ಸ್ಮಾರ್ಟ್‌ ಸಿಟಿ ಕಾಮಗಾರಿ ಪರಿಶೀಲಿಸಿದ ಸವಿತಾ ಗಣೇಶ್‌

ಸ್ಮಾರ್ಟ್‌ ಸಿಟಿ ಕಾಮಗಾರಿ ಪರಿಶೀಲಿಸಿದ ಸವಿತಾ ಗಣೇಶ್‌

ದಾವಣಗೆರೆ, ಜ. 7- ದಾವಣಗೆರೆ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿ ಪಡಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ಕೋರಿದ ಕಾಮಗಾರಿಗಳನ್ನು ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಲುಮನೆ ಗಣೇಶ್   ಪರಿಶೀಲನೆ ನಡೆಸಿದರು. 

ಪಾರ್ಕ್‌ಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಬಹುತೇಕ ಇ- ಟಾಯ್ಲೆಟ್‌ಗಳು ಸರಿಯಾದ ನಿರ್ವಹಣೆ ಇಲ್ಲದೆ ಸಾರ್ವಜನಿಕರ ಉಪಯೋಗಕ್ಕೆ ಬರದಂತಾಗಿವೆ ಮತ್ತು ಕಾರ್ಯ ನಿರ್ವಹಿಸದೆ ಇರುವ ಟಾಯ್ಲೆಟ್‌ಗಳನ್ನೂ ಕೂಡಲೇ ದುರಸ್ತಿಪಡಿಸಿ ಸರಿಯಾದ ನಿರ್ವಹಣೆಯ ವ್ಯವಸ್ಥೆಯೊಂದಿಗೆ ಹಸ್ತಾಂತರಿಸಲು ಸೂಚಿಸಿದರು. 

ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ರಾಜ ಕಾಲುವೆ ಕಾಮಗಾರಿ ವೀಕ್ಷಿಸಿ ಮಳೆ ನೀರು ಚರಂಡಿಗಳಲ್ಲಿರುವ ಹೂಳು ತೆಗೆಯಲು ಅಗತ್ಯ ಕ್ರಮ ಕೈಗೊಳ್ಳಲು ತಾಂತ್ರಿಕ ಅಭಿಯಂತರರಿಗೆ ಸೂಚನೆ ನೀಡಿದರು. 

ಜಿಲ್ಲಾ ಕ್ರೀಡಾಂಗಣದಲ್ಲಿ ಡಿಜಿಟಲ್ ಲೈಬ್ರರಿಗೆ ಭೇಟಿ ನೀಡಿ ಲೈಬ್ರರಿಯಲ್ಲಿ ಅಳವಡಿಸಿರುವ ಕಂಪ್ಯೂಟರ್ಸ್ ಮತ್ತು ಈ ಲೈಬ್ರರಿ ಅಪ್ಲಿಕೇಶನ್‌ನಲ್ಲಿರುವ ಪುಸ್ತಕಗಳನ್ನು ಪರಿಶೀಲಿಸಿ ಸಾರ್ವಜನಿಕರು ಇದರ ಉಪಯೋಗ ಪಡೆಯಲು ಹೆಚ್ಚು ಪ್ರಚಾರ ಮಾಡಲು ಮತ್ತು ಲೈಬ್ರರಿಯನ್ನು ಬಳಸುವ ವಿದ್ಯಾರ್ಥಿಗಳಿಗೆ ದೂರು ನೀಡಲು ಸಹಾಯವಾಣಿ ನಂಬರ್ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು.

ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿಗಳು  ಸೇರಿದಂತೆ ಪಾಲಿಕೆಯ ಬಹುತೇಕ  ವಾರ್ಡ್ ಗಳಲ್ಲಿ ಪಾಲಿಕೆ ಸದಸ್ಯರ ಮತ್ತು ಸಾರ್ವಜನಿಕರ ಮನವಿ ಮೇರೆಗೆ ಇತರೆ ಕಾಮಗಾರಿಗಳ ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ಇಟ್ಟಿಗುಡಿ ಮಂಜುನಾಥ್, ಪಾಲಿಕೆ ಸದಸ್ಯರಾದ ಜಾಕೀರ್ ಅಲಿ, ಮಂಜುನಾಥ್ ಗಡಿಗುಡಾಳ್,  ಕಬೀರ್ ಖಾನ್, ಮುಖಂಡರಾದ ಗಣೇಶ್ ಹುಲ್ಮನಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ವೀರೇಶ್ ಮತ್ತು ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಜರಿದ್ದರು.

error: Content is protected !!