ಅಮಿತ್ ಷಾ ವಜಾಗೊಳಿಸಲು ಜಿಲ್ಲಾ ಕಾಂಗ್ರೆಸ್ ಆಗ್ರಹ

ಅಮಿತ್ ಷಾ ವಜಾಗೊಳಿಸಲು ಜಿಲ್ಲಾ ಕಾಂಗ್ರೆಸ್ ಆಗ್ರಹ

ದಾವಣಗೆರೆ, ಡಿ.24- ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ಅವರನ್ನು ಅವಮಾನಿಸಿದ ಅಮಿತ್‌ ಷಾ, ಕೂಡಲೇ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು, ಮಹಿಳಾ ಕಾರ್ಯಕರ್ತೆಯರು ಹಾಗೂ ದಲಿತ ಸಮಾಜ ಸಂಘಟನೆ, ಮುಖಂಡರು ಕೇಂದ್ರ ಗೃಹ ಸಚಿವರ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.

ಇದೇ ವೇಳೆ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹೆಚ್‌.ಬಿ. ಮಂಜಪ್ಪ ಹಾಗೂ ಮೇಯರ್‌ ಕೆ. ಚಮನ್‌ಸಾಬ್‌ ಅವರು ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಪ್ರಭಾ ಮಲ್ಲಿಕಾರ್ಜುನ್ ಅವರು, ಕಳೆದ ನ.26ನೇ ತಾರೀಖಿನಂದು ಸಂವಿಧಾನದ 75ನೇ ವರ್ಷದ ದಿನ ಆಚರಿಸಿದ್ದೇವೆ. ಇಂತಹ ಸುಸಂದರ್ಭದಲ್ಲಿ ರಾಜ್ಯಭವನದಲ್ಲಿ ಸಂವಿಧಾನ ಶಿಲ್ಪಿಗೆ ಅವಮಾನಿಸಿದ್ದನ್ನು  ಗಂಭೀರವಾಗಿ ಖಂಡಿಸುತ್ತೇನೆ ಎಂದರು.

ಸಮಾಜದಲ್ಲಿನ ಎಲ್ಲರಿಗೂ ಸಮಾನತೆ ಹಾಗೂ ಸಮಾನ ಹಕ್ಕು ಕೊಟ್ಟಿರುವುದೇ ಅಂಬೇಡ್ಕರ್‌ ಬರೆದ ಸಂವಿಧಾನ. ಆದರೆ ಅಮಿತ್‌ ಷಾ ಅವರು ಸಂವಿಧಾನ ಶಿಲ್ಪಿಗೆ ಅವಮಾನಿಸುವ ಕಾರ್ಯಮಾಡಿದ್ದಾರೆ. ಹಾಗಾಗಿ ಷಾ ಅವರು ಕೂಡಲೇ ತಮ್ಮ ಕೇಂದ್ರ ಸಚಿವ ಸಂಪುಟಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್‌, ಅಂಬೇಡ್ಕರ್‌ ಎಂದು ಐದು ಬಾರಿ ಅವರ ಹೆಸರನ್ನು ಅವಮಾನಿಸುವ ರೀತಿಯಲ್ಲಿ ಉಚ್ಛಾರ ಮಾಡಿದ್ದಾರೆ. ಹಾಗಾಗಿ ದೇಶದ ಜನತೆಯ ಮುಂದೆ ಅವರು ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಹಾಗೂ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.

ಜಿಲ್ಲಾಧ್ಯಕ್ಷ ಹೆಚ್‌.ಬಿ. ಮಂಜಪ್ಪ ಮಾತನಾಡಿ, ಅಮಿತ್‌ ಷಾ ಅಂಬೇಡ್ಕರ್‌ ಅವರ ಬಗ್ಗೆ ಅಗೌರವ ತೋರಿದ್ದಾರೆ. ಹಾಗಾಗಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯವರು ಹಿಂದಿನಿಂದಲೂ ಅಂಬೇಡ್ಕರ್‌ ಅವರನ್ನು ವಿರೋಧ ಮಾಡುತ್ತಲೇ ಬಂದಿದ್ದಾರೆ. ಇವರಿಗೆ ಸಂವಿಧಾನ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಬಗ್ಗೆ ಗೌರವವಿಲ್ಲ. ಜನಗಳ ಮಧ್ಯೆ ಜಾತಿ ವಿಷ ಬೀಜ ಬಿತ್ತಿ ಜಗಳ ಹಚ್ಚುತ್ತಿದ್ದಾರೆ. ಇಂತಹ ಪಕ್ಷವನ್ನು ರಾಜ್ಯದಿಂದ ಓಡಿಸಿದ್ದೇವೆ. ಕೇಂದ್ರದಲ್ಲೂ ಈ ಪಕ್ಷವನ್ನು ಜನರು ತಿರಸ್ಕರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೂಡಾ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ, ಪಾಲಿಕೆ  ಉಪಮೇಯರ್‌ ಸೋಗಿ ಶಾಂತ ಕುಮಾರ್‌, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಆರ್. ಪರಮೇಶ್, ಮುಖಂಡರುಗಳಾದ ನಂದಿಗಾವಿ ಶ್ರೀನಿವಾಸ್‌, ಕೆ.ಜಿ. ಶಿವಕುಮಾರ್‌, ಎ. ನಾಗರಾಜ್‌, ಗಡಿಗುಡಾಳ್‌ ಮಂಜುನಾಥ್‌, ಡೊಲಿ ಚಂದ್ರು, ಅನಿತಾಬಾಯಿ, ಆಶಾ ಉಮೇಶ್‌, ಸುಧಾ ಇಟ್ಟಿಗುಡಿ, ಮೀನಾಕ್ಷಿ ಜಗದೀಶ್‌, ಅಬ್ದುಲ್‌ ಲತೀಫ್‌ ಹಾಗೂ ದಾಕ್ಷಾಯಿಣಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!