ದಾವಣಗೆರೆ, ಡಿ. 24- ಭಕ್ತಿ, ನಿಷ್ಠೆ, ಪ್ರೀತಿಯಿಂದ ಮಾತ್ರ ಭಗವಂತನ, ಗುರುವಿನ ಅನುಗ್ರಹ ಸಾಧ್ಯವಿದೆ ಎಂದು ಸೋದೆ ಶ್ರೀಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಪ್ರತಿಪಾದಿ ಸಿದರು. ಇಲ್ಲಿನ ನಲ್ಲೂರು ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾ ಭವನ ದಲ್ಲಿ ದೈವಜ್ಞ ಬ್ರಾಹ್ಮ ಣರ ಶಿಷ್ಯವೃಂದದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳು ಆಶೀರ್ವಚನ ನೀಡಿದರು.
ಮನೆಯಲ್ಲಿ ಕುಟುಂಬ ಸದಸ್ಯರ ಮೇಲೆ ಹೇಗೆ ಪ್ರೀತಿ ತೋರುವಿರೋ ಅದೇ ರೀತಿ ಗುರು ಹಾಗೂ ದೇವರ ಮೇಲೂ ತೋರಿಸಬೇಕು. ಶ್ರದ್ಧಾ ಭಕ್ತಿಯಿಂದ ಭಗವಂತನ್ನು ಆರಾಧಿಸಬೇಕು ಎಂದು ಸ್ವಾಮೀಜಿ ಹೇಳಿದರು.
ಗಜೇಂದ್ರ ಮೋಕ್ಷ ಪೌರಾಣಿಕ ಕಥೆಯಲ್ಲಿ ಆನೆಯೊಂದರ ಕಾಲನ್ನು ಮೊಸಳೆ ಹಿಡಿದಿರುತ್ತದೆ. ಆಗ ಆನೆಯು ಕಾಪಾಡುವಂತೆ ಭಗವಂತನನ್ನು ನೆನೆಯುತ್ತದೆ. ತನ್ನ ವಾಹನವನ್ನೂ ಏರದೆ, ಭಗವಂತ ಅತಿ ಶೀಘ್ರದಲ್ಲಿ ಆಗಮಿಸಿ ಆನೆಗೆ ಮೋಕ್ಷ ನೀಡುತ್ತಾನೆ. ಹೀಗೆ ಭಗವಂತ ಬರಬೇಕಾದರೆ ಮನೆಸ್ಸಿನಲ್ಲಿ ದೃಢ ಭಕ್ತಿ ಇರಬೇಕು ಎಂದು ಉದಾಹರಿಸಿದರು.
ರೋಗಿಯೊಬ್ಬ ವೈದ್ಯರ ಬಳಿ ಹೋದಾಗ ಅವರು ನೀಡುವ ಔಷಧಿಯನ್ನು ವಿಶ್ವಾಸದಿಂದಲೇ ಹೇಗೆ ಸೇವಿಸುತ್ತಾನೋ. ಹಾಗೆಯೇ ದೇವರ ಮನೆ ವಿಶ್ವಾಸ ಹೊಂದಬೇಕು. ಈ ವಿಶ್ವಾಸವೇ ಸಂಕಷ್ಟಗಳಿಂದ ನಮ್ಮನ್ನು ಪಾರು ಮಾಡುತ್ತದೆ ಎಂದು ಹೇಳಿದರು.
ನಾವುಗಳು ಇಲ್ಲಿಗೆ ಬಂದಾಗ ಆದರ, ಭಕ್ತಿಯಿಂದ ಸತ್ಕರಿಸುತ್ತೀರಿ. ಹಾಗೆಯೇ ನೀವುಗಳೂ ಸಹ ಸೋದೆಗೆ ಆಗಮಿಸಬೇಕು. ಮನೆ ದೇವರು, ಗುರು ಮಠವನ್ನು ಎಂದಿಗೂ ಮರೆಯಬಾರದು. ಯಾವುದೇ ಮಠವು ಭಕ್ತರಿಂದ ಬೆಳ್ಳಿ, ಬಂಗಾರ ಹಣ ನಿರೀಕ್ಷಿಸುವುದಿಲ್ಲ. ಶ್ರದ್ಧೆ, ಭಕ್ತಿಯಿಂದ ಆಗಮಿಸಿ ಸೇವೆ ಮಾಡಬೇಕು ಎಂದರು.
ದೈವಜ್ಞ ಸಮಾಜದ ಮುಖಂಡರುಗಳಾದ ನಲ್ಲೂರು ಎಸ್.ರಾಜಕುಮಾರ್, ಪ್ರಕಾಶ್ ಎಲ್.ದೈವಜ್ಞ, ರಾಮದಾಸ್, ರಾಮಚಂದ್ರ ರಾಯ್ಕರ್, ಅಣ್ಣಪ್ಪ ಎ.ಶೇಠ್, ಚಿತ್ನಾಳ್ ಮಂಜುನಾಥ್, ಎಂ.ಜಿ.ಎಸ್. ಸುಬ್ಬರಾಯ, ಎಂ.ಜಿ.ಎಸ್. ಸುರೇಂದ್ರ, ಸತೀಶ್ ಭಟ್, ಗಣೇಶ್ ಬುರುಡೆ, ನಲ್ಲೂರು ಎಸ್. ರಾಘವೇಂದ್ರ ಇತರರು ಉಪಸ್ಥಿತರಿದ್ದರು.