ಸಮ್ಮೇಳನಕ್ಕೆ ಮಾಜಿ ಶಾಸಕರಿಗೂ ಆಹ್ವಾನವಿಲ್ಲ: ರಾಜೇಶ್ ಅಸಮಾಧಾನ
ನನ್ನನ್ನು ಕರೆದಿಲ್ಲ ಹಾಗಾಗಿ ಉದ್ಘಾಟನೆಗೆ ಬರಲ್ಲ. ಕನ್ನಡದ ತೇರು ಎಳೆಯಲು ಬರುತ್ತೇನೆ ಎಂದು ಎಚ್.ಪಿ.ರಾಜೇಶ್ ಹೇಳಿದರೆ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ ನನ್ನನ್ನು ಶಾಸಕರು ದೂರವಾಣಿ ಮೂಲಕ ಕರೆದಿದ್ದಾರೆ ಉದ್ಘಾಟನೆಗೆ ಹೋಗುತ್ತೇನೆ ಎಂದರು. ನನ್ನನ್ನು ಜಲೋತ್ಸವಕ್ಕೆ ಕರೆದಿಲ್ಲ. ನಮ್ಮ ಉದ್ದೇಶ ಜಗಳೂರಿಗೆ ನೀರು ಹರಿದರೆ ಸಾಕು ಎಂಬುದು ನಮ್ಮ ಉದ್ದೇಶವಾಗಿತ್ತು. ಕನ್ನಡ ಸಾಹಿತ್ಯ ಸಮ್ಮೇಳನ ಚನ್ನಾಗಿ ನಡೆಯಲಿ ಎಂದು ಹೇಳಿದರು.
ಜಗಳೂರು, ಜ.9- ಇದೇ ಜ.11 ಮತ್ತು 12 ರಂದು ಪಟ್ಟಣದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ 13 ರಂದು ನಡೆಯಲಿರುವ `ಜಗಳೂರು ಜಲೋತ್ಸವ’ ಶಾಸಕ ಬಿ.ದೇವೇಂದ್ರಪ್ಪ ಅವರ ಪ್ರಚಾರದ ಉತ್ಸವವಾಗಿದೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ನಿವಾಸದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಜನಪದ ವಿದ್ವಾಂಸರು, ಜನಪದ ತಜ್ಞರು, ಸಾಹಿತಿಗಳನ್ನು ಕರೆದಿಲ್ಲ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಹಿರಿಯ ಸಾಹಿತಿಗಳನ್ನೇ ಸಮ್ಮೇಳನಕ್ಕೆ ಆಹ್ವಾನಿಸಿಲ್ಲ. ಮಾಜಿ ಶಾಸಕನಾದ ನನ್ನನ್ನೇ ಆಹ್ವಾನಿಸಿಲ್ಲ. ತಾಲ್ಲೂಕು ಕಸಾಪ ಅಧ್ಯಕ್ಷರು ದೂರವಾಣಿ ಮೂಲಕ ಆಹ್ವಾನಿಸಿದ್ದಾರೆ. ಇದನ್ನೆಲ್ಲಾ ನೋಡಿ ದರೆ ಏನೂ ಸರಿಯಿಲ್ಲ ಎನಿಸುತ್ತಿದೆ ಎಂದರು.
ಸಾಹಿತ್ಯ ಸಮ್ಮೇಳನಕ್ಕೆ ಹಣ ಸಂಗ್ರಹಣಾ ವಿಷಯದಲ್ಲಿ ಶಿಕ್ಷಕರು, ಅಧಿಕಾರಿಗಳಿಂದ ಇಂತಿಷ್ಟು ಹಣ ಕೊಡಲೇ ಬೇಕು ಎಂದು ನಿಗದಿ ಮಾಡಿದ್ದಾರೆ. ಇದು ಶಾಸಕರಾದವರಿಗೆ, ಸಾಹಿತ್ಯ ಸಮ್ಮೇಳನಕ್ಕೆ ಶೋಭೆ ತರುವ ವಿಷಯವಲ್ಲ. ದೇಣಿಗೆ ತೆಗೆದುಕೊಳ್ಳಲಿ ಆದರೆ ಎಲ್ಲರನ್ನೂ ಕೇಳಲಿ. ಕನ್ನಡ ತೇರು ಎಳೆಯಲು ನಾವೆಲ್ಲ ಇದ್ದೇವೆ. ಸೌಜನ್ಯಕ್ಕಾದರೂ ಕರೆಯಬ ಹುದಿತ್ತು. ಸಮ್ಮೇಳನ, ಜಲೋತ್ಸವಕ್ಕೆ ನಮ್ಮ ಪಕ್ಷದವರು, ಮುಖಂಡರ ವಿರೋಧವಿಲ್ಲ. ಆದರೆ ರಿಪಬ್ಲಿಕ್ ಆಫ್ ಜಗಳೂರಿನಂತೆ ವರ್ತಿಸುತ್ತಿರುವುದು ಸರಿಯಲ್ಲ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಹೆಸರಿನಲ್ಲಿ ಶಾಸಕರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.
ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮಗೂ ಸಂತೋಷವಿದೆ. ಆದರೆ ನಡೆಯುತ್ತಿರುವ ಬೆಳವಣಿಗಳನ್ನು ಗಮನಿಸಿದರೆ ನಮಗೆ ಅಸಮಾಧಾನವಿದೆ. ಸಾಹಿತ್ಯ ಸಮ್ಮೇಳನದ ನೆಪದಲ್ಲಿ ವ್ಯಕ್ತಿಯನ್ನು ವೈಭವೀಕರಿಸುವುದು ಒಳ್ಳೆಯದಲ್ಲ. ಮೂರು ಜನ ಮಾಜಿ ಶಾಸಕರಿದ್ದೇವೆ. ಸೌಜನ್ಯಕ್ಕೂ ಮಾತನಾಡಿಸಿಲ್ಲ. ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ದೂರಿದರು.
ಪರಿಷತ್ ಅಧ್ಯಕ್ಷರು ನೆಪ ಮಾತ್ರ: ಜಿಲ್ಲಾ ಕಸಾಪ ಅಧ್ಯಕ್ಷ ವಾಪದೇವಪ್ಪ ಅವರು ನೆಪ ಮಾತ್ರ. ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಶಾಸಕ ದೇವೇಂದ್ರಪ್ಪ ಅವರು. ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿವೆ. ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಮೂಲ ಸೌಕರ್ಯಗಳು ಇಲ್ಲದೇ ಜನ ಬಳಲುತ್ತಿದ್ದಾರೆ. ಆದರೆ ಜಲೋತ್ಸವದ ನೆಪದಲ್ಲಿ ಹಣ ವಸೂಲಿ ಮಾಡಿ ವೈಭವೀಕರಿಸುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದರು.
57 ಕೆರೆ ತುಂಬಿಸುವ ಯೋಜನೆ ನಮ್ಮ ಅವಧಿಯಲ್ಲಿ ಅನುಷ್ಠಾನಕ್ಕೆ ಬಂತು. ರಾಮ ಚಂದ್ರ ಅವಧಿಯಲ್ಲಿ 650 ಕೋಟಿ ಹಣ ಬಿಡುಗಡೆಯಾಯಿತು. ಆದರೆ ಜಲೋತ್ಸವಕ್ಕೆ ಕಾರಣೀಭೂತರಾದ ನಮ್ಮನ್ನೇ ಕರೆದಿಲ್ಲ. ಸಿರಿಗೆರೆ ಶ್ರೀಗಳನ್ನು ಕರೆಯಬಹುದಿತ್ತು. ಅದರ ಬಗ್ಗೆ ನಮಗೆ ಮಾಹಿತಿಯೇ ಇಲ್ಲ ಎಂದರು.
ಶಾಸಕರದ್ದು ಏನೂ ನಡೆಯಲ್ಲ: ಶಾಸಕರ ಬದಲಾಗಿ ಅವರ ಮಗ ಎಂ.ಡಿ.ಕೀರ್ತಿಕುಮಾರ್ ಆಡಳಿತ ನಡೆಸುತ್ತಿದ್ದಾರೆ. ಶಾಸಕರ ಬದಲು ಶ್ಯಾಡೋ ಶಾಸಕನಂತೆ ಮಗ ಕೆಲಸ ಮಾಡುತ್ತಿದ್ದಾರೆ. ಮೊದಲು ರಿಪಬ್ಲಿಕ್ ಆಫ್ ಬಳ್ಳಾರಿ ಎನ್ನುತ್ತಿದ್ದರು. ಈಗ ರಿಪಬ್ಲಿಕ್ ಆಫ್ ಜಗಳೂರು ಆಗುತ್ತಿದೆ.
ವೈಯಕ್ತಿಕ ಪ್ರಚಾರಕ್ಕೆ ಸಾಹಿತ್ಯ ಸಮ್ಮೇಳನ, ಜಲೋತ್ಸವ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಹಣದಲ್ಲಿ ಕಲಾವಿದರಿಗೆ ಮ್ಯೂಸಿಕಲ್ ನೈಟ್‍ಗಾಗಿ ಲಕ್ಷಾಂತರೂ ಖರ್ಚು ಮಾಡುತ್ತಿದ್ದಾರೆ. ಇದು ಯಾರ ಹಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಜಿಪಂ ಮಾಜಿ ಅಧ್ಯಕ್ಷ ಸೊಕ್ಕೆ ನಾಗರಾಜ್ ಸೇರಿದಂತೆ ಅನೇಕ ಮುಖಂಡರು ಇದ್ದರು.