ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಬೆಳವಣಿಗೆ ಶ್ರೀಪೀಠದ ಆದ್ಯ ಕರ್ತವ್ಯ : ಸಚಿವ ಪಾಟೀಲ್‌

ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಬೆಳವಣಿಗೆ ಶ್ರೀಪೀಠದ ಆದ್ಯ ಕರ್ತವ್ಯ : ಸಚಿವ ಪಾಟೀಲ್‌

ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ಹರ ಜಾತ್ರಾ ಮಹೋತ್ಸವ

ಹರಿಹರ,ಜ.14- ಸಮಾಜದ ಒಳಿತಿಗಾಗಿ ಮಠಗಳು ಏಷ್ಟೇ ಇರಲಿ, ಈ ಬಗ್ಗೆ ನಮ್ಮ ಆಕ್ಷೇಪವಾಗಲೀ, ತಕರಾರಾಗಲೀ ಇಲ್ಲ. ಆದರೆ ಸಮಾಜದಲ್ಲಿನ ಪ್ರತಿಭೆಗಳು ನಶಿಸಿ ಹೋಗದಂತೆ ಅವರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಬೆಳವಣಿಗೆಯಾಗುವಂತೆ ನೋಡಿಕೊಳ್ಳುವುದು ಶ್ರೀ ಪೀಠದ ಆದ್ಯ ಕರ್ತವ್ಯವಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ಅಭಿಪ್ರಾಯಪಟ್ಟರು.

ಹರಿಹರ ಸಮೀಪದ ಪಂಚಮಸಾಲಿ ಗುರುಪೀಠದ ಆವರಣ ದಲ್ಲಿ ನಡೆದ ಹರ ಜಾತ್ರಾ ಮಹೋತ್ಸವ, ರಾಣಿ ಚೆನ್ನಮ್ಮ ನವರ 200 ನೇ ವಿಜಯೋತ್ಸವ ಹಾಗೂ ಮಹಿಳಾ, ಯುವ ಘಟಕದ ಪದಗ್ರಹಣ ಮತ್ತು ವಚನಾನಂದ ಮಹಾಸ್ವಾಮಿಗಳ ಸಪ್ತಮ ಪೀಠಾರೋಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯೋಗ ಸಾಧನೆ ಮೂಲಕ ಖ್ಯಾತಿ ಪಡೆದಿರುವ ಶ್ರೀ ವಚನಾನಂದ ಸ್ವಾಮೀಜಿ ಪೀಠಾಧ್ಯಕ್ಷರಾಗಿ ಪಂಚಮಸಾಲಿ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವುದರಿಂದ  ಶ್ರೀಮಠ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ ಎಂದರು.

ಪೀಠದ ಅಭಿವೃದ್ಧಿಗಾಗಿ ಮತ್ತು ಸಮಾಜದ ಭವಿಷ್ಯದ ಹಿತದೃಷ್ಟಿಯಿಂದ ಹತ್ತು ಕೋಟಿ ರೂ. ಹಣ ಸಂಗ್ರಹಿಸಲು ಮುಂದಾಗಿರುವ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಮಾಜದಲ್ಲಿರುವ ಹಣವಂತರು ತಮ್ಮ ಶಕ್ತ್ಯಾನುಸಾರ  ಸಹಕರಿಸಿ, ತಮ್ಮ ಅಳಿಲು ಸೇವೆ ಸಲ್ಲಿಸಲು ಮುಂದಾದರೆ ಮಠವನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಅನುಕೂಲ ವಾಗುತ್ತದೆ ಎಂದರು.

ಸಮಾಜ ಮತ್ತು ಮಠ ಸದೃಢವಾಗಿ ಬೆಳೆಯಲು, ಅರ್ಬನ್ ಬ್ಯಾಂಕ್ ಅಸ್ತಿತ್ವಕ್ಕೆ ತರಲು ಶ್ರೀಪೀಠ ಮುಂದಾಗಲಿ. ಇದಕ್ಕಾಗಿ ನನ್ನ ಕಡೆಯಿಂದ 11 ಲಕ್ಷ ರೂ. ಷೇರು ನೀಡುವುದಾಗಿ ಹೇಳಿದ ಸಚಿವರು, ಬ್ಯಾಂಕ್ ಸ್ಥಾಪನೆಯಾದರೆ ಮಠವೂ ಉನ್ನತ ಮಟ್ಟಕ್ಕೆ ಬೆಳೆಯಲು ಕಾರಣವಾಗುತ್ತದೆ. ಇದರಿಂದ ವರ್ಷಕ್ಕೆ 20 ಕೋಟಿ ರೂ. ಆದಾಯ ಗಳಿಸಬಹುದು. ಇದಕ್ಕೆ ಸಮಾಜ ಪುಷ್ಠಿ ನೀಡಿದರೆ ಸಮಾಜದಲ್ಲಿನ ಬಡವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ಒಳಿತಾಗುತ್ತದೆ ಎಂದು ಹೇಳಿದರು.

ವಿಶೇಷವಾಗಿ ಮಹಿಳೆಯರು ಭವಿಷ್ಯದ ದೃಷ್ಟಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ರೀತಿಯಲ್ಲಿ ಸಾಗಬೇಕು. ಪಂಚಮಸಾಲಿ ಸಮಾಜದ ಜನಸಂಖ್ಯೆ ಹೆಚ್ಚಿದ್ದರೂ ಸಾಧನೆ ಕಡಿಮೆ ಆಗಿದೆ. ಇದಕ್ಕೆ ಕಾರಣ ಏನೆಂಬುದನ್ನು ಅರಿತು ಪೂರಕವಾದ ಬೆಳವಣಿಗೆಯ ಅಂಶಗಳನ್ನು ರೂಪಿಸಿದರೆ ಸಮಾಜಕ್ಕೆ ಶಕ್ತಿ ಬರುತ್ತದೆ. ಒಂದೇ ಸಮಾಜದವರಿಂದ ರಾಜಕೀಯವಾಗತಿ ಅಧಿಕಾರ ಪಡೆಯಲು ಸಾಧ್ಯವಿಲ್ಲ. ಸರ್ವ ಸಮುದಾಯದವರ ಮನ ಗೆದ್ದರೆ ಮಾತ್ರ ರಾಜಕೀಯ ನೇತಾರರಾಗಲು ಸಾಧ್ಯವಿದೆ. ಸಾಮರಸ್ಯದಿಂದ ಬದುಕಿದಾಗ ಸಮಾಜದ ಮುನ್ನಲೆಗೆ ಬರಬಹುದು ಎಂದರು.ಶಾಸಕ ಬಿ.ಪಿ. ಹರೀಶ್ ಮಾತನಾಡಿ, ನಾಡಿನ ಎಲ್ಲಾ ಮಠಗಳು ಸಹ ಆಯಾ ಸಮಾಜದ ಅಭಿವೃದ್ಧಿ ಪರ ಕೆಲಸ ಮಾಡುತ್ತಿವೆ. ಸರ್ಕಾರ ಮಾಡುವಂತಹ ಜನಪರ ಕಾರ್ಯಗಳನ್ನು ಮಠಗಳು ಮಾಡುತ್ತಾ ಬಂದಿವೆ. ಬಡವರ, ಆರ್ಥಿಕವಾಗಿ ಹಿಂದುಳಿದರ ಶೈಕ್ಷಣಿಕ ಏಳಿಗೆಗೆ ನಾಡಿನ ಮಠ, ಮಾನ್ಯಗಳ ಕೊಡುಗೆ ಅವಿಸ್ಮರಣೀ. ಈ ನಿಟ್ಟಿನಲ್ಲಿ ಪಂಚಮಸಾಲಿ ಪೀಠ ಪ್ರಗತಿಯತ್ತ ಸಾಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಹರ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸೋಮಣ್ಣ ಬೇವಿನಮರದ ಪ್ರಾಸ್ತಾವಿಕವಾಗಿ ಮಾತನಾಡಿ, ಪಂಚಮಸಾಲಿ ಸಮಾಜವು ರಾಜ್ಯದಲ್ಲಿ ಬಹಳ ಗಟ್ಟಿಯಾಗಿದೆ. ಒಕ್ಕಲುತನ ಸಮಾಜದ ವೃತ್ತಿಯಾಗಿದೆ.  ಮಹಿಳಾ ಘಟಕ ಮತ್ತು ಯುವ ಘಟಕದವರು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ರಾಣಿ ಚೆನ್ನಮ್ಮ ಸ್ಮರಣೆ ಅವಶ್ಯ. ಸಮಾಜದ ಬೆಳವಣಿಗೆಗೆ ಎಲ್ಲರೂ ಒಗ್ಗಟ್ಟಿನಿಂದ ದುಡಿಯೋಣ ಎಂದು ಹೇಳಿದರು.

ಆಡಳಿತಾಧಿಕಾರಿ ರಾಜಕುಮಾರ ಮಾತನಾಡಿ, ರಾಜ್ಯದ ಪಂಚಮಸಾಲಿ ಸಮಾಜದವರು ಒಂದೆಡೆ ಸೇರಿ ಶಿಕ್ಷಣ, ಉದ್ಯೋಗದ ಬಗ್ಗೆ ಚರ್ಚೆ ಮಾಡಲಿಕ್ಕೆ ಪ್ರತಿ ವರ್ಷ ಸೇರಬೇಕು ಎಂಬ ದೃಷ್ಟಿಯಿಂದ ಹರ ಜಾತ್ರೆ ಆಚರಣೆಗೆ ಮುಂದಾಗಿದೆ. ಪೀಠದ ಆವರಣದಲ್ಲಿ ಸುಮಾರು 20 ಕೋಟಿ ರೂ. ಕಾಮಗಾರಿ ನಡೆಯುತ್ತಿದ್ದು, ಅದಕ್ಕೆ ಭಕ್ತರು ಎಲ್ಲಾ ರೀತಿಯ ಸಹಕಾರ ನೀಡುವಂತೆ ಮತ್ತು ಎರಡು ರಾಷ್ಟ್ರೀಯ ಪಕ್ಷದವರು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದಕ್ಕೆ ಮುಂದಾಗುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಯು.ಬಿ ಬಣಕಾರ ಹಿರೆಕೆರೂರು ಮಾತನಾಡಿ, ಜಾತ್ರೆಯನ್ನು ಆಚರಣೆ ಮಾಡುವುದು ಧಾರ್ಮಿಕ ಸಂಗಮದ ಕಾರ್ಯವಾಗಿದೆ ಎಂದು ಹೇಳಿದರು. ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಮಹಾಸ್ವಾಮಿಗಳು, ಮಾಜಿ ಸಚಿವ ಶಂಕರ್ ಮಾನೇನಕೊಪ್ಪ, ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್, ಮಾಜಿ ಸಚಿವ ಮುರುಗೇಶ ನಿರಾಣಿ, ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಬಸವರಾಜ್ ದಿಂಡೂರು ಇತರರು ಮಾತನಾಡಿದರು.

