ರಾಣೇಬೆನ್ನೂರು, ಡಿ. 24 – ನೂರಾರು ಗ್ರಾಮಗಳ ಸಾವಿರಾರು ಭಕ್ತರ ಹೃದಯ ಮಂದಿರದಲ್ಲಿ ನೆಲೆಸಿರುವ ಮುಪ್ಪಿನಪ್ಪಜ್ಜನ ಐರಣಿಯ ಐರಾವತ ಕ್ಷೇತ್ರದ ಹೊಳೆ ಮಠಕ್ಕೆ ಮೂರನೇ ತಲೆಮಾರಿನ ಉತ್ತರಾಧಿಕಾರಿಯ ನೇಮಕವಾಗಿದ್ದು. ಫೆಬ್ರುವರಿ ತಿಂಗಳಲ್ಲಿ ಪಟ್ಟಾಭಿಷೇಕ ನಡೆಯಲಿದೆ. ಸಮಾರಂಭವನ್ನ ಸಡಗರ ಸಂಭ್ರಮದಿಂದ ಈಗಿನ ಪೀಠಾಧಿಪತಿ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ನಡೆಸಲಿದ್ದಾರೆ.
ಸಿದ್ಧಾರೂಢರ ಪಟ್ಟಾಭಿಷೇಕವು ಫೆಬ್ರವರಿ 8 ರಿಂದ 10 ರವರೆಗೆ ನಡೆಯಲಿದೆ. ಈ ಐತಿಹಾಸಿಕ ಸಮಾರಂಭಕ್ಕೆ ನಾಡಿನ ಪ್ರಮುಖ ಮಠಾಧೀಶರು, ಸಾದು, ಸಂತರು, ವಿವಿಧ ಗಣ್ಯರು, ಸರ್ವ ಧರ್ಮಗಳ ಅಸಂಖ್ಯಾತ ಭಕ್ತರು ಪಾಲ್ಗೊಳ್ಳುವರು ಎಂದು ಮಠದ ಸಂಚಾಲಕ ಬಾಬು ಶೆಟ್ಟರ ತಿಳಿಸಿದ್ದಾರೆ.
ಪೀಠಾಧಿಪತಿ ಬಸವರಾಜ ಶ್ರೀಗಳ ಆಶಯದ ಪರಿಶ್ರಮ, ಸಂಚಾಲಕ ಬಾಬು ಶೆಟ್ಟರ ಸೇವೆ, ಭಕ್ತರ ಮುಕ್ತ ಮನಸ್ಸಿನ ಸಹಾಯ ಹಾಗೂ ಸಹಕಾರದಿಂದ ಹೊಳೆಮಠದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ನಮ್ಮ ಮಠಕ್ಕೆ ಉತ್ತರಾಧಿಕಾರಿಯ ಅವಶ್ಯಕತೆ ಇದೆ ಎಂಬುದು ಬಹಳಷ್ಟು ಭಕ್ತರ ಮನದಾಳದ ಮಾತುಗಳಾಗಿದ್ದವೆಂದು, ಅವುಗಳನ್ನರಿತ ಬಸವರಾಜ ಶ್ರೀಗಳು ಉತ್ತರಾಧಿಕಾರಿಯ ನೇಮಕದೊಂದಿಗೆ ಭಕ್ತರ ಹೃದಯ ಗೆದ್ದರೆಂದು ಹೇಳಲಾಗುತ್ತಿದೆ.