ಮಲೇಬೆನ್ನೂರು, ಜ.9- ರಾಜನ ಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಬರುವ ಫೆಬ್ರವರಿ 8 ಮತ್ತು 9 ರಂದು 7 ನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ಬಹಳ ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷರೂ ಆದ ಜಗಳೂರಿನ ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.
ಶ್ರೀಮಠದಲ್ಲಿ ಗುರುವಾರ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಮಠದ 27ನೇ ವಾರ್ಷಿಕೋತ್ಸವ, ಲಿಂಗೈಕ್ಯ ಪುಣ್ಯಾನಂದಪುರಿ ಶ್ರೀಗಳವರವರ 18ನೇ ಪುಣ್ಯಾರಾಧನೆ, ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರ 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮಗಳನ್ನು ಒಳಗೊಂಡ ಈ ಜಾತ್ರೆ ವೈಚಾರಿಕ ಜಾತ್ರೆಯಾಗಿ ನಡೆಯಲಿದೆ ಎಂದರು.
ಫೆಬ್ರವರಿ 8 ರ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ, 8-30 ಕ್ಕೆ ವಾಲ್ಮೀಕಿ ಧ್ವಜಾರೋಹಣ, 9 ಗಂಟೆಗೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವದ ಬಳಿಕ ಉದ್ಯೋಗ, ಕೃಷಿ ಮೇಳ ಉದ್ಘಾಟನೆಗೊಳ್ಳಲಿದೆ. 11-30 ಕ್ಕೆ ಮಹಿಳಾ ಗೋಷ್ಠಿ, ಮಧ್ಯಾಹ್ನ 2-30 ಕ್ಕೆ ನೌಕರರ ಗೋಷ್ಠಿ ಹಾಗೂ ಸಾಧಕರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಲಿದ್ದು, ಸಂಜೆ 6 ರಿಂದ ಸಂಘಟನಾ ಗೋಷ್ಠಿ ಮತ್ತು ರಾತ್ರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10 ರಿಂದ ವಾಲ್ಮೀಕಿ ವಿರಚಿತ `ಸಂಪೂರ್ಣ ರಾಮಾಯಣ’ ನಾಟಕ ಪ್ರದರ್ಶನವಿದೆ ಎಂದರು.
ಫೆಬ್ರವರಿ 9 ರ ಭಾನುವಾರ ಬೆಳಿಗ್ಗೆ 6ಕ್ಕೆ ಸ್ವಚ್ಚತಾ ಕಾರ್ಯ, 7 ರಿಂದ 8.30 ರವರೆಗೆ ಭಕ್ತರಿಗೆ ಗುರುಗಳ ದರ್ಶನ, 9ಕ್ಕೆ ನಾಡಿನ ಮಠಾಧೀಶರ ಸಮ್ಮುಖದಲ್ಲಿ ವಾಲ್ಮೀಕಿ ರಥೋತ್ಸವ, 9.30 ರಿಂದ ಧರ್ಮಸಭೆ, ಮಧ್ಯಾಹ್ನ 12.30 ಕ್ಕೆ ಬೃಹತ್ ಜನಜಾಗೃತಿ ಸಮಾವೇಶ ನಡೆ ಯಲಿದ್ದು, ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು ಉದ್ಘಾಟಿಸುವರು.
ಜಾತ್ರಾ ಸಮಿತಿಯ ಸಂಚಾಲಕರನ್ನಾಗಿ ಬಿಜೆಪಿ ಮುಖಂಡ ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಆಯ್ಕೆ ಮಾಡಿರುವುದಾಗಿ ಅವರು ಅವರು ಈ ವೇಳೆ ಪ್ರಕಟಿಸಿದರು.