ಇದೇ ವೇಳೆ ಸಮಾಜದ ಒಳಿತಿಗಾಗಿ ಶ್ರಮಿಸಿದ ಗಿರಿ ಮಲ್ಲೇಶ್, ಲಲಿತ ಪಾಟೀಲ್, ಸುಭಾಷ್ ಇತರರನ್ನು  ಗೌರವಿಸಿದರು, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಮತ್ತು ರಾಣಿ ಚೆನ್ನಮ್ಮ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. 

ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾಗಿ ವಸಂತ ಉಲ್ಲತ್ತಿ, ಪ್ರಧಾನ ಕಾರ್ಯದರ್ಶಿಯಾಗಿ ರಶ್ಮಿ ಕುಂಕದ, ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಕೊಟ್ರೇಶ್ ಕಿಚಡಿ, ಪ್ರಧಾನ ಕಾರ್ಯದರ್ಶಿಯಾಗಿ ಶೇಖರಪ್ಪ ಇತರರು ಪದಗ್ರಹಣ ಸ್ವೀಕರಿಸಿದರು. ಸಪ್ತಮ ಪೀಠಾರೋಹಣದ ಅಂಗವಾಗಿ ಶ್ರೀ ಪೀಠದ ವತಿಯಿಂದ ಶ್ರೀ ವಚನಾನಂದ ಮಹಾಸ್ವಾಮಿಗಳಿಗೆ ಪುಷ್ಪಾರ್ಚನೆ ಮಾಡಿ ಗೌರವಿಸಲಾಯಿತು. ಇದೇ ವೇಳೆ ಪಂಚಾವಾಣಿ ಮಾಸ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿ ಪುಟ್ಟಣ್ಣ ಶೆಟ್ಟಿ, ಧರ್ಮದರ್ಶಿ ಬಿ.ಸಿ. ಉಮಾಪತಿ,  ಪಿ.ಡಿ. ಶಿರೂರು, ಜ್ಯೋತಿ ಪ್ರಕಾಶ್ ಟ್ರಸ್ಟ್ ಗುರುಶಾಂತ್ ನಿರಾಣಿ, ಶ್ರೀಮಂತ ಹಿಂಡಿ,  ಯುವ ಘಟಕದ ರಾಜ್ಯ ಅಧ್ಯಕ್ಷ ಕಿಚಡಿ ಕೊಟ್ರೇಶ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತ ಉಲ್ಲತ್ತಿ, ಪ್ರಧಾನ ಕಾರ್ಯದರ್ಶಿ ರಶ್ಮಿ ಕುಂಕದ, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶೇಕರ್ ಮುತ್ಯನ, ದಾಸೋಹ ಸಮಿತಿಯ ರಾಜ್ಯ ಅಧ್ಯಕ್ಷ ವಕೀಲರು ಪ್ರಕಾಶ್ ಪಾಟೀಲ್, ಚಂದ್ರಶೇಖರ್ ಪೂಜಾರ್, ಹಾವೇರಿ ಕಡಕೋಳ, ಶ್ರೀಶೈಲ ಹಿಂಡಿ, ಗುತ್ತೂರು ಹಾಲೇಶ್ ಗೌಡ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಜೆ. ಶಿವಾನಂದಪ್ಪ, ಶಿವಣ್ಣ ಬಂಕಪುರ  ಇತರರು ಹಾಜರಿದ್ದರು, 

ದಾವಣಗೆರೆ ಮಹಿಳಾ ಘಟಕದವರು ಪ್ರಾರ್ಥಿಸಿದರು. ದಾಸೋಹ ಸಮಿತಿಯ ರಾಜ್ಯ ಅಧ್ಯಕ್ಷ ವಕೀಲ ಪ್ರಕಾಶ್ ಪಾಟೀಲ್ ನಿರೂಪಿಸಿ, ಸ್ವಾಗತಿಸಿದರು.

error: Content is protected !!