ಸಂಕ್ರಾಂತಿ ದಿನ ಸರಳ ಹರ ಜಾತ್ರೆ ಆಚರಣೆ

ಸಂಕ್ರಾಂತಿ ದಿನ ಸರಳ ಹರ ಜಾತ್ರೆ ಆಚರಣೆ

ಸೋಮಣ್ಣ ಹರಜಾತ್ರಾ ಸಮಿತಿ ಅಧ್ಯಕ್ಷ 

ಸಭೆಯಲ್ಲಿ ಕರ್ನಾಟಕ ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಅವರನ್ನು 2025 ರ ಹರಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ದಕ್ಷಿಣದಿಂದ ಉತ್ತಾರಾಯಣ ಪುಣ್ಯ ಕಾಲಕ್ಕೆ ಸೂರ್ಯ ಪಥ ಬದಲಿಸುವ ಮಕರ ಸಂಕ್ರಾಂತಿ ಹಬ್ಬದ ದಿನ ನಡೆಯುವ ಹರಜಾತ್ರೆಗೆ ಸಮಾಜ, ಹಾಗೂ ಎಲ್ಲ  ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಡಳಿತಾಧಿಕಾರಿ ಡಾ.ರಾಜಕುಮಾರ್ ಮನವಿ ಮಾಡಿದ್ದಾರೆ.

ದಾವಣಗೆರೆ, ಜ. 7- ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಮಕರ ಸಂಕ್ರಾಂತಿ ಹಬ್ಬದ ದಿನ ಶ್ರೀ ವಚನಾನಂದ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ಇದೇ ದಿನಾಂಕ 14 ರಂದು ಸರಳವಾಗಿ ಹರ ಜಾತ್ರೆ ಆಚರಿಸಲು ಸಮಾಜದವರು ತೀರ್ಮಾನಿಸಿದ್ದಾರೆ.

ಹರಿಹರದ ಪಂಚಮಸಾಲಿ ಪೀಠದಲ್ಲಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸೋಮವಾರ ಸಂಜೆ ನಡೆದ ಹರಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರು, ಧರ್ಮದರ್ಶಿಗಳು, ಭಕ್ತರು ಈ ಬಾರಿ ಸಾಂಪ್ರಾದಾಯಿಕವಾಗಿ ಒಂದು ದಿನ ಹರಜಾತ್ರೆ ನಡೆಸಲು ನಿರ್ಧರಿಸಿದ್ದಾರೆ ಎಂದು ಪೀಠದ ಆಡಳಿತಾಧಿಕಾರಿ  ಡಾ.ಎಚ್.ಪಿ.ರಾಜ್‌ಕುಮಾರ್ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹರ ಪೀಠದಲ್ಲಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿರುವುದು ಹಾಗೂ ಆರ್ಥಿಕ ಮುಗ್ಗಟ್ಟು ಕಾರಣದಿಂದ ಈ ಬಾರಿ ಸರಳವಾಗಿ ಹರ ಜಾತ್ರೆ ಆಚರಿಸಬೇಕೆಂದು ಸಮಾಜ ಮುಖಂಡರು, ಭಕ್ತರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಅದರಂತೆ ಈ ಬಾರಿ ಸಾಂಪ್ರಾದಾಯಿಕವಾಗಿ ಹರಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

ದ್ವಿಶತಮಾನ ವಿಜಯೋತ್ಸವ ವಿಶೇಷ : ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ವಿಜಯೋ ತ್ಸವದ ದ್ವಿಶತಮಾನೋತ್ಸವ ಆಚರಣೆ ಈ ಬಾರಿಯ 2025 ರ ಹರ ಜಾತ್ರೆಯ ಜಾತ್ರೆ ವಿಶೇಷವಾಗಿದೆ ಹಾಗೂ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರ ಸಪ್ತಮ (ಏಳನೇ) ವಾರ್ಷಿಕ ಪೀಠಾರೋಹಣ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡಿನ ಮಠಾಧೀಶರು, ಸಚಿವರು, ಶಾಸಕರು, ಗಣ್ಯರನ್ನು ಆಹ್ವಾನಿಸಲು ಪೂರ್ವಭಾವಿ ಸಭೆ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಧರ್ಮದರ್ಶಿ ಬಿ.ಸಿ. ಉಮಾಪತಿ, ಚಂದ್ರಶೇಖರ್ ಪೂಜಾರ್, ದಾಸೋಹ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಪಾಟೀಲ್,ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತಾ ಹುಲ್ಲತ್ತಿ, ಶೇಖರಗೌಡ ಮುತ್ತ್ಯಣ್ಣನವರ, ಪೀಠದ ಧರ್ಮದರ್ಶಿಗಳು, ಸಮಾಜದ ಮುಖಂಡರು, ಭಕ್ತರು ಇದ್ದರು.

error: Content is protected !!