ಕಾಯಕ ತತ್ವ ಜಗತ್ತಿಗೇ ಸಾರಿದವರು ಶರಣರು

ಕಾಯಕ ತತ್ವ ಜಗತ್ತಿಗೇ ಸಾರಿದವರು ಶರಣರು

ದಾವಣಗೆರೆ, ಡಿ. 26 – ಶರಣ ಸಂಸ್ಕೃತಿ ಎಂದರೆ ಶರಣರು ಬದುಕಿ ದೈವತ್ವ ಪಡೆದ ಜೀವನ ವಿಧಾನ. ಶರಣರು ಶ್ರಮ ಸಂಸ್ಕೃತಿ ಹಾಗೂ ಉನ್ನತ ಚಿಂತನೆಯೊಂದಿಗೆ ಸರಳ ಜೀವನ ನಡೆಸುತ್ತಿದ್ದರು ಎಂದು ಸಿಂಗಟಗೆರೆ ಶ್ರೀ ಕಲ್ಲೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಜಿ.ವಿ. ಮಂಜುನಾಥ್ ಹೇಳಿದರು. 

ನಗರದ ಶ್ರೀ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿ ಶಿವಗೋಷ್ಠಿ ಸಮಿತಿ, ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪ ಹಾಗೂ ಸಾದರ ನೌಕರರ ಬಳಗ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿವಗೋಷ್ಠಿ-311 ಹಾಗೂ ಸ್ಮರಣೆ-88 ಮಾಸಿಕ ಕಾರ್ಯಕ್ರಮದಲ್ಲಿ `ಶರಣ ಸಂಸ್ಕೃತಿ’ ಕುರಿತು ಮಾತನಾಡಿದರು.

ಸರಳವಾಗಿ ಧರ್ಮವನ್ನು ವ್ಯಾಖ್ಯಾನಿಸಿದವರು ಶರಣರು. ಬೇರೆ ಯಾವ ಭಾಷೆ, ಧರ್ಮದಲ್ಲಿ ಕಾಣಲು ವಿರಳ. ಶರಣರ ವಚನಗಳು ಯಾರನ್ನೂ ಮೆಚ್ಚಿಸಲು ಬರೆದವಲ್ಲ. ಹನ್ನೆರಡನೇ ಶತಮಾನದಲ್ಲಿ ಬರೆದ ವಚನಗಳು ಅನುಭಾವದ ನುಡಿಗಳಾಗಿದ್ದವು ಎಂದರು.

ಭಕ್ತನಾಗುವುದಕ್ಕಿಂತ ಶರಣರಾಗುವುದೇ ಶ್ರೇಷ್ಠ ಎಂಬುದು ವಚನಕಾರರ ಅಭಿಮತ. ಶರಣರ ಆಚಾರ ವಿಚಾರ ನಡೆ, ನುಡಿಗಳನ್ನೇ ಶರಣ ಸಂಸ್ಕೃತಿ ಎನ್ನುತ್ತಾರೆ. ಕಾಯಕ, ದಾಸೋಹ, ಗುರು, ಲಿಂಗ, ಜಂಗಮ  ಎಂಬ ತತ್ವಗಳನ್ನು ಜಗತ್ತಿಗೆ ಸಾರಿದವರು ಶರಣರು ಎಂದು ಹೇಳಿದರು.

ನಡೆ-ನುಡಿಗಳಲ್ಲಿ ಅಂತರವಿರದ ಇವರ ಜೀವನದ ಆದರ್ಶಗಳೇ ಶರಣ ಸಂಸ್ಕೃತಿ. ಶರಣ ರು ರಚಿಸಿದ ವಚನ ಸಾಹಿತ್ಯವನ್ನೇ ಶರಣ ಸಂಸ್ಕೃತಿ ಎಂದು ಕರೆಯಬಹುದು. ಶರಣ ಸಾಹಿತ್ಯದಲ್ಲಿ ಶರಣ ಸಂಸ್ಕೃತಿಯನ್ನು ಕಾಣಬಹುದಾಗಿದೆ ಎಂದರು.

ಕಾಯಕ ಶರಣ ಸಂಸ್ಕೃತಿಯ ಪ್ರಧಾನ ಲಕ್ಷಣವಾಗಿದೆ. ಕಾಯಕ ನಿಷ್ಠೆಯ ಬಗ್ಗೆ ಯಾವ ಮತ ಧರ್ಮವೂ ಇಷ್ಟೊಂದು ಪ್ರಾಮುಖ್ಯತೆಯನ್ನು ಕೊಟ್ಟಿರಲಿಲ್ಲ ಎಂದು ಹೇಳಿದರು.

ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ್ರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣ ಸಂಸ್ಕೃತಿ ಯನ್ನು ಶಾಲಾ-ಕಾಲೇಜು ವಿದ್ಯಾರ್ಥಿ ಗಳಲ್ಲಿ ಬಿತ್ತುವ ಕೆಲಸ ಮಾಡುವುದು ಅಗತ್ಯ ಎಂದರು.

ಬಹುತೇಕ ಯುವಜನರು ಮೊಬೈಲ್ ದಾಸರಾಗಿ, ಸಂಸ್ಕೃತಿ, ಸಂಸ್ಕಾರವನ್ನು ಮರೆಯುತ್ತಿ ದ್ದಾರೆ. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕಾದ ಹೊಣೆಗಾರಿಕೆ ತಂದೆ-ತಾಯಿಗಳ ಮೇಲಿದೆ ಎಂದು ಹೇಳಿದರು.

ನಿವೃತ್ತ ಮುಖ್ಯೋಪಾಧ್ಯಾಯ ದಿ. ಕೆ. ಕೆಂಚನಗೌಡ ಅವರ ಸ್ಮರಣೆಯನ್ನು ನಿವೃತ್ತ ಶಿಕ್ಷಖ ಕ್ಯಾರಕಟ್ಟೆ ನಾಗಪ್ಪ ಅವರು ಮಾಡಿದರು. ನಿವೃತ್ತ ಪ್ರಾಧ್ಯಾಪಕ ಡಾ. ಬಸವರಾಜ ಬಣಕಾರ್ ಕೆಂಚನ ಗೌಡರ ಕುರಿತು ಅನುಭವ ಹಂಚಿಕೊಂಡರು.

ರತ್ನಮ್ಮ ಕೆಂಚನಗೌಡ್ರು, ಡಾ. ಸಂಗೀತ ಮಲ್ಲಿಕಾರ್ಜುನಗೌಡ, ಡಾ ಕೆ. ಮಲ್ಲಿಕಾರ್ಜುನ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಬಕ್ಕೇಶ್ವರ ರುದ್ರಾಣಿ, ಜಯಶ್ರೀ ಮತ್ತು ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು.

error: Content is protected !!