ದಾವಣಗೆರೆ, ಡಿ. 26 – ನಗರ ದಲ್ಲಿ ಕೆಲವು ಆರ್.ಟಿ.ಐ. ಕಾರ್ಯ ಕರ್ತರು ಸರ್ಕಾರಿ ಇಲಾಖೆಯ ನೌಕರರುಗಳೊಂದಿಗೆ ಶಾಮೀಲಾಗಿ ನಗರದ ಪ್ರತಿಷ್ಠಿತ ಬಡಾವಣೆಗಳ ನಿವಾಸಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ವಿನಾಕಾರಣ ತೊಂದರೆ ಕೊಡುತ್ತಾ, ಹಣ ವಸೂಲಾತಿ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಜರುಗಿಸಿ ಸಾರ್ವಜನಿಕರಿಗೆ ಆಗುತ್ತಿರುವ ಮಾನಸಿಕ ಕಿರುಕುಳವನ್ನು ನಿವಾರಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮನವಿ ಮಾಡಿದರು.
ಕೆಲವು ಆರ್.ಟಿ.ಐ. ಕಾರ್ಯಕರ್ತರ ಹೆಸರಿನಲ್ಲಿ ನಗರದ ಪ್ರತಿಷ್ಠಿತ ವ್ಯಕ್ತಿಗಳಿಗೆ ನೀವು ನಿರ್ಮಿಸಿರುವ ಕಟ್ಟಡಗಳಿಗೆ ಪ್ಯಾಸೇಜ್ ಬಿಟ್ಟಿಲ್ಲ, ಜಾಗವನ್ನು ಅತಿಕ್ರಮಿಸಿಕೊಂಡಿದ್ದೀರಿ, ಕಟ್ಟಡ ನಿರ್ಮಿಸಲು ಲೈಸನ್ಸ್ ಪಡೆದುಕೊಂಡಿಲ್ಲ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ನೀವು ಶಾಲೆ ನಡೆಸಲು ಅನುಮತಿ ಪಡೆದಿಲ್ಲ, ಮಕ್ಕಳ ಸಂಖ್ಯೆ ಹೆಚ್ಚಾಗಿದೆ, ಶಿಕ್ಷಕರು ಸರಿಯಾದ ವಿದ್ಯಾರ್ಹತೆ ಹೊಂದಿಲ್ಲ, ದಾಖಲಾತಿಗಿಂತ ಹೆಚ್ಚಿನ ಮಕ್ಕಳನ್ನು ತೋರಿಸಿ ಸರ್ಕಾರದ ಹಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ ಎಂದು ಹೇಳುತ್ತಾ ಸರ್ಕಾರಿ ಕಛೇರಿಗಳ ಸಿಬ್ಬಂದಿಗಳೊಂದಿಗೆ ಶಾಮೀಲಾಗಿ ಸಾರ್ವಜನಿಕರಿಗೆ ವಿನಾಕಾರಣ ಮಾನಸಿಕ ಹಿಂಸೆ ನೀಡುತ್ತಾ, ಹಣಕ್ಕೆ ಬೇಡಿಕೆ ಇಡುತ್ತಾ, ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಆಗುತ್ತಿರುವ ಮಾನಸಿಕ ಕಿರುಕುಳವನ್ನು ತಪ್ಪಿಸ ಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್‌ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಸದಸ್ಯರಾದ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ್ ಜೊತೆಗಿದ್ದರು.