ದಲಿತರಿಗೆ ಸಿಎಂ ಸ್ಥಾನ ಸಿಗಲಿ : ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡುವ ಆಗ್ರಹ ಈ ಬಾರಿಯ ಜಾತ್ರೆಯಲ್ಲಿ ಕೇಳಬರಲಿದೆಯೇ ? ಎಂಬ ಪತ್ರಕರ್ತರ ಪ್ರಶ್ನೆಗೆ, ದಲಿತ ವರ್ಗದವರನ್ನು ಸಿಎಂ ಮಾಡಬೇಕೆಂಬ ಚರ್ಚೆ ಇದೆ. ಸತೀಶ್ ಜಾರಕಿಹೊಳಿ ಅವರನ್ನು ಸಿಎಂ ಮಾಡಿದರೆ ನಾವು ಖುಷಿ ಪಡುತ್ತೇವೆ, ಸಿಎಂ ಮಾಡುವ ತೀರ್ಮಾನವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಶಾಸಕ ದೇವೇಂದ್ರಪ್ಪ ಪ್ರತಿಕ್ರಿಯಿಸಿದರು.
ಇದೇ ವೇಳೆ ಜಗಳೂರಿನಲ್ಲಿ ಜ.11 ಮತ್ತು 12 ರಂದು ನಡೆಯಲಿರುವ ದಾವಣಗೆರೆ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಎ.ಬಿ.ರಾಮಚಂದ್ರಪ್ಪ ಅವರನ್ನು ಶ್ರೀಗಳು ಸನ್ಮಾನಿಸಿ, ಗೌರವಿಸಿದರು.
ಮಠದ ಪೀಠಾಧಿಪತಿ ಡಾ. ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಮುಖಂಡರಾದ ಹೊದಿಗೆರೆ ರಮೇಶ್, ಕೆ.ಪಿ.ಪಾಲಯ್ಯ, ಪಾಲಿಕೆ ಮಾಜಿ ಮೇಯರ್ ವಿನಾಯಕ ಪೈಲ್ವಾನ್, ಮಠದ ಧರ್ಮದರ್ಶಿಗಳಾದ ಡಾ. ಜಿ. ರಂಗಯ್ಯ, ಬಿ. ವೀರಣ್ಣ, ನಲವಾಗಲು ನಾಗರಾಜಪ್ಪ, ಹೊಸಪೆಟೆ ಜಂಬಯ್ಯ ನಾಯಕ, ಹಾಸನದ ಮಹೇಶ, ಚಿತ್ರದುರ್ಗದ ತಿಪ್ಪೇಸ್ವಾಮಿ, ಲಿಂಗನಾಯಕನಹಳ್ಳಿ ತಿಪ್ಪೇಸ್ವಾಮಿ, ಹರಿಹರದ ಕೆ.ಬಿ.ಮಂಜಣ್ಣ, ಮುಖಂಡರಾದ ಜಿಗಳಿಯ ಜಿ. ಆನಂದಪ್ಪ, ಕೆ. ಆರ್. ರಂಗಪ್ಪ, ಜಿ. ಆರ್. ನಾಗರಾಜ್, ಕೊಕ್ಕನೂರು ಸೋಮಶೇಖರ್, ಹರಪನಹಳ್ಳಿಯ ಹೆಚ್.ಕೆ. ಹಾಲೇಶ್, ಹುಚ್ಚೆಂಗ್ಯೆಪ್ಪ, ಮಹಿಳಾ ಮುಖಂಡರಾದ ವಿಜಯಶ್ರೀ ಮಹೇಂದ್ರಕುಮಾರ್, ಪಾರ್ವತಿ ಬೋರಯ್ಯ, ಜಿಲ್ಲಾ ವಾಲ್ಮೀಕಿ ಯುವ ಘಟಕದ ಅಧ್ಯಕ್ಷ ತೋಟದ ಬಸವರಾಜ್, ಶಾಮನೂರು ಪ್ರವೀಣ್, ಫಣಿಯಾಪುರ ಲಿಂಗರಾಜ್, ಜಿಗಳಿ ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು.