಂಘದಿಂದ ಅಳವಡಿಸಿದ್ದ ಹೋರ್ಡಿಂಗ್ಸ್ ಸಾಮಗ್ರಿಗಳನ್ನು ನಮಗೆ ಮರಳಿಸಿದ್ದಾರೆ. ಅನಧಿಕೃತವಾಗಿದ್ದವುಗಳನ್ನು ಪಾಲಿಕೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ನಗರದ ಸ್ವಚ್ಛತೆ ಹಿತದೃಷ್ಟಿಯಿಂದ ಎಲ್ಲವನ್ನೂ ತೆರವುಗೊಳಿಸುತ್ತಿರವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೂ ಸಹಕರಿಸಿದ್ದೇವೆ.
ಈ ಕುರಿತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನೂ ಸಂಪರ್ಕಿಸಿದ್ದೇವೆ. ನಗರಕ್ಕೆ ಬಂದ ಮೇಲೆ ಮಾತನಾಡೋಣ ಎಂದಿದ್ದಾರೆ. ಸಚಿವರು ಏನು ಹೇಳಿದರೂ ಅವರ ಮಾತಿಗೆ ಬದ್ಧರಾಗಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ಸಾರ್ವಜನಿಕ ರಸ್ತೆ, ಇತರೆ ಸ್ಥಳಗಳಲ್ಲಿ ಕಾನೂನುಬಾಹಿರವಾಗಿ ಯಾವುದೇ ಕಟ್ಟಡ ನಿರ್ಮಿಸುವುದು, ಅನಧಿಕೃತ ಕೆಲಸ ಮಾಡಬಾರದಂದು ನ್ಯಾಯಾಲಯ ಆದೇಶ ನೀಡಿದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂದಿಸಿದ ಮೊಕದ್ದಮೆಯಲ್ಲಿ ಹೈಕೋರ್ಟ್ ಬಿಬಿಎಂಪಿ ಗೆ ಸಂಬಂಧಿಸಿದಂತೆ ಹೋರ್ಡಿಂಗ್ಸ್ ಮತ್ತು ಜಾಹೀರಾತುಗಳನ್ನು ಪ್ರಚುರಪಡಿಸುವ ಬಗ್ಗೆ ಮತ್ತು ಅಕ್ರಮ ಜಾಹೀರಾತುಗಳನ್ನು ನಿಯಂತ್ರಿಸುವ ಸಂಬಂಧ ಸರ್ಕಾರ ಮತ್ತು ನಗರಾಭಿವೃದ್ಧಿ ಇಲಾಖೆಗೆ ಆದೇಶ ಸಹ ನೀಡಿದೆ. ಲೋಕಾಯುಕ್ತರು, ಉಪ ಲೋಕಾಯುಕ್ತರು ಸಹ ಅನೇಕ ಸೂಚನೆ, ಆದೇಶಗಳನ್ನು ಸರ್ಕಾರ, ನಗರಾಭಿವೃದ್ಧಿ ಇಲಾಖೆಗೆ ನೀಡಿದ್ದಾರೆ. ಕೆಲ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ಜಿಲ್ಲಾಧಿಕಾರಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು.
ನಗರದ ಕರ್ನಲ್ ಎಂ.ಬಿ.ರವೀಂದ್ರನಾಥ ವೃತ್ತ, ಶಾರದಾಂಬ ವೃತ್ತ, ಲಕ್ಷ್ಮೀ ಫ್ಲೋರ್‌ಮಿಲ್, ಶಾಬನೂರು ರಸ್ತೆ, ಡಾ.ಎಂ.ಸಿ.ಮೋದಿ ಸರ್ಕಲ್, ವಿದ್ಯಾರ್ಥಿ ಭವನ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್, ಹದಡಿ ರಸ್ತೆ, ಅರಸು ಸರ್ಕಲ್, ಅಶೋಕ ಥಿಯೇಟರ್, ನರಸರಾಜ ರಸ್ತೆ, ಪಾಲಿಕೆ, ಕಿತ್ತೂರು ಚನ್ನಮ್ಮ ವೃತ್ತ ಇತರೆಡೆ ಯಾವುದೇ ಪರವಾನಿಗೆ ಮತ್ತು ಅನುಮತಿ ಪಡೆಯದೇ ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಹೊರ್ಡಿಂಗ್ಸ್ ಅಳವಡಿಸಿರುವುದರಿಂದ ಮಹಾನಗರ ಪಾಲಿಕೆ ಮತ್ತು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿರುವುದು ಗಂಭೀರ ಸಂಗತಿ ಎಂದು ಅವರು ಹೇಳಿದ್ದರು.
ಹಸಿರು ನ್ಯಾಯಾಧೀಕರಣದ ಆದೇಶ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಸುವುದು, ಕೆಲ ಕಡೆ ಜಾಹೀರಾತು ಫಲಕ ಅಳವಡಿಸಲು ಮರ ಕಡಿಯುತ್ತಿರುವುದೂ ಸಹ ವರದಿಯಾಗಿದೆ. ಅಂತಹವರ ವಿರುದ್ಧ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದೇವೆ. ಇನ್ನು 15 ದಿನದೊಳಗಾಗಿ ನಗರ ಮತ್ತು ಇತರೆಡೆ ಅನಧಿಕೃತವಾಗಿ ಸಾರ್ವಜನಿಕ ಪಾದಚಾರಿ ಮಾರ್ಗ, ಸರ್ಕಲ್ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಅನಧೀಕೃತ ಪ್ಲೆಕ್ಸ್ ಮತ್ತು ಹೋರ್ಡಿಂಗ್ಸ್ ವಿವರ ಮತ್ತು ಅವುಗಳನ್ನು ತೆರವುಗೊಳಿಸಿರುವ ಛಾಯಾಚಿತ್ರಗಳೊಂದಿಗೆ ವರದಿ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ಈಗಾಗಲೇ ಅನಧಿಕೃತವಾಗಿ ಫ್ಲೆಕ್ಸ್, ಹೋರ್ಡಿಂಗ್ಸ್ ಅಳವಡಿಸಿರುವವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ವಹಿಸಬೇಕು. ಅಂತಹವರಿಗೆ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ದಂಡ ವಿಧಿಸಿ, ಅಷ್ಟೂ ಹಣ ವಸೂಲಿ ಮಾಡಬೇಕು. ಅನಧಿಕೃತ ವ್ಯಕ್ತಿಗಳಿಗೆ ಅನುಮತಿ ಮತ್ತು ಸಹಕರಿಸಿದ ಸರ್ಕಾರಿ ಅಧಿಕಾರಿಗಳ ಮೇಲೆಯೂ ಶಿಸ್ತು ಕ್ರಮ ಜರುಗಿಸಲು ಇಲಾಖೆ ವಿಚಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಗಂಗಾಧರಸ್ವಾಮಿ ಹೊರಡಿಸಿರುವ ಆದೇಶದಲ್ಲಿ ಸೂಚಿಸಿದ್ದರು.