ದಾವಣಗೆರೆ, ಡಿ.24- ಇಲ್ಲಿನ ಕೆ.ಆರ್. ಮಾರುಕಟ್ಟೆ ಯಲ್ಲಿನ ಸೊಪ್ಪಿನ ಸಂತೆಯನ್ನು ಎ.ಪಿ.ಎಂ.ಸಿಗೆ ಸ್ಥಳಾಂತರ ಮಾಡುವುದರಿಂದ ಸೊಪ್ಪಿನ ಮಾರಾಟಗಾರರಿಗೆ ತೊಂದರೆ ಆಗಲಿದೆ ಎಂದು ಸಂಚಾರಿ ಸೊಪ್ಪಿನ ಗಾಡಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊಪ್ಪಿನ ಮಾರಾಟಗಾರರಲ್ಲಿ ಶೇ.80ರಷ್ಟು ಮಹಿಳೆಯರೇ ಇದ್ದು, ಇದರಲ್ಲಿ ವಯೋವೃದ್ಧರು ಹಾಗೂ ವಿಧವೆಯರು ಸೊಪ್ಪಿನ ವ್ಯಾಪಾರದಿಂದಲೇ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಮಾರುಕಟ್ಟೆ ಸ್ಥಳಾಂತರದಿಂದ ಇವರೆಲ್ಲರಿಗೂ ನಿತ್ಯ ತೊಂದರೆ ಆಗಲಿದೆ ಎಂದರು.
ಈಗಾಗಲೇ ಜಿಲ್ಲಾಧಿಕಾರಿಗಳು ಜ.10ರ ಒಳಗಾಗಿ ಸೊಪ್ಪಿನ ಮಾರುಕಟ್ಟೆ ಸ್ಥಳಾಂತರಿಸಲು ಗಡುವು ನೀಡಿದ್ದಾರೆ. ಪ್ರತಿ ನಿತ್ಯ ಐದಾರು ಕಿ.ಮೀ ಸಂಚರಿಸುವುದರಿಂದ ದುಡಿಮೆಗಿಂತ ಆಟೋ ವೆಚ್ಚವೇ ಹೆಚ್ಚಾಗುತ್ತದೆ ಎಂದು ತಮ್ಮ ಅಳಲು ತೋಡಿದರು.
ಸಚಿವರು ಹಾಗೂ ಅಧಿಕಾರಿಗಳು, ಸೊಪ್ಪಿನ ವ್ಯಾಪಾರಸ್ಥರ ಹಿತ ಕಾಪಾಡುವ ನಿಟ್ಟಿನಲ್ಲಿ ಪ್ರಸ್ತುತ ಸೂಚಿಸಿದ ಎತ್ತಿನ ಸಂತೆಯ ಸ್ಥಳ ಹೊರತು ಪಡಿಸಿ, ಪಾಲಿಕೆ ವ್ಯಾಪ್ತಿಯ ನಗರದ ಭಾಗದಲ್ಲೇ ಸೂಕ್ತ ಜಾಗ ಕಲ್ಪಿಸಬೇಕೆಂದು ಮನವಿ ಮಾಡಿದರು.
ತೆರವುಗೊಂಡ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಸೊಪ್ಪಿನ ವ್ಯಾಪಾರಸ್ಥರಿಗೆ ಸ್ಥಳಾವಕಾಶ ನೀಡಿದರೆ ಎಲ್ಲರಿಗೂ ಅನುಕೂಲ ಆಗಲಿದೆ ಎಂದು ಸಚಿವರಿಗೆ ವಿನಂತಿಸಿದರು.
ಈ ವೇಳೆ ಸಂಘದ ನಿರ್ದೇಶಕ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ಮಲ್ಲಪ್ಪ, ಸದಸ್ಯೆ ಹೊನ್ನಮ್ಮ, ನಿಂಗಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.