ದಾವಣಗೆರೆ, ಡಿ. 24 – ಯುವ ಜನಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ನಡೆಸುವ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಬರುವ ಜನವರಿ 4 ಮತ್ತು 5 ರಿಂದ ನಗರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಯುವಜನೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಿನ್ನೆ ಏರ್ಪಾಡಾಗಿದ್ದ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಮಟ್ಟದ ಕಾರ್ಯಕ್ರಮ ಇದಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಯುವ ಸ್ಪರ್ಧಾಳುಗಳು ಭಾಗವಹಿಸುವರು. ಈ ಸ್ಪರ್ಧೆಯಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ವಿಜ್ಞಾನ ವಸ್ತು ಪ್ರದರ್ಶನ, ಕವನ ರಚನೆ, ಪ್ರಬಂಧ, ಕಥೆ ಬರೆಯುವುದು, ಚಿತ್ರಕಲೆ, ಘೋಷಣಾ ಸ್ಪರ್ಧೆಗಳು ನಡೆಯಲಿವೆ.
ನಗರದ ಬಿಐಇಟಿ ಕಾಲೇಜಿನ ಎಸ್.ಎಸ್.ಎಂ ಸಾಂಸ್ಕೃತಿಕ ಭವನ, ಬಾಪೂಜಿ ಎಂ.ಬಿ.ಎ. ಕಾಲೇಜು ಸಭಾಂಗಣ, ಎಂಬಿಎ ಮೈದಾನದ ಎಸ್.ಎಸ್.ನ್ಯಾಷನಲ್ ಪಬ್ಲಿಕ್ ಸ್ಕೂಲ್, ಎಂ.ಬಿ.ಎ ಕಾಲೇಜಿನ ಕೊಠಡಿ, ಲಲಿತ ಕಲಾ ಮಹಾವಿದ್ಯಾಲಯ ಸೇರಿದಂತೆ ಎಂಬಿಎ ಮೈದಾನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಸಮಿತಿಗಳ ರಚನೆ : ರಾಜ್ಯ ಮಟ್ಟದ ಯುವ ಜನೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಿದ್ದತೆಗಾಗಿ ವೇದಿಕೆ, ಸಾಂಸ್ಕೃತಿಕ, ಸಾರಿಗೆ, ಪ್ರಚಾರ, ವಸತಿ, ಸ್ವಾಗತ, ನೋಂದಣಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ಸಮಿತಿಗಳು ಸಿದ್ದತೆ ನಡೆಸಿದ್ದು ಆದಷ್ಟು ಬೇಗ ಕಾರ್ಯಕ್ರಮದ ಲಾಂಛನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.
ರಾಜ್ಯ ಮಟ್ಟದ ಕಾರ್ಯಕ್ರಮ ಇದಾಗಿರುವು ದರಿಂದ ಶಿಷ್ಟಾಚಾರದನ್ವಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಕಾರ್ಯಕ್ರಮ ವೀಕ್ಷಣೆಗಾಗಿ ನಗರ ಸಾರಿಗೆಯಿಂದ ಬಸ್ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪಾಲಿಕೆ ಆಯುಕ್ತ ರೇಣುಕಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.