ದೇವನಗರಿಯಲ್ಲಿ ಸಂಕ್ರಾಂತಿ ಸಂಭ್ರಮ

ದೇವನಗರಿಯಲ್ಲಿ ಸಂಕ್ರಾಂತಿ ಸಂಭ್ರಮ

ಎಳ್ಳು-ಬೆಲ್ಲ ಹಂಚಿ ಶುಭಾಶಯ, ಪಾರ್ಕ್‌ಗಳಲ್ಲಿ ಭರ್ಜರಿ ಭೋಜನ

ದಾವಣಗೆರೆ, ಜ.14- ಖಡಕ್ ರೊಟ್ಟಿ, ಚಪಾತಿ, ಪುಂಡಿ ಸೊಪ್ಪಿನ ಪಲ್ಯ, ಎಣಗಾಯಿ ಪಲ್ಯ, ಚಟ್ನಿ ಪುಡಿ, ಚಿತ್ರಾನ್ನ, ಸಿಹಿ ಪೊಂಗಲ್, ಮೊಸರನ್ನ ಬುತ್ತಿ ಇತ್ಯಾದಿ… 

ಕೇಳಿದರೆ ಬಾಯಲ್ಲಿ ನೀರೂರಿಸುವ ಖಾದ್ಯಗಳು. ಅದರಲ್ಲೂ ಪ್ರಕೃತಿಯ ಮಡಿಲಲ್ಲಿ ಕುಳಿತು, ಮಕ್ಕಳು, ಕುಟುಂಬದವರು, ಸ್ನೇಹಿತರು, ಭೋಜನ ಮಾಡುವುದೆಂದರೆ ಅದಕ್ಕಿಂತ ಸಂಭ್ರಮ ಪ್ರಾಯಶಃ ಮತ್ತೊಂದಿಲ್ಲ.

ನಗರದ ವಿಶ್ವೇಶ್ವರಯ್ಯ ಪಾರ್ಕ್‌, ಕಾಸಲ್‌ ಶೆಟ್ಟಿ ಪಾರ್ಕ್‌, ಡಾಂಗೆ ಪಾರ್ಕ್‌, ಮಾತೃಛಾಯಾ ಉದ್ಯಾನ, ಗಂಗೂಬಾಯಿ ಹಾನಗಲ್ ಪಾರ್ಕ್‌, ವಿದ್ಯಾನಗರದ ಮಕ್ಕಳ ಪಾರ್ಕ್, ಹಿರಿಯ ನಾಗರಿಕರ ಪಾರ್ಕ್, ಗಾಜಿನ ಮನೆ, ಜಯನಗರದ ಕದಂಬ ಪಾರ್ಕ್‌ಗಳು ಅಷ್ಟೇ ಅಲ್ಲ ನಗರಕ್ಕೆ ಸಮೀಪದ ಆನಗೋಡು ಉದ್ಯಾನವನ, ಕೊಂಡಜ್ಜಿ ಕೆರೆ, ಕುಂದುವಾಡ ಕೆರೆ, ದೇವರಬೆಳಕೆರೆ ಪಿಕ್‌ ಅಪ್‌, ಬಾತಿ ಗುಡ್ಡ ಹೀಗೆ ಎಲ್ಲೆಲ್ಲೂ ಸಂಕ್ರಾಂತಿ ಸಡಗರವೇ ಕಂಡು ಬಂತು.

ಜಿಲ್ಲೆಯಲ್ಲಿ ವರ್ಷದ ಪ್ರಥಮ ಹಬ್ಬವಾದ ಮಕರ ಸಂಕ್ರಾಂತಿಯನ್ನು ಜನರು ಸಡಗರ ಸಂಭ್ರಮದಿಂದ ಆಚರಿಸಿದರು. ಕುಟುಂಬದವರು, ಸ್ನೇಹಿತರೊಂದಿಗೆ ಬುತ್ತಿಯೂಟ ಸವಿದರು. ಉದ್ಯಾನವನಗಳಲ್ಲಿ ಮಕ್ಕಳದ್ದೇ ಕಲರವ. ಉಯ್ಯಾಲೆ, ಜಾರುಬಂಡಿ ಮೊದಲಾದ ಆಟವಾಡಿ ಮಕ್ಕಳು ಸಂಭ್ರಮಿಸಿದರು. ಕೆಲ ಪೋಷಕರು, ಸಾರ್ವಜನಿಕರು ಮಕ್ಕಳ ಸಂಭ್ರಮ ಕಣ್ತುಂಬಿಕೊಂಡರೆ, ಮತ್ತೆ ಕೆಲವರು ಮಕ್ಕಳ ಜೊತೆ ಮಕ್ಕಳಾಗಿ ಆಟೋಟಗಳಲ್ಲಿ ಪಾಲ್ಗೊಂಡು ಸಂತಸಗೊಂಡರು.

ಮನೆಗಳಲ್ಲಿ ಕಬ್ಬಿನ ತುಂಡು, ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳನ್ನು ದೇವರ ಮುಂದೆ ಇಟ್ಟು ವಿಶೇಷ ಪೂಜೆ ಮಾಡಿದರು.

ಬಳಿಕ ಮನೆಯ ಮಂದಿ, ಸಂಬಂಧಿಕರು ಹಾಗೂ ಸ್ನೇಹಿತರಿಗೆ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಒಣ ಕೊಬ್ಬರಿ, ಶೇಂಗಾ, ಹುರಿಗಡಲೆ, ಬೆಲ್ಲದ ಅಚ್ಚುಗಳ ಮಿಶ್ರಣವನ್ನು ಮೆಲ್ಲುತ್ತಾ ‘ಎಳ್ಳು-ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡಿ’ ಎಂದು ಶುಭ ಕೋರಿದರು.

error: Content is protected !!