ಗು. ರುದ್ರಯ್ಯ
ದಾವಣಗೆರೆ, ಜ. 12- ಅಹಲ್ಯಾಬಾಯಿ ಹೋಳ್ಕರ್‌ಗೆ ಪ್ರಜಾ ಕಲ್ಯಾಣ ಮುಖ್ಯ ಗುರಿಯಾಗಿತ್ತು. ಮಾಳವ ಪ್ರಾಂತ್ಯದ ರಾಣಿಯಾಗಿ, ಸಾಧ್ವಿಯಾಗಿ, ಸುಧಾರಕಳಾಗಿ, ಧರ್ಮನಿಷ್ಠಳಾಗಿ ಸಾಧನೆ ಮಾಡಿದ ಅಗ್ರಗಣ್ಯ ಮಹಿಳೆ ಎಂದು ಸಾಮರಸ್ಯ – ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಗು. ರುದ್ರಯ್ಯ ಸ್ಮರಿಸಿದರು. ಜಿಲ್ಲಾ ಸಾಮರಸ್ಯ ವೇದಿಕೆ ಲೋಕಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರ ತೃತೀಯ ಜನ್ಮ ಶತಮಾನೋತ್ಸವ ಸಮಿತಿ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಲೋಕಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರ 300 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ದೇಶದ ನಾರಿಶಕ್ತಿ ಅಹಲ್ಯಾಬಾಯಿ ಹೋಳ್ಕರ್ ಅವರನ್ನು ಪರಿಚಯಿಸಿ ಕೊಡುವ ಅಗತ್ಯವಿದೆ. ಅಹಲ್ಯಾಬಾಯಿ ಅವರ ಜೀವನದ ಯಶೋಗಾಥೆಯನ್ನು ಪ್ರತಿಯೊಬ್ಬರೂ ಸಹ ತಿಳಿಯಬೇಕಾಗಿದೆ ಎಂದರು.
ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ತನ್ಮೂಲಕ ಮಹಿಳಾ ಸಬಲೀಕರಣ ಸಾಧ್ಯವಾಗಿದೆ. ಆದರೆ ಪ್ರಾಚೀನ ಕಾಲದಲ್ಲೂ ಸಹ ಮಹಿಳೆ ಅತ್ಯಂತ ಸಬಲಳಾಗಿದ್ದಳು. ಕೌಟುಂಬಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಜೊತೆಗೆ ರಾಷ್ಟ್ರ ಕಾರ್ಯಗಳಲ್ಲಿ ಸಹ ತೊಡಗಿಸಿಕೊಂಡಿದ್ದನ್ನು ನಾವು ಕಾಣಬಹುದು. ತೊಟ್ಟಿಲ ತೂಗುವ ಕೈ ದೇಶವನ್ನು ಸಹ ಆಳ ಬಲ್ಲದು ಎಂಬುದನ್ನು ವೀರ ವನಿತೆಯರು ತೋರಿಸಿಕೊಟ್ಟಿದ್ದಾರೆಂದು ಹೇಳಿದರು.
ಅಹಲ್ಯಾಬಾಯಿ ಚಿಕ್ಕ ವಯಸ್ಸಿನಲ್ಲಿಯೇ ತನ್ನವರನ್ನು ಕಳೆದುಕೊಂಡಿದ್ದರೂ ಧೃತಿಗೆಡದೇ ಮಾಳವ ಪ್ರಾಂತದ ರಾಣಿಯಾಗಿ ಸಮರ್ಥ ಆಡಳಿತ ನೀಡಿ, ಪ್ರಜಾ ಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದರು.
ಶೈಕ್ಷಣಿಕ, ಅಧ್ಯಾತ್ಮಿಕ ಮತ್ತು ಕೈಗಾರಿಕಾ ಕ್ಷೇತ್ರದಲ್ಲೂ ಅಹಲ್ಯಾಬಾಯಿ ಅವರಿಗೆ ಇದ್ದ ದೂರದೃಷ್ಟಿ, ಬದ್ಧತೆ, ಕಾಳಜಿ ಇತರೆ
ಆಡಳಿತಗಾರರಿಗೆ ಮಾದರಿಯಾಗಿದೆ ಎಂದರು.
ಎರಡು ಶತಮಾನಗಳ ಹಿಂದೆಯೇ ಮಹಿಳೆಯರಿಗೆ ಯುದ್ಧ ನೈಪುಣ್ಯತೆಯ ತರಬೇತಿ ನೀಡಿ, ಸೈನ್ಯವನ್ನು ಸಂಘಟಿಸಿದ್ದರು. ಕುಲುಮೆಗಳನ್ನು ಸ್ಥಾಪಿಸುವ ಮೂಲಕ ಪುರುಷರಿಗೂ ಉದ್ಯೋಗ ಕಲ್ಪಿಸಿಕೊಟ್ಟಿದ್ದರು. ಆರ್ಥಿಕ ಸ್ವಾವಲಂಬನೆಗಾಗಿ ಅಂದು ಸ್ಥಾಪಿಸಿದ್ದ ಕೈಮಗ್ಗದ ಸೀರೆ ನೇಯ್ಗೆಯು ಇಂದಿಗೂ ಮಹೇಶ್ವರಿ ಬ್ರಾಂಡಿನ ಹೆಸರಿನಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಜನಶಿಕ್ಷಣ ಸಂಸ್ಥೆ ಛೇರ್ಮನ್ ಜಯಲಕ್ಷ್ಮೆ ಎಸ್.ಮೆಹರ್ವಾಡೆ ಮಾತನಾಡಿ, ಅಹಲ್ಯಾಬಾಯಿ ಅವರಿಗೆ ದೇಶ ಸೇವೆಯೇ ಪರಮ ಗುರಿಯಾಗಿತ್ತು. 300 ವರ್ಷಗಳು ಗತಿಸಿದರೂ ಸ್ಮರಿಸುವ ಕೆಲಸವನ್ನು ಮಾಡಿದ್ದಾರೆ. ಕೇವಲ ಸ್ವಾರ್ಥಕ್ಕಾಗಿ ಜೀವನ ಸಾಗಿಸದೇ ಸಮಾಜದ ಋಣ ತೀರಿಸುವ ಕೆಲಸವನ್ನು ಮಾಡಬೇಕೆಂದರು.
ಮಕ್ಕಳಿಗೆ ಕೇವಲ ಅಂಕ ಗಳಿಕೆಯ ಶಿಕ್ಷಣ ನೀಡದೇ ಸಂಸ್ಕೃತಿ, ಸಂಸ್ಕಾರ ನೀಡಬೇಕಾಗಿದೆ. ಮಕ್ಕಳಿಗೆ ಅಹಲ್ಯಾಬಾಯಿ ಅವರ ಧೀರತನ, ಸೇವಾ ಗುಣಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು.
ಲೋಕಮಾತಾ ಅಹಲ್ಯಾಬಾಯಿ ಹೋಳ್ಕರ್ ತ್ರಿಶತಾಬ್ದಿ ಜನ್ಮ ದಿನಾಚರಣೆ ಸಮಿತಿ ಪದಾಧಿಕಾರಿಗಳಾದ ಗೀತಾ ಬಾಲಚಂದ್ರ, ಶೋಭಾ ಕೊಟ್ರೇಶ್, ಅನಿತಾ ಪಟ್ಟಣಶೆಟ್ಟಿ, ವಿಜಯಲಕ್ಷ್ಮಿ ಹಿರೇಮಠ, ಡಾ.ಆರತಿ ಸುಂದರೇಶ್, ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.