ನಗರದ ಬಾಪೂಜಿ ಆಸ್ಪತ್ರೆಯಲ್ಲೀಗ ವಯಸ್ಕರ ಲಸಿಕಾ ಕೇಂದ್ರ

ದಾವಣಗೆರೆ, ಡಿ. 26- ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಲಸಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ವಯಸ್ಕರಲ್ಲಿ ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳು ಗಣನೀಯ ಪ್ರಮಾಣದಲ್ಲಿದ್ದು, ಅಧಿಕವಾದ ಸಾವು ನೋವುಗಳು ಈ ರೋಗಗಳಿಂದ ಸಂಭವಿಸುತ್ತವೆ. ವಯಸ್ಕರ ಲಸಿಕಾಕರಣವು ಭಾರತೀಯ ಆರೋಗ್ಯ ನೀತಿಯಲ್ಲಿ  ನಿರ್ಲಕ್ಷಕ್ಕೆ ಒಳಗಾಗಿ, ಕನಿಷ್ಠವಾಗಿ ಉಲ್ಲೇಖಿತವಾಗಿದೆ. 

ವಯೋವೃದ್ಧರು ಹಾಗೂ ದೀರ್ಘಕಾಲದ ರೋಗ ಗಳಿಂದ ಬಳಲುತ್ತಿರುವ ವಯಸ್ಕರಿಗೆ ಲಸಿಕೆಗಳನ್ನು ನೀಡುವುದರಿಂದ ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳನ್ನು ನಿಯಂತ್ರಿಸಬಹುದು. ಹೆಚ್.ಪಿ.ವಿ ಹಾಗು ಹೆಪಟೈಟಿಸ್.ಬಿ ಲಸಿಕೆ ನೀಡುವುದರಿಂದ ವೈರಸ್​ಗಳಿಂದ ಸಂಭವಿಸಬಹುದಾದ ಗರ್ಭಕಂಠದ ಕ್ಯಾನ್ಸರ್​, ಲಿವರ್​ ಕ್ಯಾನ್ಸರ್​ಗಳನ್ನು ತಡೆಗಟ್ಟಬಹುದು. 

ಈ ಹಿನ್ನೆಲೆಯಲ್ಲಿ ಗರ್ಭಕಂಠದ ಹಾಗೂ ಲಿವರ್ ಕ್ಯಾನ್ಸರ್ ತಡೆಗಟ್ಟಲು, ವಯೋವೃದ್ಧರು, ಮಧುಮೇಹ, ಲಿವರ್ ರೋಗ, ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ವಯಸ್ಕರು ಮತ್ತು ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳನ್ನು ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳಿಂದ ರಕ್ಷಿಸಲು ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಸಮುದಾಯ ವೈದ್ಯಕೀಯ ವಿಭಾಗದಡಿಯಲ್ಲಿ ವಯಸ್ಕರ ಲಸಿಕಾ ಕೇಂದ್ರವನ್ನು ಸ್ಥಾಪಿಸಲಾಗಿದೆ. 

ಈ ಲಸಿಕಾ ಕೇಂದ್ರದಲ್ಲಿ ಈಗಾಗಲೇ ಗರ್ಭಕಂಟದ ಕ್ಯಾನ್ಸರ್ ಅನ್ನು ತಡೆಗಟ್ಟಲು ಹೆಚ್.ಪಿ.ವಿ. ಲಸಿಕೆಯನ್ನು ನೀಡಲಾಗುತ್ತಿದೆ. ಈಗಾಗಲೇ ಸುಮಾರು 800 ಫಲಾನುಭವಿಗಳು ಈ ಲಸಿಕೆಯನ್ನು ಪಡೆದಿದ್ದಾರೆ. ಈ ಲಸಿಕೆಯನ್ನು 9 ವರ್ಷದ ಮಕ್ಕಳಿಂದ 45 ವರ್ಷದ ವಯಸ್ಕರಿಗೆ ನೀಡಬೇಕು. 9 ಮತ್ತು 14 ವರ್ಷದ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಎರಡು ಡೋಸ್‌ಗಳನ್ನು (5 ತಿಂಗಳ ಅಂತರದಲ್ಲಿ) ನೀಡಬೇಕು. 15 ಮತ್ತು 45 ವರ್ಷದ ಪುರುಷ ಮತ್ತು ಮಹಿಳೆಯರಿಗೆ ಮೂರು ಡೋಸ್‌ಗಳನ್ನು  (0,1,6 ತಿಂಗಳಲ್ಲಿ) ನೀಡಬೇಕು.

ಇನ್‌ಫ್ಲ್ಯೂಯೆನ್ಝ ಹಾಗೂ ನ್ಯುಮೋಕೊಕಲ್ ಲಸಿಕೆಗಳನ್ನು ನ್ಯುಮೋನಿಯಾವನ್ನು ತಡೆಗಟ್ಟಲು ನೀಡಲಾಗುತ್ತದೆ. 60 ವರ್ಷ ಮೇಲ್ಪಟ್ಟ ವಯೋವೃದ್ಧರು, ಮಧುಮೇಹ ರೋಗಿಗಳು, ರೋಗ ನಿರೋಧಕ ಶಕ್ತಿ ಕಡಿಮೆಯಿರುವವರು, ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆ ಹೊಂದಿದವರು, ಹಿಮೋಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳು, ಕ್ಯಾನ್ಸರ್ ರೋಗಿಗಳು ವರ್ಷಕ್ಕೊಮ್ಮೆ  ಇನ್‌ಫ್ಲ್ಯುಯೆನ್ಝ ಲಸಿಕೆಯನ್ನು ಪಡೆಯಬೇಕು.

ನ್ಯುಮೋಕೊಕಲ್ ಲಸಿಕೆಯನ್ನು ಮಧುಮೇಹ ರೋಗಿಗಳು, ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವವರು, ಹಿಮೊಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳು, ಸ್ಪ್ಲೀನೆಕ್ಟೊಮಿಗೆ ಒಳಗಾದ ರೋಗಿಗಳು ಪ್ರತಿ 5 ವರ್ಷಕ್ಕೊಮ್ಮೆ ಪಡೆಯಬೇಕು. ಹೊರ ದೇಶಕ್ಕೆ ಪ್ರಯಾಣ ಮಾಡುವವರಿಗೆ ಬೇಕಾಗುವ ಎಲ್ಲಾ ಲಸಿಕೆಗಳನ್ನು ಸಹ ಇಲ್ಲಿ ನೀಡಲಾಗುತ್ತದೆ.

ಬಾಪೂಜಿ ಹೊರ ರೋಗಿ ವಿಭಾಗದ 10ನೇ ಕೊಠಡಿಯಲ್ಲಿರುವ ವಯಸ್ಕರ ಲಸಿಕಾ ಕೇಂದ್ರದಲ್ಲಿ ಈ ಎಲ್ಲಾ ಲಸಿಕೆಗಳು ಲಭ್ಯವಿವೆ. ಪ್ರತಿ ತಿಂಗಳ ಎರಡನೇ ಶನಿವಾರ ಹೆಚ್.ಪಿ.ವಿ. ಲಸಿಕೆಯನ್ನು ನೀಡಲಾಗುತ್ತದೆ. 

ಹೆಚ್ಚಿನ ಮಾಹಿತಿಗಾಗಿ ಬಾಪೂಜಿ ಆಸ್ಪತ್ರೆ ಹೊರ ರೋಗಿ ವಿಭಾಗದಲ್ಲಿ ಸಂಪರ್ಕಿಸಬಹುದು.

error: Content is protected !!