ಬಿಜೆಪಿಯಲ್ಲಿ ಒಳ ಒಪ್ಪಂದ ಮಾಡಿಕೊಂಡವರ ಹೆಸರು ಬಹಿರಂಗ ಪಡಿಸಿ : ಯಶವಂತರಾವ್‌

ದಾವಣಗೆರೆ, ಡಿ.24- ಜಿಲ್ಲೆಯಲ್ಲಿ  ಕಾಂಗ್ರೆಸ್-ಬಿಜೆಪಿ ನಡುವೆ ಒಳಒಪ್ಪಂದ ಆಗಿದೆ ಎಂಬ ಹೇಳಿಕೆಯನ್ನು ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ನೀಡಿದ್ದು, ಬಿಜೆಪಿಯಲ್ಲಿ ಯಾರು ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದನ್ನು ಹೆಸರು ಸಹಿತ ಬಹಿರಂಗ ಪಡಿಸಬೇಕೆಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಬಿಜೆಪಿಯ ಎಲ್ಲಾ ಮುಖಂಡರು, ಕಾರ್ಯಕರ್ತರು ಹೊಂದಾಣಿಕೆ ರಾಜಕೀಯ ಮಾಡುತ್ತಿಲ್ಲ. ನಿಮ್ಮ ಹೇಳಿಕೆ ಯಿಂದ ಜಿಲ್ಲೆಯ ಜನ ಬಿಜೆಪಿಯನ್ನು ಅನುಮಾನದಿಂದ ನೋಡುವ ಹಾಗೆ ಮಾಡುವುದು ಬೇಡ. ಆದ್ದರಿಂದ  ಕಾಂಗ್ರೆಸ್ ಸಚಿವರೊಂದಿಗೆ ಒಳ ಒಪ್ಪಂದ ಮಾಡಿಕೊಂಡ ಬಿಜೆಪಿಯ ಮುಖಂಡರು ಹಾಗೂ ಕಾರ್ಯ ಕರ್ತರು ಹೆಸರು ಬಹಿರಂಗಪಡಿಸಬೇಕು ಎಂದರು.

ಬಿಜೆಪಿಯಲ್ಲಿ ಕೆಲವರು ಸ್ವಪಕ್ಷಕ್ಕೆ ದ್ರೋಹ ಬಗೆದು ತಮಗೆ ತಾವೇ ಪ್ರಾಮಾಣಿಕರೆಂದು ತಾವೇ ಶಹಬ್ಬಾಸ್‌ಗಿರಿ ಪಡೆದುಕೊಳ್ಳುತ್ತಿದ್ದಾರೆ. ಅವರ ಮುಖವಾಡ ಕಳಚ ಬೇಕಾಗಿದೆ. ಪಕ್ಷದ ತತ್ವ ಸಿದ್ಧಾಂತ ಬಲಿಕೊಟ್ಟವರ ಬಣ್ಣ ಬಯಲು ಮಾಡಲು ಚನ್ನಗಿರಿ ಶಾಸಕರು ಹೆಸರು ತಿಳಿಸಬೇಕೆಂದರು.

ಬಿಜೆಪಿಯಲ್ಲಿ  ಕೆಲವರು ಹೆಳವರ ವೃತ್ತಿಯ ರೀತಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಹೆಳವರು ತಮ್ಮ ಹೊಟ್ಟೆಪಾಡಿಗಾಗಿ ಹಿಂದಿನದ್ದನ್ನು ತಿಳಿಸುವ ವೃತ್ತಿ ಮಾಡಿದರೆ, ಬಿಜೆಪಿಯಲ್ಲಿರುವ ಹೆಳವರು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಯಡಿಯೂರಪ್ಪ, ರವೀಂದ್ರನಾಥ್ ಅವರ ಬಗ್ಗೆ ಹೇಳಿ, ಅವರು ಹಾಗೆ ಪಕ್ಷ ಕಟ್ಟಿದರು, ಹೀಗೆ ಪಕ್ಷ ಕಟ್ಟಿದರು ಎನ್ನುತ್ತ ಹೊರಟಿದ್ದಾರೆ. ಹೀಗೆ ಹೇಳುವವರೆಲ್ಲ ಆಗ ಎಲ್ಲಿದ್ದರು ಎಂದು ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಸುಳ್ಳು ಬಹಳ ದಿನ ಉಳಿಯುವುದಿಲ್ಲ. ಬಯಲಿಗೆ ಬಂದೇ ಬರುತ್ತದೆ. ಒಮ್ಮೆ ಕಾಂಗ್ರೆಸ್‌ನ ಸಚಿವರೇ ತಮ್ಮ  ಬಿಜೆಪಿ ಮುಖಂಡರೋರ್ವರು ಬಂದಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇನ್ನೊಮ್ಮೆ  ಅವರೇ ಒಳ ಒಪ್ಪಂದ ಬಯಲಿಗೆಳೆ ಯುತ್ತಾರೆ ಎಂದು ಜಾಧವ್ ಹೇಳಿದರು.

ಅಣಬೇರು ಶಿವಮೂರ್ತಿ, ನೀಲಗುಂದ ರಾಜು, ಗೋವಿಂದರಾಜ್, ಟಿಂಕರ್ ಮಂಜಣ್ಣ, ಗುರು ಸೋಗಿ, ಶಿವನಗೌಡ ಪಾಟೀಲ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!